Video: ಪ್ಲಾಸ್ಟಿಕ್, ಪೇಪರ್ನಿಂದ ತಯಾರಿಸಿದ ಕೃತಕ ಮೀನಿಗೆ ಮಾನವ ಹೃದಯ ಸ್ನಾಯು ಜೀವಕೋಶ; ಪಟಪಟನೆ ಬಾಲ ಬಡಿಯುವ ಫಿಶ್ ಇಲ್ಲಿದೆ ನೋಡಿ !
ಪೇಸ್ಮೇಕರ್ಗಳಲ್ಲಿ ಸುಧಾರಣೆ ತರುವ ದೃಷ್ಟಿಯಿಂದ, ಅವುಗಳ ತಯಾರಿಕೆ ಸಂಬಂಧ ಇನ್ನಷ್ಟು ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಲು ಇಂಥ ಸಂಶೋಧನೆ ಸಹಾಯಕವಾಗಲಿದೆ ಎಂದು ಸಂಶೋಧಕರು ಆಶಯ ವ್ಯಕ್ತಪಡಿಸಿದ್ದಾರೆ.
ವಿಶ್ವದಲ್ಲಿ ವಿಜ್ಞಾನ ವಿಪರೀತ ಮುಂದುವರಿದಿದೆ. ಅಚ್ಚರಿಯ ಸಂಶೋಧನೆಗಳು ನಡೆಯುತ್ತಿವೆ. ಹೊಸಹೊಸ ಫಲಿತಾಂಶಗಳನ್ನು ಹೊಮ್ಮಿಸುವ ಅಧ್ಯಯನಗಳು ಬೆಳಕಿಗೆ ಬರುತ್ತಿವೆ. ಅದಕ್ಕೊಂದು ಉದಾಹರಣೆಯಂತೆ ಯುಎಸ್ನ ಹಾರ್ವರ್ಡ್ ವಿಶ್ವ ವಿದ್ಯಾಲಯದ (Harvard University) ವಿಜ್ಞಾನಿಗಳು, ಮನುಷ್ಯನ ಹೃದಯದಲ್ಲಿರುವ ಜೀವ ಕೋಶಗಳನ್ನು (Cells of Human Heart) ಹಾಕಿ, ಬಾಲ ಬಡಿಯುವ ಕೃತಕ ಮೀನೊಂದನ್ನು ತಯಾರಿಸಿದ್ದಾರೆ. ಪ್ಲಾಸ್ಟಿಕ್, ಪೇಪರ್ ಮತ್ತು ಜೆಲಾಟಿನ್ಗಳನ್ನು ಬಳಸಿ ಕೃತಕ ಮೀನು (Artificial Fish) ತಯಾರಿಸಿದ್ದಾರೆ. ಅದಕ್ಕೆ ಹೃದಯ ಸ್ನಾಯುವಿನ ಜೀವಕೋಶಗಳ ಎರಡು ಸ್ಟ್ರಿಪ್ಗಳನ್ನು ಅಳವಡಿಸಿದ್ದಾರೆ. ಈ ಮೂಲಕ ಕೃತಕ ಮೀನಿಗೆ ಶಕ್ತಿ ನೀಡಿದ್ದು, ಅದು ಪಟಪಟನೆ ಬಾಲ ಬಡಿಯುವ ವಿಡಿಯೋ ಕೂಡ ವೈರಲ್ ಆಗಿದೆ. ಅಂದಹಾಗೇ, ಈ ಸಂಶೋಧನೆಗೆ ಹಾರ್ವರ್ಡ್ ವಿಜ್ಞಾನಿಗಳೊಂದಿಗೆ ಎಮೋರಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳೂ ಕೂಡ ಕೈಜೋಡಿಸಿದ್ದಾರೆ.
ಈ ಸಂಶೋಧನೆಯ ಫಲಿತಾಂಶ ವರದಿಯನ್ನು ಅಧಿಕೃತ ಸೈನ್ಸ್ ಜರ್ನಲ್ವೊಂದು ಪ್ರಕಟಿಸಿದೆ. ಹಾಗೇ, ಹಾರ್ವರ್ಡ್ ಸ್ಕೂಲ್ ಆಫ್ ಇಂಜಿನಿಯರಿಂದ ಆ್ಯಂಡ್ ಅಪ್ಲೈಡ್ ಸೈನ್ಸ್ (SEAS) ಕೂಡ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. SEAS ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಕೃತಕ ಮೀನು ನೀರಿನಲ್ಲಿ ಬಾಲ ಬಡಿಯುತ್ತ ಈಜುವುದನ್ನು ನೋಡಬಹುದು.
