ಟ್ರಂಪ್​ಗೆ ಭಾರೀ ಹೊಡೆತ; ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕದ ಅಧಿಕಾರಿ ರಾಜೀನಾಮೆ

ಅಮೆರಿಕದ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥರಾದ ಜೋಸೆಫ್ ಕೆಂಟ್ ಇಂದು ರಾಜೀನಾಮೆ ನೀಡುವ ಮೂಲಕ ಡೊನಾಲ್ಡ್​ ಟ್ರಂಪ್​ಗೆ ಶಾಕ್ ನೀಡಿದ್ದಾರೆ. ಈಗಾಗಲೇ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ಪಟ್ಟುಹಿಡಿದು ದಾಳಿ ನಡೆಸುತ್ತಿದೆ. ಇದರ ನಡುವೆ ಜೋಸೆಫ್ ಕೆಂಟ್ ಅವರ ಈ ನಿರ್ಧಾರ ಟ್ರಂಪ್​ಗೆ ದೊಡ್ಡ ಹೊಡೆತ ನೀಡಿದೆ. ಈ ರಾಜೀನಾಮೆಯ ಬಳಿಕ ಜೋಸೆಫ್ ಕೆಂಟ್ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಲು ಕಾರಣವೇನೆಂಬುದರ ಬಗ್ಗೆಯೂ ಅಚ್ಚರಿಯ ಮಾಹಿತಿ ನೀಡಿದ್ದಾರೆ.

ಟ್ರಂಪ್​ಗೆ ಭಾರೀ ಹೊಡೆತ; ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕದ ಅಧಿಕಾರಿ ರಾಜೀನಾಮೆ
Joe Kent

Updated on: Mar 17, 2026 | 8:45 PM

ವಾಷಿಂಗ್ಟನ್, ಮಾರ್ಚ್ 17: ಇಸ್ರೇಲ್ ಜೊತೆ ಸೇರಿಕೊಂಡು ಇರಾನ್ (Iran War) ಮೇಲೆ ಅಮೆರಿಕ ಕೂಡ ದಂಡೆತ್ತಿ ಹೋಗಿತ್ತು. ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ, ಸುಪ್ರೀಂ ನಾಯಕ ಖಮೇನಿಯನ್ನು ಕೊಂದರೆ ಸೋಲೊಪ್ಪಿಕೊಂಡು ಇರಾನ್ ತಮ್ಮ ಅಡಿಯಾಳಾಗುತ್ತದೆ ಎಂಬ ಭ್ರಮೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ (Donald Trump) ಇರಾನ್ ಸರಿಯಾಗೇ ಬೆವರಿಳಿಸುತ್ತಿದೆ. ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ನಡೆಸುತ್ತಲೇ ಇರುವ ಇರಾನ್ ತಾನು ನಾಶವಾಗುವುದಾದರೆ ಅಮೆರಿಕ ಮತ್ತು ಇಸ್ರೇಲ್​ ಅನ್ನು ನಾಶಮಾಡಿಯೇ ತೀರುತ್ತೇನೆ ಎಂದು ಶಪಥ ಮಾಡಿದಂತಿದೆ. ಇರಾನ್​ನ ದಾಳಿಯಿಂದ ತತ್ತರಿಸಿರುವ ಅಮೆರಿಕದ ಅಧ್ಯಕ್ಷ ಟ್ರಂಪ್​ಗೆ ಮತ್ತೊಂದು ಆಘಾತ ಉಂಟಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೇ ಅಮೆರಿಕದ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋ ಕೆಂಟ್ ರಾಜೀನಾಮೆ ನೀಡಿದ್ದಾರೆ.

ಜೋ ಕೆಂಟ್ ಯಾರೆಂಬುದೇ ಬೇರೆ ದೇಶದ ಜನರಿಗೆ ಗೊತ್ತಿರಲಿಲ್ಲ. ಆದರೆ, ಅವರ ರಾಜೀನಾಮೆಯ ಬಳಿಕ ಆ ಹೆಸರು ಇದೀಗ ಸಾಮಾಜಿಕ ಜಾಲತಾಣದಲ್ಲೂ ಟ್ರೆಂಡ್ ಆಗುತ್ತಿದೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಮೆರಿಕದ ದಾಳಿಯ ಬಗ್ಗೆ ಕೆಲವು ಮಹತ್ವದ ಸಂಗತಿಗಳನ್ನು ಅವರು ಬಹಿರಂಗಪಡಿಸಿದ್ದಾರೆ. ಇರಾನ್ ಮೇಲೆ ಅಮೆರಿಕ ದಾಳಿ ನಡೆಸಲು ಇಸ್ರೇಲ್ ಕಾರಣ ಎಂದು ಜೋ ಕೆಂಟ್ ತಿಳಿಸಿದ್ದಾರೆ. “ಇರಾನ್ ಯಾವುದೇ ಬೆದರಿಕೆಯನ್ನು ಒಡ್ಡಿರಲಿಲ್ಲ, ಇಸ್ರೇಲ್​ನ ಒತ್ತಡದಿಂದಾಗಿ ಅಮೆರಿಕ ಯುದ್ಧವನ್ನು ಪ್ರಾರಂಭಿಸಿತು” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಇರಾನ್​ನ ಕರಾವಳಿ ಮೇಲೆ ಬಾಂಬ್ ಹಾಕುತ್ತೇನೆ; ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಶಪಥ ಮಾಡಿದ ಟ್ರಂಪ್

