ಬ್ರಸ್ಸೆಲ್ಸ್: ಉಕ್ರೇನೊಂದಿಗೆ (Ukraine) ಎದುರಾಗಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸಲು ನೆರವಾಗುವ ಭದ್ರತಾ ವಿಷಯಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ (western countries) ಚರ್ಚಿಸಲು ತಾನು ಸಿದ್ಧನಿರುವುದಾಗಿ ರಷ್ಯಾದ (Russia) ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಮಂಗಳವಾರ ಹೇಳಿದರು. ‘ತಲೆದೋರಿರುವ ಪಕ್ಷುಬ್ಧ ಸ್ಥಿತಿಯನ್ನು ಹೋಗಲಾಡಿಸುವ ದಿಶೆಯಲ್ಲಿ ಪಶ್ಚಿಮದ ರಾಷ್ಟ್ರಗಳೊಂದಿಗೆ ಜೊತೆಯಾಗಿ ಕೆಲಸ ಮಾಡಲು ನಾವು ತಯಾರಿದ್ದೇವೆ,’ ಎಂದು ಮಾಸ್ಕೋನಲ್ಲಿ ಜರ್ಮನಿಯ ಚಾನ್ಸ್ಲರ್ ಒಲಾಫ್ ಶೋಲ್ಜ್ (Olaf Scholz) ಜೊತೆ ಮಾತುಕತೆಯ ನಂತರ ಆಯೋಜಿಸಲಾಗಿದ್ದ ಸುದ್ದಿ ಗೋಷ್ಟಿಯಲ್ಲಿ ಪುಟಿನ್ ಹೇಳಿದರು.
‘ನಿಸ್ಸಂದೇಹವಾಗಿ ರಷ್ಯಾ ಯುದ್ಧ ಬೇಕಿಲ್ಲ ಮತ್ತೂ ಯಾವತ್ತೂ ಅಂಥ ಸ್ಥಿತಿಯನ್ನು ಬಯಸುವುದಿಲ್ಲ ಎಂದು ಹೇಳಿದ ಪುಟಿನ್, ‘ಅದರೆ ಭದ್ರತೆಯ ಅವಿಭಾಜ್ಯತೆಯ ತತ್ವವನ್ನು ವಾಷಿಂಗ್ಟನ್ ಮತ್ತು ನ್ಯಾಟೋ ಹೇಗೆ ‘ಮುಕ್ತವಾಗಿ ಅರ್ಥೈಸಿಕೊಳ್ಳುತ್ತವೆ’-ಯಾವುದೇ ದೇಶವು ಇತರರ ವೆಚ್ಚದಲ್ಲಿ ತನ್ನ ಭದ್ರತೆಯನ್ನು ಬಲಪಡಿಸಬಾರದು ಎನ್ನುವ ಅಂಶವನ್ನು ಅವು ಕಡೆಗಣನೆ ಮಾಡಬಾರದು,’ ಎಂದರು.
ಉಕ್ರೇನ್ಗೆ ಬೆಂಬಲವನ್ನು ಬಲಪಡಿಸುವ ಉದ್ದೇಶದಿಂದ ಕೈವ್ ಗೆ ಪ್ರಯಾಣಿಸಿ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಜೆಲೆನ್ ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ಒಂದು ದಿನದ ಬಳಿಕ ಒಲಾಫ್ ಶೋಲ್ಜ್ ಅವರು ಪುಟಿನ್ ರನ್ನು ಭೇಟಿಯಾದರು.
ಮಂಗಳವಾರ ಇದಕ್ಕೂ ಮೊದಲು ಉಕ್ರೇನ್ ಗಡಿಭಾಗದಿಂದ ಕೆಲ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿರುವುದನ್ನು ಕ್ರೆಮ್ಲಿನ್ ದೃಢೀಕರಿಸಿತು. ಇದನ್ನು ಯೋಜನೆಗೆ ಅನುಗುಣವಾಗಿ ಮಾಡಲಾಗಿದೆಯಾದರೂ ಸಂದರ್ಭ ಎದುರಾದರೆ ದೇಶದೆಲ್ಲೆಡೆ ಇರುವ ಪಡೆಗಳನ್ನು ಗಡಿಭಾಗಕ್ಕೆ ಕಳಿಸಲು ರಷ್ಯಾ ಹಿಂಜರಿಯದು ಎಂದು ಕ್ರೆಮ್ಲಿನ್ ಎಚ್ಚರಿಸಿದೆ.