This artificial fish is powered by human heart cells.https://t.co/aioJKFDZft pic.twitter.com/6c5nIbA1sn
— Harvard SEAS (@hseas) February 11, 2022
ಪೇಸ್ಮೇಕರ್ಗಳಲ್ಲಿ ಸುಧಾರಣೆ ತರುವ ದೃಷ್ಟಿಯಿಂದ, ಅವುಗಳ ತಯಾರಿಕೆ ಸಂಬಂಧ ಇನ್ನಷ್ಟು ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಲು ಇಂಥ ಸಂಶೋಧನೆ ಸಹಾಯಕವಾಗಲಿದೆ ಎಂದು ಸಂಶೋಧಕರು ಆಶಯ ವ್ಯಕ್ತಪಡಿಸಿದ್ದಾರೆ. (ಪೇಸ್ಮೇಕರ್ಗಳೆಂದರೆ ಹೃದಯ ಬಡಿತ ಸಮತೋಲನ ಮಾಡುವ ಒಂದು ಉಪಕರಣಗಳು. ಕಾರ್ಡಿಯಾಕ್ ಪೇಸಿಂಗ್ ಎಂದೂ ಕರೆಯುವ ಇವುಗಳನ್ನು ಹೃದ್ರೋಗಿಗಳ ಎದೆಯಲ್ಲಿ ಒಂದು ಸಣ್ಣ ಸರ್ಜರಿ ಮೂಲಕ ಅಳವಡಿಸಲಾಗುತ್ತದೆ. ಇದು ಹೃದಯ ತುಂಬ ನಿಧಾನವಾಗಿ ಬಡಿಯುವುದನ್ನು ತಡೆಯುತ್ತದೆ. )
ಜೀವಂತ ಜೀವಕೋಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುಶಲತೆಯನ್ನು ಅಳವಡಿಸಿಕೊಳ್ಳಲು ಈ ಮೀನಿನ ಮೇಲೆ ಇಂಥದ್ದೊಂದು ಪ್ರಯೋಗ ಮಾಡಲಾಗಿತ್ತು ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಸಂಶೋಧಕರಲ್ಲಿ ಒಬ್ಬರಾದ ಕಿಟ್ ಪಾರ್ಕರ್ ತಿಳಿಸಿದ್ದಾರೆ. ಹಾಗೇ, ಹೃದಯ ಎಂಬುದು ತುಂಬ ಸಂಕೀರ್ಣವಾಗಿದೆ. ಅದರ ರಚನಾ ಶಾಸ್ತ್ರವನ್ನು ಅನುಕರಿಸಲು ಸಾಧ್ಯವಿಲ್ಲ. ಹೃದಯದಲ್ಲಿ ದೋಷವನ್ನಿಟ್ಟುಕೊಂಡು ಹುಟ್ಟುವ ಮಕ್ಕಳಿಗಾಗಿ ಜೈವಿಕ ಕೃತಕ ಹೃದಯಗಳನ್ನು ತಯಾರಿಸಲು ಜೈವಿಕ ಭೌತಶಾಸ್ತ್ರವನ್ನು ಮರುಸೃಷ್ಟಿಸುವ ಅಗತ್ಯತೆ ಇದೆ. ಇದನ್ನೆಲ್ಲ ಸಾಧಿಸಲು ಇಂಥ ಸಂಶೋಧನೆಗಳು ಅನುಕೂಲ ಮಾಡಿಕೊಡುತ್ತವೆ ಎಂದೂ ಪಾರ್ಕರ್ ಹೇಳಿದ್ದಾರೆ.
ಇದನ್ನೂ ಓದಿ: Carrot Seed Oil: ಕ್ಯಾರೆಟ್ ಬೀಜದ ಎಣ್ಣೆ ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ
Published On - 2:44 pm, Wed, 16 February 22