ವರದಿಗಳ ಪ್ರಕಾರ, ಇರಾನ್‌ನಲ್ಲಿ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಯುದ್ಧದ ಕಾರಣದಿಂದಲೇ ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋ ಕೆಂಟ್ ರಾಜೀನಾಮೆ ನೀಡಿದ್ದಾರೆ. “ಇರಾನ್ ಅಮೆರಿಕಕ್ಕೆ ಯಾವುದೇ ಬೆದರಿಕೆಯೊಡ್ಡಿರಲಿಲ್ಲ. ಇಸ್ರೇಲ್ ಪದೇಪದೆ ಒತ್ತಡ ಹೇರಿದ್ದರಿಂದ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಲು ಕೈಜೋಡಿಸಿತು. ಬಹಳ ಯೋಚನೆಯ ಮಾಡಿ ನಾನು ಇಂದಿನಿಂದಲೇ ಜಾರಿಗೆ ಬರುವಂತೆ ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕನ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ” ಎಂದು ಜೋ ಕೆಂಟ್ ತಮ್ಮ ಎಕ್ಸ್​ ಪೇಜಿನಲ್ಲಿ ಪೋಸ್ಟ್‌ ಮಾಡಿದ್ದಾರೆ.

 

“ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ನಾನು ಒಳ್ಳೆಯ ಮನಸ್ಸಿನಿಂದ ಬೆಂಬಲಿಸಲು ಸಾಧ್ಯವಿಲ್ಲ. ಇರಾನ್ ನಮ್ಮ ರಾಷ್ಟ್ರಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಲಿಲ್ಲ. ಇಸ್ರೇಲ್ ಮತ್ತು ಅದರ ಲಾಬಿಯ ಒತ್ತಡದಿಂದಾಗಿ ನಾವು ಈ ಯುದ್ಧವನ್ನು ಪ್ರಾರಂಭಿಸಬೇಕಾಯಿತು” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಇರಾನ್​ನ ಭದ್ರತಾ ಮುಖ್ಯಸ್ಥರ ಹತ್ಯೆಯಾಗಿದೆ ಎಂದ ಇಸ್ರೇಲ್; ಕೆಲವೇ ಗಂಟೆಗಳಲ್ಲಿ ಕೈಬರಹದ ಪೋಸ್ಟ್ ಹಾಕಿದ ಅಲಿ ಲಾರಿಜಾನಿ!

ಅಮೆರಿಕದ ಗುಪ್ತಚರ ಇಲಾಖೆ, ಪೆಂಟಗನ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಸೇರಿದಂತೆ ಅನೇಕ ಯುಎಸ್ ಸರ್ಕಾರಿ ಇಲಾಖೆಗಳಲ್ಲಿ ಭಯೋತ್ಪಾದನಾ ನಿಗ್ರಹ ಗುಪ್ತಚರವನ್ನು ಸಂಘಟಿಸುವಲ್ಲಿ ಜೋ ಕೆಂಟ್ ಪ್ರಮುಖ ಪಾತ್ರ ವಹಿಸಿದ್ದರು. ಈ ಸಂಘರ್ಷ ತೀವ್ರಗೊಂಡ ನಂತರ ಟ್ರಂಪ್ ಅವರ ಸರ್ಕಾರದಿಂದ ಹೊರಬಂದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಕೆಂಟ್ ಕೂಡ ಒಬ್ಬರು. ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (NCTC) ನಿರ್ದೇಶಕರಾಗಿ ಕೆಂಟ್ ದೇಶಕ್ಕೆ ಭಯೋತ್ಪಾದಕ ಬೆದರಿಕೆಗಳನ್ನು ವಿಶ್ಲೇಷಿಸುವ ಮತ್ತು ಗುರುತಿಸುವ ಜವಾಬ್ದಾರಿಯುತ ಪ್ರಮುಖ US ಗುಪ್ತಚರ ಸಂಸ್ಥೆಯನ್ನು ಮುನ್ನಡೆಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:44 pm, Tue, 17 March 26

Follow Us