Basil Rajapaksa: ಶ್ರೀಲಂಕಾದಿಂದ ಪಲಾಯನಕ್ಕೆ ಮುಂದಾದ ಮಾಜಿ ಸಚಿವ ಬಸಿಲ್ ರಾಜಪಕ್ಸ; ದುಬೈಗೆ ಹಾರದಂತೆ ತಡೆದ ಅಧಿಕಾರಿಗಳು

Sri Lanka Crisis: ವಲಸೆ ಅಧಿಕಾರಿಗಳು ಬಸಿಲ್ ರಾಜಪಕ್ಸ ಅವರಿಗೆ ವಿಮಾನದ ಮೂಲಕ ದೇಶ ತೊರೆಯಲು ಅವಕಾಶ ನೀಡಲು ನಿರಾಕರಿಸಿದ್ದರಿಂದ ವಾಪಾಸ್ ತೆರಳಿದ್ದಾರೆ.

Basil Rajapaksa: ಶ್ರೀಲಂಕಾದಿಂದ ಪಲಾಯನಕ್ಕೆ ಮುಂದಾದ ಮಾಜಿ ಸಚಿವ ಬಸಿಲ್ ರಾಜಪಕ್ಸ; ದುಬೈಗೆ ಹಾರದಂತೆ ತಡೆದ ಅಧಿಕಾರಿಗಳು
ಬಸಿಲ್ ರಾಜಪಕ್ಸImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 12, 2022 | 11:10 AM

ಕೊಲಂಬೋ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ (Sri Lanka Economic Crisis) ಪ್ರತಿಭಟನೆಗಳು ಹೆಚ್ಚಾಗಿವೆ. ಶ್ರೀಲಂಕಾ ಅಧ್ಯಕ್ಷರ ಬಂಗಲೆಗೆ ಲಕ್ಷಾಂತರ ಜನರು ಮುತ್ತಿಗೆ ಹಾಕಿದ್ದ ಘಟನೆ ನಡೆದ ಬೆನ್ನಲ್ಲೇ ಶ್ರೀಲಂಕಾದ ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ (Basil Rajapaksa) ದುಬೈಗೆ ಪಲಾಯನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ಜನರು ಅವರನ್ನು ಗುರುತಿಸಿದ್ದು, ವಲಸೆ ಅಧಿಕಾರಿಗಳು ಅವರಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದಾರೆ. ಹೀಗಾಗಿ, ಅವರು ವಿಮಾನ ನಿಲ್ದಾಣದಿಂದ ಮನೆಗೆ ವಾಪಾಸ್ ಹಿಂತಿರುಗಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ಸಹೋದರರಾಗಿರುವ ಬಸಿಲ್ ರಾಜಪಕ್ಸ ಇಂದು ಬೆಳಗ್ಗೆ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಟರ್ಮಿನಲ್ ಮೂಲಕ ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾಗ ಜನರು ಅವರನ್ನು ಗುರುತಿಸಿ, ಅವರು ದೇಶವನ್ನು ತೊರೆಯುವುದನ್ನು ವಿರೋಧಿಸಿದ್ದಾರೆ. ಬಳಿಕ ವಲಸೆ ಅಧಿಕಾರಿಗಳು ಬಸಿಲ್ ರಾಜಪಕ್ಸ ಅವರಿಗೆ ವಿಮಾನದ ಮೂಲಕ ದೇಶ ತೊರೆಯಲು ಅವಕಾಶ ನೀಡಲು ನಿರಾಕರಿಸಿದ್ದರಿಂದ ವಾಪಾಸ್ ತೆರಳಿದ್ದಾರೆ. ಅವರು ಮಧ್ಯರಾತ್ರಿ 12.15ಕ್ಕೆ ಚೆಕ್-ಇನ್ ಕೌಂಟರ್ ತಲುಪಿದ್ದು, ಬೆಳಗಿನ ಜಾವ 3.15ರವರೆಗೆ ಅಲ್ಲಿ ಕಾಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜುಲೈ 13ಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ

ಗೋತಬಯ ರಾಜಪಕ್ಸ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ವರದಿಗಳನ್ನು ಭಾರತ ಸರ್ಕಾರದ ಮೂಲಗಳು ಅಲ್ಲಗಳೆದಿವೆ. ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಭಾರೀ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾಳೆ ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಆದರೆ, ಅದಕ್ಕೂ ಮೊದಲು ಅಧ್ಯಕ್ಷ ಗೋತಬಯ ರಾಜಪಕ್ಸೆ ಭಾರತಕ್ಕೆ ಪರಾರಿಯಾಗಿದ್ದಾರೆ ಎಂಬುದನ್ನು ಶ್ರೀಲಂಕಾದ ಮೂಲಗಳು ನಿರಾಕರಿಸಿವೆ. ಶ್ರೀಲಂಕಾದ ಯಾವುದೇ ಉನ್ನತ ನಾಯಕರು ಹೊರಗೆ ಹಾರಲು ಸಾಧ್ಯವಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕೊಲಂಬೊದಲ್ಲಿನ ರಾಜತಾಂತ್ರಿಕ ಮೂಲಗಳ ಪ್ರಕಾರ, ಅಮೆರಿಕಾ ಮತ್ತು ಶ್ರೀಲಂಕಾದ ಉಭಯ ಪೌರತ್ವವನ್ನು ಹೊಂದಿರುವ ಬೆಸಿಲ್ ರಾಜಪಕ್ಸ ಅವರು ದುಬೈಗೆ ತೆರಳುತ್ತಿದ್ದರು. ಆದರೆ ವಿಮಾನ ನಿಲ್ದಾಣವನ್ನು ಸುತ್ತುವರಿದ ಪ್ರತಿಭಟನಾಕಾರರ ಒತ್ತಡದ ಮೇರೆಗೆ ಅವರ ಪ್ರಯಾಣಕ್ಕೆ ವಲಸೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಯಾವುದೇ ರಾಜಕೀಯ ನಾಯಕರು ವಿಶೇಷವಾಗಿ ರಾಜಪಕ್ಸೆ ವಂಶಸ್ಥರು ದೇಶದಿಂದ ಪಲಾಯನ ಮಾಡಲು ಅನುಮತಿಸದಂತೆ ಪ್ರತಿಭಟನಾಕಾರರು ಚೆಕ್ ಪೋಸ್ಟ್‌ಗಳನ್ನು ಹಾಕಿದ್ದಾರೆ. ಬಸಿಲ್ ಅವರ ಹಿರಿಯ ಸಹೋದರರಾದ ಮಹಿಂದ ರಾಜಪಕ್ಸ ಮತ್ತು ಗೋತಬಯ ರಾಜಪಕ್ಸ ಇಬ್ಬರೂ ಕೊಲಂಬೊದಲ್ಲಿ ಭದ್ರತಾ ರಕ್ಷಣೆಯಲ್ಲಿದ್ದಾ. ಗೋತಬಯ ರಾಜಪಕ್ಸ ನಾಳೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.