ಕಳೆದ ಕೆಲ ದಿನಗಳಿಂದ ರಷ್ಯಾದ ಮಿಲಿಟರಿ ಪಡೆಗಳು ಉಕ್ರೇನ್ ಗಡಿಭಾಗದಲ್ಲಿ ಜಮಾವಣೆ ಅಗುತ್ತಿರವುದನ್ನು ಮತ್ತು ರಷ್ಯಾದಿಂದ ಅತಿಕ್ರಮಣದ ಸಾಧ್ಯತೆಯನ್ನು ಅವಲೋಕಿಸುತ್ತಿರುವ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾವೇನಾದರೂ ಸೇನಾ ಕಾರ್ಯಾಚರಣೆಗೆ ಮುಂದಾದರೆ ಭಾರಿ ಪ್ರಮಾಣದ ಆರ್ಥಿಕ ಜುಲ್ಮಾನೆ ತೆರಲು ಸಿದ್ಧವಾಗಿರಬೇಕೆಂದು ಎಚ್ಚರಿಸಿವೆ.
ಒಂದು ಪಕ್ಷ ರಷ್ಯಾದ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸಿದರೆ, ಯುರೋಪಿಗೆ ರಷ್ಯಾ ಮಾಡುತ್ತಿರುವ ಅನಿಲ ಪೂರೈಕೆಯನ್ನು ದ್ವಿಗುಣಗೊಳಿಸುವ ನಾರ್ಡ್ ಸ್ಟ್ರೀಮ್ 2 ಪೈಪ್ ಲೈನ್ ಮೇಲೆ ಆರ್ಥಿಕ ದಿಗ್ಭಂದನಗಳನ್ನು ವಿಧಿಸಲಾಗುವುದು ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಮಾಸ್ಕೋಗೆ ಕಟುವಾದ ಎಚ್ಚರಿಕೆ ನೀಡಿವೆ.
ರಷ್ಯಾದ ನಾರ್ಡ್ ಸ್ಟ್ರೀಮ್ 2 ಪೈಪ್‌ಲೈನ್ ಅನ್ನು ಕೆಲವು ಪಾಶ್ಚಿಮಾತ್ಯ ದೇಶಗಳು ಭೌಗೋಳಿಕ ರಾಜಕೀಯ ಅಸ್ತ್ರವೆಂದು ಟೀಕಿಸಿದ್ದು, ಇದು ರಷ್ಯಾದ ಅನಿಲದ ಮೇಲೆ ಯುರೋಪ್ ಅವಲಂಬನೆಯನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿವೆ.
ರಷ್ಯಾ ನಿರ್ಮಿಸುತ್ತಿರುವ ಈ ಪೈಪ್ ಲೈನ್ ಉಕ್ರೇನ್ ಮೂಲಕ ಹಾದುಹೋಗುವ ಅಸ್ತಿತ್ವದಲ್ಲಿರುವ ಪೈಪ್ಲೈನ್ ಮುಖಾಂತರ ಸರಬರಾಜು ಆಗುತ್ತಿರುವ ಅನಿಲವನ್ನು ತನ್ನೆಡೆ ತಿರುಗಿಸಿಕೊಳ್ಳುತ್ತದೆ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರವಾಗಿರುವ ಉಕ್ರೇನ್ ಗೆ ರಷ್ಯಾದಿಂದ ಲಭ್ಯವಾಗುತ್ತಿರುವ ಅತ್ಯಂತ ಅವಶ್ಯಕ ಸಾರಿಗೆ ಶುಲ್ಕಕ್ಕೆ ಕೊಡಲಿ ಪೆಟ್ಟು ನೀಡುತ್ತದೆ.
ಆದರೆ, ಮಂಗಳವಾರದ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಪುಟಿನ್ ಅವರು, 2024 ರಲ್ಲಿ ಪ್ರಸಕ್ತ ಕರಾರಿನ ಅವಧಿ ಕೊನೆಗೊಂಡ ನಂತರವೂ ಉಕ್ರೇನ್ ಮೂಲಕವೇ ಅನಿಲ ಸರಬರಾಜು ಮಾಡಲು ರಷ್ಯಾ ತಯಾರಿದೆ ಎಂದು ಹೇಳಿದರು.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಕರೆ ಮಾಡಿ ಖಡಕ್ ಎಚ್ಚರಿಕೆ ನೀಡಿದ ಯುಎಸ್ ಅಧ್ಯಕ್ಷ ಜೋ ಬೈಡನ್