ಭಾರತದಿಂದ ಶೇಖ್ ಹಸೀನಾ ಗಡಿಪಾರಿಗೆ ಇಂಟರ್‌ಪೋಲ್ ಮೊರೆಹೋಗಲು ಬಾಂಗ್ಲಾದೇಶ ನಿರ್ಧಾರ
ಬಾಂಗ್ಲಾದೇಶದ ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಾನವೀಯತೆಯ ದೃಷ್ಟಿಯಿಂದ ಭಾರತದಲ್ಲಿ ಆಶ್ರಯ ನೀಡಲಾಗಿತ್ತು. ಆದರೆ, ಅದೇ ನಿರ್ಧಾರದಿಂದ ಮೋದಿ ಸರ್ಕಾರಕ್ಕೆ ಬಾಂಗ್ಲಾದೇಶದಿಂದ ಒಂದಾದ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿದೆ. ದೇಶಭ್ರಷ್ಟವಾಗಿರುವ ಶೇಖ್ ಹಸೀನಾಗೆ ಭಾರತದಲ್ಲಿ ಆಶ್ರಯ ನೀಡಿದ್ದರಿಂದ ಬಾಂಗ್ಲಾದೇಶ-ಭಾರತದ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿತ್ತು. ಇದೀಗ ಶೇಖ್ ಹಸೀನಾಗೆ ಗಲ್ಲುಶಿಕ್ಷೆ ಘೋಷಣೆಯಾಗಿರುವುದರಿಂದ ಅವರನ್ನು ಭಾರತದಿಂದ ಗಡಿಪಾರು ಮಾಡಲು ಬಾಂಗ್ಲಾದೇಶ ಇಂಟರ್‌ಪೋಲ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

ನವದೆಹಲಿ, ನವೆಂಬರ್ 19: ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ನೂರಾರು ಪ್ರತಿಭಟನಾಕಾರರ ಸಾವಿಗೆ ಕಾರಣರಾಗಿದ್ದಾರೆ ಎಂಬ ಕಾರಣ ನೀಡಿ ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಹೀಗಾಗಿ, ಅವರನ್ನು ಬಾಂಗ್ಲಾದೇಶಕ್ಕೆ ಒಪ್ಪಿಸುವಂತೆ ಭಾರತದ ಮೇಲೆ ಒತ್ತಡ ಹೇರಲಾಗಿತ್ತು. ಆದರೆ, ಈ ಬಗ್ಗೆ ಭಾರತ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದೀಗ ಬಾಂಗ್ಲಾದೇಶ ಭಾರತದಿಂದ ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡಲು ಇಂಟರ್‌ಪೋಲ್ ಸಹಾಯ ಪಡೆಯಲು ನಿರ್ಧರಿಸಿದೆ. ಹೀಗಾಗಿ, ಭಾರತಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಶೇಖ್ ಹಸೀನಾ ಅವರನ್ನು ಭಾರತದಿಂದ ಗಡೀಪಾರು ಮಾಡಲು ಬಾಂಗ್ಲಾದೇಶ ಇಂಟರ್‌ಪೋಲ್‌ಗೆ ಅರ್ಜಿ ಸಲ್ಲಿಸಲಿದೆ. ಶೇಖ್ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್ ಅಂತಾರಾಷ್ಟ್ರೀಯ ನ್ಯಾಯ ಮಂಡಳಿಯ ತೀರ್ಪನ್ನು “ಯಾವುದೇ ಪ್ರಜಾಪ್ರಭುತ್ವದ ಆದೇಶವಿಲ್ಲದ ಚುನಾಯಿತ ಸರ್ಕಾರವು ಸ್ಥಾಪಿಸಿದ ನ್ಯಾಯಮಂಡಳಿಯಿಂದ ನೀಡಲ್ಪಟ್ಟ ತೀರ್ಪು. ಇದು ರಾಜಕೀಯಪ್ರೇರಿತ” ಎಂದು ಖಂಡಿಸಿದೆ.
