ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ವಿಷಾದನೀಯ; ಬಾಂಗ್ಲಾದೇಶಕ್ಕೆ ಭಾರತದ ಸಂದೇಶ ರವಾನೆ

| Updated By: ಸುಷ್ಮಾ ಚಕ್ರೆ

Updated on: Dec 09, 2024 | 6:10 PM

ಧನಾತ್ಮಕ, ರಚನಾತ್ಮಕ ಮತ್ತು ಪರಸ್ಪರ ಲಾಭದಾಯಕ ಪಾಲುದಾರಿಕೆಯನ್ನು ನಿರ್ಮಿಸಲು ಭಾರತದ ಬದ್ಧತೆಯ ಬಗ್ಗೆ ಮಿಶ್ರಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಬಾಂಗ್ಲಾದೇಶದೊಂದಿಗಿನ ಸಭೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ವಿಷಾದನೀಯ; ಬಾಂಗ್ಲಾದೇಶಕ್ಕೆ ಭಾರತದ ಸಂದೇಶ ರವಾನೆ
ವಿಕ್ರಮ್ ಮಿಶ್ರಿ
Follow us on

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಕುರಿತು ಭಾರತದ ಕಳವಳವನ್ನು ಢಾಕಾಗೆ ತಿಳಿಸಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್ ಅವರೊಂದಿಗಿನ ಸಭೆಯಲ್ಲಿ ಮಿಶ್ರಿ ಅವರು ಬಾಂಗ್ಲಾದಲ್ಲಿನ ಧಾರ್ಮಿಕ ಸಂಸ್ಥೆಗಳು ಮತ್ತು ಪೂಜಾ ಸ್ಥಳಗಳ ಮೇಲಿನ ದಾಳಿಗಳು ವಿಷಾದನೀಯ ಎಂದು ಹೇಳಿದ್ದಾರೆ.

ಭಾರತವು ಧನಾತ್ಮಕ, ರಚನಾತ್ಮಕ ಮತ್ತು ಪರಸ್ಪರ ಲಾಭದಾಯಕ ಸಂಬಂಧವನ್ನು ಹೊಂದಲು ಬಯಸುತ್ತದೆ ಎಂದು ಮಿಶ್ರಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ತಿಳಿಸಿದ್ದಾರೆ. ತಮ್ಮ ಉನ್ನತ ಮಟ್ಟದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಕ್ರಮ್ ಮಿಶ್ರಿ, “ಬಾಂಗ್ಲಾದೇಶ ಪ್ರಾಧಿಕಾರದ ಮಧ್ಯಂತರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವ ಭಾರತದ ಬಯಕೆಯನ್ನು ನಾನು ಇಂದು ಒತ್ತಿ ಹೇಳಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದ ಢಾಕಾದಲ್ಲಿ ಇಸ್ಕಾನ್ ದೇವಾಲಯಕ್ಕೆ ಬೆಂಕಿ, ವಿಗ್ರಹಗಳ ನಾಶ

ಅಲ್ಪಸಂಖ್ಯಾತರ ಸಮಸ್ಯೆಯ ಕುರಿತು ಮಾತನಾಡಿದ ಮಿಶ್ರಿ, “ನಾವು ಇತ್ತೀಚಿನ ಬೆಳವಣಿಗೆಗಳನ್ನು ಚರ್ಚಿಸಿದ್ದೇವೆ. ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದವುಗಳು ಸೇರಿದಂತೆ ನಮ್ಮ ಕಳವಳಗಳನ್ನು ನಾನು ತಿಳಿಸಿದ್ದೇನೆ. ನಾವು ಸಾಂಸ್ಕೃತಿಕ ಮತ್ತು ಧಾರ್ಮಿಕ ಆಸ್ತಿಗಳ ಮೇಲಿನ ದಾಳಿಯ ವಿಷಾದನೀಯ ಘಟನೆಗಳ ಬಗ್ಗೆಯೂ ಚರ್ಚಿಸಿದ್ದೇವೆ.” ಎಂದಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಒಂದು ದಿನದ ಭೇಟಿಗಾಗಿ ಇಂದು ಮುಂಜಾನೆ ಢಾಕಾಗೆ ಆಗಮಿಸಿದ್ದರು. ಆಗಸ್ಟ್‌ನಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಉಭಯ ದೇಶಗಳ ಬಾಂಧವ್ಯದ ನಡುವೆ ಉಭಯ ದೇಶಗಳ ನಡುವೆ ನಡೆದ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ.

ಆಗಸ್ಟ್‌ನಲ್ಲಿ ನಡೆದ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಯ ನಂತರ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲಾಯಿತು. ಇದಾದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧಗಳು ಹಳಸಿವೆ. ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ಕೆಲವೇ ದಿನಗಳಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.

ಇದನ್ನೂ ಓದಿ: ಬಾಂಗ್ಲಾದೇಶದ ಮತ್ತೊಂದು ಹಿಂದೂ ದೇವಾಲಯದ ಮೇಲೆ ದಾಳಿ; ದೇವರ ವಿಗ್ರಹಕ್ಕೆ ಬೆಂಕಿ

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತ ನಾಗರಿಕರನ್ನು ಗುರಿಯಾಗಿಸಿ ಹಿಂಸಾಚಾರದ ಅನೇಕ ಘಟನೆಗಳ ನಂತರ ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟವು. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಬಾಂಗ್ಲಾದೇಶದಲ್ಲಿ ಭಾರೀ ಹಿಂಸಾಚಾರ, ಆಸ್ತಿಪಾಸ್ತಿ ಧ್ವಂಸ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಅಪವಿತ್ರಗೊಳಿಸುವ ಘಟನೆಗಳು ಹೆಚ್ಚಾಗುತ್ತಿವೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಿಂದ ಹಿಂದೂ ಪುರೋಹಿತರ ಮೇಲೆ ದಬ್ಬಾಳಿಕೆ ಕೂಡ ನಡೆದಿದೆ. ಇಬ್ಬರು ಹಿಂದೂ ಪುರೋಹಿತರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಅವರ ಬಂಧನದ ಬಗ್ಗೆ ಆತಂಕವಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