ಬಾಂಗ್ಲಾದೇಶದ ಅಲ್ಪಸಂಖ್ಯಾತರ ದಾಳಿ ಬಗ್ಗೆ ಭಾರತ ಚಿಂತಿಸುವ ಅಗತ್ಯವಿಲ್ಲ; ಬಾಂಗ್ಲಾ ಟೀಕೆ
ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಲೇ ಇದೆ. ಬಾಂಗ್ಲಾದೇಶದಿಂದ ಪರಾರಿಯಾಗಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾ ದೆಹಲಿಯಲ್ಲಿ ಆಶ್ರಯ ಪಡೆದಾಗಿನಿಂದ ಬಾಂಗ್ಲಾ ಮತ್ತು ಭಾರತದ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಆದರೆ, ಇತ್ತೀಚೆಗೆ ಎರಡೂ ದೇಶಗಳ ನಡುವೆ ಬಹಿರಂಗವಾಗಿಯೇ ಟೀಕೆ, ವಾಗ್ವಾದಗಳು ಹೆಚ್ಚಾಗುತ್ತಿವೆ. ಬಾಂಗ್ಲಾದೇಶದಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ. ಆದರೆ, ಈ ಬಗ್ಗೆ ನೀವು ಮೂಗು ತೂರಿಸುವ ಅಗತ್ಯವಿಲ್ಲ ಎಂದು ಢಾಕಾ ಭಾರತಕ್ಕೆ ಸಂದೇಶ ರವಾನಿಸಿದೆ.

ಢಾಕಾ: ‘ಪರಸ್ಪರ ಗೌರವದ ಆಧಾರದ ಮೇಲೆ ಭಾರತದೊಂದಿಗೆ ಗಟ್ಟಿಯಾದ ಸಂಬಂಧವನ್ನು ಉಳಿಸಿಕೊಳ್ಳಲು ಬಾಂಗ್ಲಾದೇಶ ಬದ್ಧವಾಗಿದೆ’ ಎಂದು ಬಾಂಗ್ಲಾದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ.ಡಿ ತೌಹಿದ್ ಹುಸೇನ್ ಹೇಳಿದ್ದಾರೆ. ಈ ವಿಷಯದ ಕುರಿತು ಭಾರತೀಯ ಸಚಿವ ಎಸ್. ಜೈಶಂಕರ್ ಅವರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಭಾರತ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇದು ನಮ್ಮ ಆಂತರಿಕ ಸಮಸ್ಯೆ’ ಎಂದು ಹೇಳಿದ್ದಾರೆ. ಬಾಂಗ್ಲಾದೇಶ ತನ್ನ ಆಂತರಿಕ ಸಮಸ್ಯೆಗಳಿಗೆ ವಿನಾಕಾರಣ ಭಾರತವನ್ನು ದೂಷಿಸುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಆರೋಪ ಮಾಡಿದ್ದರು. ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ಸಚಿವ ಜೈಶಂಕರ್ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಬಾಂಗ್ಲಾದೇಶ ಈ ಹೇಳಿಕೆ ನೀಡಿದೆ.