ಇದನ್ನೂ ಓದಿ: ಗಲ್ಲು ಶಿಕ್ಷೆಗೊಳಗಾದ ಶೇಖ್ ಹಸೀನಾ ಹಸ್ತಾಂತರಕ್ಕೆ ಭಾರತಕ್ಕೆ ಬಾಂಗ್ಲಾದೇಶ ಒತ್ತಾಯ
ಬಾಂಗ್ಲಾದೇಶದ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಹಸೀನಾ ಮತ್ತು ಕಮಲ್ ಇಬ್ಬರಿಗೂ ಮರಣದಂಡನೆ ವಿಧಿಸಿದ ನಂತರ ಅವರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿತ್ತು. ಅಲ್ಲದೆ, ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿದ ನಂತರ, ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾರತದೊಂದಿಗೆ ಹಸ್ತಾಂತರ ಒಪ್ಪಂದವನ್ನು ಉಲ್ಲೇಖಿಸಿ ಬಾಂಗ್ಲಾದೇಶಕ್ಕೆ ಮರಳಲು ಕರೆ ನೀಡಿತ್ತು. ಆದರೆ, ಭಾರತ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪ್ರೊಫೆಸರ್ ಮುಹಮ್ಮದ್ ಯೂನಸ್ ಸರ್ಕಾರವು ಭಾರತದಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಬಾಂಗ್ಲಾದ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಅವರನ್ನು ಗಡೀಪಾರು ಮಾಡಲು ಇಂಟರ್‌ಪೋಲ್‌ನಿಂದ ಸಹಾಯವನ್ನು ಕೋರಲಿದೆ.
ಇಂಟರ್‌ಪೋಲ್ ಎಂದರೇನು?:
ಇಂಟರ್‌ಪೋಲ್ ಎಂಬುದು ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಯಾಗಿದ್ದು, ಇದು ವಿಶ್ವಾದ್ಯಂತ ಪೊಲೀಸ್ ಸಹಕಾರ ಮತ್ತು ಅಪರಾಧ ನಿಯಂತ್ರಣವನ್ನು ಸುಗಮಗೊಳಿಸುತ್ತದೆ. ಗಲ್ಲುಶಿಕ್ಷೆಗೆ ಗುರಿಯಾಗಿರುವ ಶೇಖ್ ಹಸೀನಾ ಅವರನ್ನು ಭಾರತ ಬಾಂಗ್ಲಾಕ್ಕೆ ಹಸ್ತಾಂತರಿಸದಿದ್ದರೆ ಭಾರತ ಇಂಟರ್‌ಪೋಲ್ ತನಿಖೆಯನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: Sheikh Hasina: ಶೇಖ್ ಹಸೀನಾಗೆ ಗಲ್ಲುಶಿಕ್ಷೆ; ಭಾರತದಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರವಾಗುತ್ತಾರಾ ಮಾಜಿ ಪ್ರಧಾನಿ?
ಆಗಸ್ಟ್ 5, 2024 ರಂದು ಬೃಹತ್ ಪ್ರತಿಭಟನೆಗಳ ನಂತರ ಬಾಂಗ್ಲಾದೇಶದಿಂದ ಪಲಾಯನ ಮಾಡಬೇಕಾದ ನಂತರ ಶೇಖ್ ಹಸೀನಾ ಭಾರತದ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಶೇಖ್ ಹಸೀನಾ ಮರಣದಂಡನೆಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ಶೇಖ್ ಹಸೀನಾಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ತೀರ್ಪನ್ನು ಗಮನಿಸಿದ್ದೇವೆ. ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಭಾರತ ಬದ್ಧವಾಗಿದೆ ಎಂದು ಹೇಳಿದೆ. ಆದರೆ, ಬಾಂಗ್ಲಾಗೆ ಶೇಖ್ ಹಸೀನಾ ಹಸ್ತಾಂತರದ ಬಗ್ಗೆ ಯಾವುದೇ ನಿಲುವು ಪ್ರಕಟಿಸಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




