ರಾಜೀನಾಮೆ ಪತ್ರಕ್ಕೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಸಹಿ; ನಾಳೆ ಸಂಸತ್ನಲ್ಲಿ ಘೋಷಣೆ
Gotabaya Rajapaksa ಈ ರಾಜೀನಾಮೆ ಪತ್ರವನ್ನು ಸಂಸತ್ನ ಸ್ಪೀಕರ್ಗೆ ಹಸ್ತಾಂತರಿಸಿದ್ದು ಅವರು ಜುಲೈ 13 (ಬುಧವಾರ) ಸಾರ್ವಜನಿಕ ಘೋಷಣೆ ಮಾಡಲಿದ್ದಾರೆ.
ಕೊಲಂಬೊ: ಜುಲೈ 13ಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರುವ ಶ್ರೀಲಂಕಾದ (Sri Lnaka) ಅಧ್ಯಕ್ಷ ಗೊಟಬಯ ರಾಜಪಕ್ಸೆ (Gotabaya Rajapaksa) ಸೋಮವಾರ ತಮ್ಮ ರಾಜೀನಾಮೆ ಪತ್ರಕ್ಕೆ ಸಹಿಹಾಕಿದ್ದಾರೆ. ಈ ರಾಜೀನಾಮೆ ಪತ್ರವನ್ನು ಸಂಸತ್ನ ಸ್ಪೀಕರ್ಗೆ ಹಸ್ತಾಂತರಿಸಿದ್ದು ಅವರು ಜುಲೈ 13 (ಬುಧವಾರ) ಸಾರ್ವಜನಿಕ ಘೋಷಣೆ ಮಾಡಲಿದ್ದಾರೆ. ಸಹಿ ಹಾಕಿರುವ ರಾಜೀನಾಮೆ ಪತ್ರವನ್ನು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ನೀಡಿದ್ದು ಅದನ್ನು ಅವರು ಸಂಸತ್ ಸ್ಪೀಕರ್ಗೆ ನೀಡಲಿದ್ದಾರೆ. ಸ್ಪೀಕರ್ ಮಹಿಂದಾ ಯಾಪ ಅಬೈವರ್ದೆನಾ (Mahinda Yapa Abeywardena) ಅವರು ನಾಳೆ ಸಂಸತ್ನಲ್ಲಿ ಗೊಟಬಯ ರಾಜಪಕ್ಸೆ ಅವರ ಅಧಿಕಾರ ಅವಧಿ ಮುಗಿದಿದೆ ಎಂದು ಘೋಷಣೆ ಮಾಡಲಿದ್ದಾರೆ ಎಂದು ಡೈಲಿ ಮಿರರ್ ವರದಿ ಮಾಡಿದೆ.
ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಬುಧವಾರ ಶ್ರೀಲಂಕಾ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜುಲೈ 20ರಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದು ಅಲ್ಲಿಯವರೆಗೆ ತಾತ್ಕಾಲಿಕವಾಗಿ ವಿಕ್ರಮಸಿಂಘೆ ಅಧ್ಯಕ್ಷ ಸ್ಥಾನದಲ್ಲಿರಲಿದ್ದಾರೆ. ಸಂವಿಧಾನದ ಪ್ರಕಾರ ಸಂಸತ್ನಲ್ಲಿ ಮತಚಲಾವಣೆ ಮಾಡುವ ಮೂಲಕ ಪಕ್ಷದ ನಾಯಕರು ಜುಲೈ 20ರಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ ಎಂದು ಸ್ಪೀಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜುಲೈ 19ರಂದು ನಾಮನಿರ್ದೇಶನ ಸಲ್ಲಿಸಲು ಕರೆ ನೀಡಲಾಗಿದೆ.
ಇಲ್ಲಿಯವರೆಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೆಂದರೆ ಪ್ರಧಾನಿ ಮತ್ತು ವಿಪಕ್ಷ ನೇತಾರ ಸಜಿತ್ ಪ್ರೇಮದಾಸ. ಶ್ರೀಲಂಕಾದ ಆರ್ಥಿಕತೆಯನ್ನು ಮೇಲೆತ್ತಲು ತಾನು ಸಿದ್ದ ಎಂದಿದ್ದಾರೆ ಪ್ರೇಮದಾಸ.
ತಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶ್ರೀಲಂಕಾ ಅಧ್ಯಕ್ಷರು ಶನಿವಾರ ಘೋಷಿಸಿದ್ದರು. ಆದಾಗ್ಯೂ ಅಧ್ಯಕ್ಷರು ಬೇರೊಂದು ದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ದೇಶದಲ್ಲೇ ಇದ್ದಾರೆ ಎಂದು ಸಂಸತ್ನ ಸ್ಪೀಕರ್ ಹೇಳಿದ್ದಾರೆ. ಸಶಸ್ತ್ರ ಪಡೆಗಳ ರಕ್ಷಣೆಯಲ್ಲಿ ಅಧ್ಯಕ್ಷ ರಾಜಪಕ್ಸೆ ಇದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
Published On - 12:54 pm, Tue, 12 July 22