ಚುನಾವಣೆ ಹೊಸ್ತಿಲಲ್ಲೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ, ಕೈ-ಕಾಲುಗಳನ್ನು ಕಟ್ಟಿದ್ದ ಸ್ಥಿತಿಯಲ್ಲಿ ಶವ ಪತ್ತೆ

ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಮೌಲ್ವಿಬಜಾರ್ ಜಿಲ್ಲೆಯಲ್ಲಿ ಮತ್ತೊಬ್ಬ ಹಿಂದೂ ಯುವಕ ರತನ್ ಸಾಹುಕರ್‌ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೈ-ಕಾಲು ಕಟ್ಟಿಹಾಕಿದ ಸ್ಥಿತಿಯಲ್ಲಿ ಆತನ ದೇಹ ಪತ್ತೆಯಾಗಿದ್ದು, ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದಷ್ಟೇ ಮತ್ತೊಬ್ಬ ಹಿಂದೂ ಉದ್ಯಮಿ ಹತ್ಯೆ ನಡೆದಿತ್ತು. ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಘಟನೆಗಳು ಚುನಾವಣೆಗೆ ಸಂಬಂಧಿಸಿವೆಯೇ ಎಂದು ಪತ್ತೆಹಚ್ಚುತ್ತಿದ್ದಾರೆ.

ಚುನಾವಣೆ ಹೊಸ್ತಿಲಲ್ಲೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ, ಕೈ-ಕಾಲುಗಳನ್ನು ಕಟ್ಟಿದ್ದ ಸ್ಥಿತಿಯಲ್ಲಿ ಶವ ಪತ್ತೆ
ಬಾಂಗ್ಲಾದೇಶ
Image Credit source: NDTV

Updated on: Feb 12, 2026 | 10:08 AM

ಢಾಕಾ, ಫೆಬ್ರವರಿ 12: ಬಾಂಗ್ಲಾದೇಶ(Bangladesh)ದ ಸಾರ್ವತ್ರಿಕ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಬಾಂಗ್ಲಾದೇಶದ ಮೌಲ್ವಿಬಜಾರ್ ಜಿಲ್ಲೆಯಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ. ಬುಧವಾರ 28 ವರ್ಷದ ಹಿಂದೂ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಕೈಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಆತನ ದೇಹವು ಪತ್ತೆಯಾಗಿದ್ದು, ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿದೆ.

ಮೃತರನ್ನು ರತನ್ ಸಾಹುಕರ್ ಎಂದು ಗುರುತಿಸಲಾಗಿದೆ. ರತನ್ ಚಂಪಾ ಪ್ರದೇಶದ ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅವರ ಶವ ಪತ್ತೆಯಾಗಿದೆ. ಶವ ಪತ್ತೆಯಾದಾಗ, ರತನ್ ಅವರ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಲಾಗಿತ್ತು ಮತ್ತು ಅವರ ದೇಹದಲ್ಲಿ ತೀವ್ರ ಗಾಯಗಳಾಗಿದ್ದವು, ಅದರಿಂದ ವಿಪರೀತ ರಕ್ತಸ್ರಾವವೂ ಆಗುತ್ತಿತ್ತು.

ರತನ್ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇದು ಪೂರ್ವನಿಯೋಜಿತ ಕೊಲೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಕೈಕಾಲುಗಳನ್ನು ಕಟ್ಟಲಾಗಿದ್ದ ರೀತಿ ಮತ್ತು ಅವರ ದೇಹದ ಮೇಲಿನ ಗಾಯಗಳು ಇದು ಅಪಘಾತವಲ್ಲ.ಬದಲಾಗಿ ಪಿತೂರಿ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕೊಲೆ ಚುನಾವಣೆಗೆ ಸಂಬಂಧಿಸಿದೆಯೇ ಅಥವಾ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂದು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಇದೊಂದೇ ಘಟನೆಯಲ್ಲ. ಕೆಲವು ದಿನಗಳ ಹಿಂದೆ, ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಮತ್ತೊಬ್ಬ ಹಿಂದೂ ಉದ್ಯಮಿ ಸುಶೇನ್ ಚಂದ್ರ ಸರ್ಕಾರ್ (62) ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು ಸುಶೇನ್ ಅಕ್ಕಿ ವ್ಯಾಪಾರ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ದಾಳಿಕೋರರು ಅವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ, ರಕ್ತಸ್ರಾವವಾಗುವ ಸ್ಥಿತಿಯಲ್ಲಿ ಅಂಗಡಿಯೊಳಗೆ ಬೀಗ ಹಾಕಿ ಪರಾರಿಯಾಗಿದ್ದರು.

ಮತ್ತಷ್ಟು ಓದಿ: Bangladesh Elections 2026: ಬಾಂಗ್ಲಾದೇಶದಲ್ಲಿ ಇಂದು ಸಾರ್ವತ್ರಿಕ ಚುನಾವಣೆ, ಅವಾಮಿ ಲೀಗ್ ಸ್ಪರ್ಧೆಯಿಂದ ಹೊರಕ್ಕೆ

ಅಂಗಡಿಯಿಂದ ಲಕ್ಷಾಂತರ ರೂಪಾಯಿಗಳನ್ನು ದೋಚಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಸಂಜೆ 4.30 ರವರೆಗೆ ಮುಂದುವರಿಯಲಿದೆ. ಮತ ಎಣಿಕೆ ನಂತರ ತಕ್ಷಣವೇ ಆರಂಭವಾಗಲಿದೆ. ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತ ಕೊನೆಗೊಂಡ 18 ತಿಂಗಳ ನಂತರ ಈ ಚುನಾವಣೆಗಳು ನಡೆಯುತ್ತಿವೆ.

ಪ್ರಸ್ತುತ, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ದೇಶವನ್ನು ನಡೆಸುತ್ತಿದೆ. ಮೊಹಮ್ಮದ್ ಯೂನಸ್ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಪ್ರಜಾಪ್ರಭುತ್ವ ನಿಯಮಗಳನ್ನು ಅನುಸರಿಸಲು ಮನವಿ ಮಾಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