ಬಾಂಗ್ಲಾದೇಶದ ಢಾಕಾದಲ್ಲಿ ಇಸ್ಕಾನ್ ದೇವಾಲಯಕ್ಕೆ ಬೆಂಕಿ, ವಿಗ್ರಹಗಳ ನಾಶ
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಇಸ್ಕಾನ್ ದೇವಾಲಯದ ಕೇಂದ್ರವನ್ನು ಸುಟ್ಟುಹಾಕಲಾಗಿದೆ, ವಿಗ್ರಹಗಳಿಗೆ ಬೆಂಕಿ ಹಚ್ಚಲಾಗಿದೆ. ಇಸ್ಕಾನ್ ದೇವಸ್ಥಾನದಲ್ಲಿ ದೇವರ ವಿಗ್ರಹಗಳನ್ನು ಸುಟ್ಟುಹಾಕಲಾಗಿದೆ, ದೇಗುಲವನ್ನು ಧ್ವಂಸ ಮಾಡಲಾಗಿದೆ. ಬಾಂಗ್ಲಾದೇಶದ ಢಾಕಾ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ಕಾನ್ ಆರೋಪಿಸಿದೆ.
ನವದೆಹಲಿ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ತನ್ನ ಕೇಂದ್ರವನ್ನು ಮುಂಜಾನೆ ಸುಟ್ಟು ಹಾಕಲಾಗಿದೆ ಎಂದು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಇಂದು ಆರೋಪಿಸಿದೆ. ಇಸ್ಕಾನ್‌ನ ಕೊಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ ದಾಸ್ ಎಕ್ಸ್ ಪೋಸ್ಟ್‌ನಲ್ಲಿ ಇಸ್ಕಾನ್ ಸಂಸ್ಥೆಯ ನಮ್ಹಟ್ಟಾ ಕೇಂದ್ರವನ್ನು ಬಾಂಗ್ಲಾದೇಶದಲ್ಲಿ ಸುಟ್ಟುಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಇಂದು ಮುಂಜಾನೆ 2-3 ಗಂಟೆಯ ನಡುವೆ ದುಷ್ಕರ್ಮಿಗಳು ತುರಗ್ ಪೊಲೀಸ್ ವ್ಯಾಪ್ತಿಯ ಧೌರ್ ಗ್ರಾಮದಲ್ಲಿರುವ ಹರೇ ಕೃಷ್ಣ ನಾಮಹಟ್ಟಾ ಸಂಘದ ವ್ಯಾಪ್ತಿಯಲ್ಲಿರುವ ರಾಧಾ ಕೃಷ್ಣ ದೇವಸ್ಥಾನ ಮತ್ತು ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ. ಈ ದೇವಸ್ಥಾನಗಳು ಢಾಕಾದಲ್ಲಿವೆ ಎಂದು ರಾಧಾರಮಣ ದಾಸ್ ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ: ಕೇಸರಿ ಬಟ್ಟೆಗಳನ್ನು ಧರಿಸಬೇಡಿ, ತಿಲಕವನ್ನು ಇಡಬೇಡಿ ಇಸ್ಕಾನ್ ಸಲಹೆ
ದೇವಸ್ಥಾನದ ಹಿಂಭಾಗದಲ್ಲಿರುವ ತಾಮ್ರದ ಮೇಲ್ಛಾವಣಿಯನ್ನು ಎತ್ತಿ ಪೆಟ್ರೋಲ್ ಅಥವಾ ಆಕ್ಟೇನ್ ಬಳಸಿ ಬೆಂಕಿಯನ್ನು ಹಚ್ಚಲಾಯಿತು. ಹಿಂದೂ ಸಮುದಾಯದ ಸದಸ್ಯರ ಮೇಲೆ ದಾಳಿಗಳು ಎಡೆಬಿಡದೆ ನಡೆಯುತ್ತಿವೆ, ಇಸ್ಕಾನ್ ಬಾಂಗ್ಲಾದೇಶದ ಸರ್ಕಾರದ ಗಮನಕ್ಕೆ ಈ ಮಾಹಿತಿಯನ್ನು ನೀಡಿದ್ದರೂ ಅವರ ಕುಂದುಕೊರತೆಗಳನ್ನು ಶಮನಗೊಳಿಸಲು ಮತ್ತು ಅವರ ಕಾಳಜಿಯನ್ನು ಪರಿಹರಿಸಲು ಪೊಲೀಸರು ಮತ್ತು ಆಡಳಿತವು ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆಗಸ್ಟ್‌ನಲ್ಲಿ ಶೇಖ್ ಹಸೀನಾ ಅವರ ಆಡಳಿತದ ಪತನದ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಅಧಿಕಾರ ವಹಿಸಿಕೊಂಡಿತು. ಬಾಂಗ್ಲಾದೇಶವು ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ವಿಶೇಷವಾಗಿ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಬಾಂಗ್ಲಾದೇಶದ ವಿವಿಧೆಡೆ ಇಸ್ಕಾನ್ ಆಸ್ತಿಗಳ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ: ಬಾಂಗ್ಲಾದೇಶದ ಹತ್ಯಾಕಾಂಡದ ಮಾಸ್ಟರ್ಮೈಂಡ್ ಯೂನಸ್: ಶೇಖ್ ಹಸೀನಾ
ಭಾರತವು ಕಳೆದ ವಾರ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸುವ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. “ಅಲ್ಪಸಂಖ್ಯಾತರು ಸೇರಿದಂತೆ ಬಾಂಗ್ಲಾದೇಶದ ಎಲ್ಲಾ ಜನರ ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆಯ ಪ್ರಾಥಮಿಕ ಜವಾಬ್ದಾರಿಯು ಬಾಂಗ್ಲಾದೇಶ ಸರ್ಕಾರದ್ದಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರನ್ನು ನವೆಂಬರ್ 25ರಂದು ಬಂಧಿಸಲಾಗಿತ್ತು. ಅವರ ಬೆಂಬಲಿಗರು ತೀವ್ರ ಪ್ರತಿಭಟನೆಗಳನ್ನು ಮಾಡಿದ್ದರು. ಡಿಸೆಂಬರ್ 3ರಂದು ಬಾಂಗ್ಲಾದೇಶದ ನ್ಯಾಯಾಲಯವು ಚಿನ್ಮಯ್ ದಾಸ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿತು. ಏಕೆಂದರೆ ಅವರ ಪರವಾಗಿ ಯಾವುದೇ ವಕೀಲರು ಹಾಜರಾಗಿರಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