ಪರಸ್ಪರ ಗೌರವ ಮತ್ತು ಹಂಚಿಕೆಯ ಹಿತಾಸಕ್ತಿಗಳ ಆಧಾರದ ಮೇಲೆ ಭಾರತದೊಂದಿಗೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಬಾಂಗ್ಲಾದೇಶ ಪುನರುಚ್ಚರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ.ಡಿ ತೌಹಿದ್ ಹುಸೇನ್ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಘಟನೆಗಳ ಬಗ್ಗೆ ಭಾರತ ಕಳವಳ ಹೊಂದುವ ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ ವಿಚಾರವನ್ನು ಮೋದಿಗೆ ಬಿಟ್ಟಿದ್ದೀವಿ, ಅವರೇ ನೋಡಿಕೊಳ್ತಾರೆ ಎಂದ ಟ್ರಂಪ್
ಬಾಂಗ್ಲಾದೇಶ ತನ್ನ ನಿಲುವನ್ನು ನಿರ್ಧರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಭಾರತವು ಬಾಂಗ್ಲಾದೇಶದೊಂದಿಗೆ ಯಾವ ರೀತಿಯ ಸಂಬಂಧವನ್ನು ಬಯಸುತ್ತದೆ ಎಂಬುದನ್ನು ಸಹ ನಿರ್ಧರಿಸಬೇಕಾಗಿದೆ ಎಂದಿರುವ ತೌಹಿದ್ ಹುಸೇನ್ ಭಾರತದೊಂದಿಗಿನ ಸಂಬಂಧದ ಬಗ್ಗೆ ಬಾಂಗ್ಲಾದೇಶದ ಸ್ಪಷ್ಟ ನಿಲುವನ್ನು ಒತ್ತಿ ಹೇಳಿದರು. “ನಾವು ಪರಸ್ಪರ ಗೌರವದ ಮೇಲೆ ನಿರ್ಮಿಸಲಾದ ಸಂಬಂಧವನ್ನು ಬಯಸುತ್ತೇವೆ. ನಮಗೆ ಈ ವಿಚಾರದಲ್ಲಿ ಯಾವುದೇ ಅಸ್ಪಷ್ಟತೆಯಿಲ್ಲ” ಎಂದು ಅವರು ತಿಳಿಸಿದ್ದಾರೆ.
ಶನಿವಾರ ಮಾತನಾಡಿದ ಸಚಿವ ಜೈಶಂಕರ್, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಂತಹ ಘಟನೆಗಳು ಭಾರತದ ಚಿಂತನೆಯ ಮೇಲೆಯೂ ಪರಿಣಾಮ ಬೀರುತ್ತವೆ ಎಂದು ಹೇಳಿದ್ದರು. ಭಾರತದೊಂದಿಗೆ ಬಾಂಗ್ಲಾದೇಶ ಯಾವ ರೀತಿಯ ಸಂಬಂಧ ಹೊಂದಬೇಕು ಎಂಬುದನ್ನು ಢಾಕಾ ನಿರ್ಧರಿಸಬೇಕು ಎಂದು ಅವರು ಸಲಹೆ ನೀಡಿದ್ದರು.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸಮಾರಂಭ, ಮೊದಲ ಸಾಲಿನಲ್ಲೇ ಕಾಣಿಸಿಕೊಂಡ ಸಚಿವ ಜೈಶಂಕರ್
ಇದಕ್ಕೆ ಪ್ರತಿಕ್ರಿಯಿಸಿರುವ ತೌಹಿದ್, “ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ಭಾರತ ಕಳವಳ ಹೊಂದುವ ಅಗತ್ಯವಿಲ್ಲ. ಬಾಂಗ್ಲಾದೇಶದ ಅಲ್ಪಸಂಖ್ಯಾತರ ದಾಳಿ ಬಾಂಗ್ಲಾದೇಶದ ಆಂತರಿಕ ಸಮಸ್ಯೆಯಾಗಿದೆ. ಭಾರತವು ತನ್ನ ದೇಶದ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದಷ್ಟೇ ಭಾರತಕ್ಕೆ ಸಂಬಂಧಿಸಿದ ವಿಷಯವಾಗಿದೆ. ವಿನಾಕಾರಣ ನಮ್ಮ ಆಂತರಿಕ ವಿಷಯದಲ್ಲಿ ಭಾರತ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ನಾವು ಅಲ್ಪಸಂಖ್ಯಾತರ ಸಮಸ್ಯೆಯನ್ನು ನೋಡಿಕೊಳ್ಳುತ್ತಿದ್ದೇವೆ. ಅವರು ಬಾಂಗ್ಲಾದೇಶದ ನಾಗರಿಕರು. ಅವರು ನನ್ನಂತೆಯೇ ಹಕ್ಕುಗಳನ್ನು ಹೊಂದಿದ್ದಾರೆ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




