ದಕ್ಷಿಣ ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾನಿಲಯದಲ್ಲಿ (Karachi University) ಮಂಗಳವಾರ ವ್ಯಾನ್ ಸ್ಫೋಟದ ಹೊಣೆಗಾರಿಕೆಯನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (Balochistan Liberation Army ) ಹೊತ್ತು ಕೊಂಡಿದೆ. ಈ ಸಂಘಟನೆ ಪ್ರಮುಖವಾಗಿ ಬಲೂಚಿಸ್ತಾನ್ ಪ್ರಾಂತ್ಯದಲ್ಲಿದೆ(Balochistan province). ಮಹಿಳಾ ಆತ್ಮಹತ್ಯಾ ಬಾಂಬರ್‌ನಿಂದ ಈ ದಾಳಿ ನಡೆದಿದೆ ಎಂದು ಬಿಎಲ್‌ಎ ತಿಳಿಸಿದೆ. ಕರಾಚಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ನಾಲ್ಕು ಚೀನೀ ಪ್ರಜೆಗಳು ಮತ್ತು ವ್ಯಾನ್ ಜೊತೆಗಿದ್ದ ಪಾಕಿಸ್ತಾನಿ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವಿಶ್ವವಿದ್ಯಾಲಯದ ವಕ್ತಾರ ಮೊಹಮ್ಮದ್ ಫಾರೂಕ್ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ. ದಾಳಿಯ ನಂತರದ ಈ ಗುಂಪು ಹೇಳಿಕೆ ನೀಡಿದ್ದು ಬಾಂಬರ್ ಅನ್ನು ಶಾರಿ ಬಲೂಚ್ ಅಥವಾ ಬ್ರಾಮ್ಶ್ ಎಂದು ಗುರುತಿಸಿದೆ. ಈಕೆ ಈ ಗುಂಪಿನ ಮೊದಲ ಮಹಿಳಾ ಬಾಂಬರ್ ಎಂದು ಬಿಎಲ್‌ಎ ಹೇಳಿದ್ದು ಈ ದಾಳಿಯು “ಬಲೂಚ್ ಪ್ರತಿರೋಧದ ಇತಿಹಾಸದಲ್ಲಿ ಹೊಸ ಅಧ್ಯಾಯ” ಎಂದಿದೆ. ಬಿಎಲ್‌ಎ ಈ ಹಿಂದೆ ದಾಳಿಗಳಲ್ಲಿ ಚೀನಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡಿದೆ. ಸಶಸ್ತ್ರ ಬಲೂಚ್ ಗುಂಪುಗಳು ಹೆಚ್ಚು ಸ್ವಾಯತ್ತತೆ ಮತ್ತು ಇಸ್ಲಾಮಾಬಾದ್‌ನಿಂದ ಸಂಪೂರ್ಣ ಸ್ವಾತಂತ್ರ್ಯವಲ್ಲದಿದ್ದರೆ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲು ಬಯಸುತ್ತವೆ.
ಜುಲೈ 2021 ರಲ್ಲಿ ವಾಯುವ್ಯದಲ್ಲಿರುವ ದಾಸು ಎಂಬಲ್ಲಿ ಬಸ್‌ನ ಮೇಲೆ ಬಾಂಬ್ ಸ್ಫೋಟಿಸಿ ಒಂಬತ್ತು ಚೀನೀ ಪ್ರಜೆಗಳನ್ನು ಕೊಂದ ನಂತರ ಪಾಕಿಸ್ತಾನದಲ್ಲಿ ಚೀನಾದ ಪ್ರಜೆಗಳ ಮೇಲೆ ಇದು ಮೊದಲ ದೊಡ್ಡ ದಾಳಿಯಾಗಿದೆ. ಆದರೆ, ಆ ದಾಳಿಯ ಹೊಣೆಯನ್ನು ಬಲೂಚ್ ಉಗ್ರಗಾಮಿಗಳು ಹೇಳಿಕೊಂಡಿರಲಿಲ್ಲ. ಪಾಕಿಸ್ತಾನಿ ತಾಲಿಬಾನ್ – ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಎಂದೂ ಕರೆಯಲ್ಪಡುವ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ದಾಳಿಯಲ್ಲಿ ನಾಲ್ವರು ಪಾಕಿಸ್ತಾನಿಗಳೂ ಸಾವನ್ನಪ್ಪಿದ್ದರು.
ದಾಳಿಯ ಹಿಂದೆ ಆತ್ಮಹತ್ಯಾ ಬಾಂಬರ್‌ನ ಕೈವಾಡವಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಕರಾಚಿ ಪೊಲೀಸ್ ಮುಖ್ಯಸ್ಥ ಗುಲಾಂ ನಬಿ ಮೆಮನ್ ಹೇಳಿದ್ದಾರೆ. ಘಟನೆ ನಡೆದ ಸ್ಥಳದಿಂದ ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ ಫೂಟೇಜ್ ಬುರ್ಖಾ ಧರಿಸಿರುವ ವ್ಯಕ್ತಿಯೊಬ್ಬರು ವ್ಯಾನ್‌ನತ್ತ ನಡೆದುಕೊಂಡು ಹೋಗುವುದನ್ನು ತೋರಿಸಿದೆ, ನಂತರ ತಕ್ಷಣವೇ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದರು.
ಸಾವಿಗೀಡಾದವರಲ್ಲಿ ಚೈನೀಸ್ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ನ ನಿರ್ದೇಶಕರನ್ನು ಒಳಗೊಂಡಿವೆ.
ಸಾವಿರಾರು ಚೀನೀ ಕಾರ್ಮಿಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಬೀಜಿಂಗ್‌ನ ಬಹು-ಶತಕೋಟಿ ಡಾಲರ್ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು “ಒನ್ ಬೆಲ್ಟ್ ಒನ್ ರೋಡ್ ಪ್ರಾಜೆಕ್ಟ್” ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಮತ್ತು ಮಧ್ಯ ಏಷ್ಯಾವನ್ನು ಚೀನಾದ ರಾಜಧಾನಿಯೊಂದಿಗೆ ಸಂಪರ್ಕಿಸುತ್ತದೆ. ಚೀನಾದ ವಾಯುವ್ಯ ಕ್ಸಿನ್‌ಜಿಯಾಂಗ್ ಪ್ರಾಂತ್ಯದೊಂದಿಗೆ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಪಾಕಿಸ್ತಾನದ ದಕ್ಷಿಣ ಬಂದರು ಗ್ವಾದರ್ ಅನ್ನು ಸಂಪರ್ಕಿಸುವ ಪ್ರಮುಖ ರಸ್ತೆಯು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಎಂದು ಕರೆಯಲ್ಪಡುತ್ತದೆ. ಯೋಜನೆಯು ಹಲವಾರು ಮೂಲಸೌಕರ್ಯ ಯೋಜನೆಗಳು ಮತ್ತು ಹಲವಾರು ವಿದ್ಯುತ್ ಯೋಜನೆಗಳನ್ನು ಒಳಗೊಂಡಿದೆ.
ಇದನ್ನೂ ಓದಿ:ನಾನು ಪಕ್ಷದಲ್ಲೇ ಉಳಿಯುವಂತೆ ನೋಡಿಕೊಳ್ಳಿ: ಕಾಂಗ್ರೆಸ್‌ಗೆ ಹಾರ್ದಿಕ್ ಪಟೇಲ್ ಸಂದೇಶ
Published On - 6:41 pm, Tue, 26 April 22