Bill Gates: ಹೆಂಡತಿ ಮುಂದೆ ಹೆಂಗಸರ ದೌರ್ಬಲ್ಯದ ಬಿಲ್​ ಗೇಟ್ಸ್​ ಬಯಲು; ವಿಚ್ಛೇದನದ ಕಾರಣ ಅಂತೂ ಗೊತ್ತಾಯ್ತು

|

Updated on: May 17, 2021 | 12:11 PM

ಬಿಲ್​ ಗೇಟ್ಸ್ ಮೈಕ್ರೋಸಾಫ್ಟ್ ಆಡಳಿತ ಮಂಡಳಿ ತೊರೆದಿದ್ದಕ್ಕೆ ಕಾರಣ ಮಹಿಳಾ ಸಿಬ್ಬಂದಿಯೊಬ್ಬರು ನೀಡಿದ ದೂರು ಎಂಬುದು ಈಗ ಬಯಲಾಗಿದೆ. ಅಷ್ಟೇ ಅಲ್ಲ, ಮೆಲಿಂಡಾ- ಬಿಲ್ ವಿವಾಹ ವಿಚ್ಛೇದನದ ಹಿಂದೆಯೂ ಇಂಥ ಕಾರಣಗಳಿವೆ.

Bill Gates: ಹೆಂಡತಿ ಮುಂದೆ ಹೆಂಗಸರ ದೌರ್ಬಲ್ಯದ ಬಿಲ್​ ಗೇಟ್ಸ್​ ಬಯಲು; ವಿಚ್ಛೇದನದ ಕಾರಣ ಅಂತೂ ಗೊತ್ತಾಯ್ತು
ಬಿಲ್- ಮೆಲಿಂಡಾ ಗೇಟ್ಸ್ (ಸಂಗ್ರಹ ಚಿತ್ರ)
Follow us on

ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮೆಲಿಂಡಾ ವಿವಾಹ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದಾರೆ ಅಂದಾಗ ದೊಡ್ಡ ಆಶ್ಚರ್ಯಕರ ಚಿಹ್ನೆ ಬಹುತೇಕರ ಮುಖದ ಮೇಲೆ ಕಾಣಿಸಿಕೊಂಡಿತ್ತು. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಯ ಚುಂಗು ಹಿಡಿದು ಮಾಧ್ಯಮಗಳ ವರದಿಗಳನ್ನು ತಡಕಾಡಿದ್ದೇ ಬಂದಿತ್ತು ಹೊರತು ಉತ್ತರ ಸಿಕ್ಕಿರಲಿಲ್ಲ. ಆದರೆ ಈಗ ಹಳೆಯ ಲೈಂಗಿಕ ಪ್ರಕರಣವೊಂದು ಬಯಲಾಗಿದೆ. 2000ನೇ ಇಸವಿಯಲ್ಲಿ ಬಿಲ್​ ಗೇಟ್ಸ್​ಗೆ ಕಂಪೆನಿಯ ಮಹಿಳಾ ಸಿಬ್ಬಂದಿಯೊಂದಿಗೆ ಅಕ್ರಮ ಸಂಬಂಧ ಇತ್ತು. ಆ ಬಗ್ಗೆ ಕಂಪೆನಿಯಿಂದ ತನಿಖೆ ನಡೆಸುವಾಗಲೇ ಬಿಲ್ ಗೇಟ್ಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಪ್ರಕರಣ ಹೊರಗೆ ಬಂದಿದ್ದು ಹೇಗೆ ಅಂದರೆ, 2019ರಲ್ಲಿ ಮೈಕ್ರೋಸಾಫ್ಟ್ ಸಿಬ್ಬಂದಿ ಆಡಳಿತ ಮಂಡಳಿಗೆ ಪತ್ರ ಬರೆದು, 56 ವರ್ಷದ ಮೆಲಿಂಡಾ ಗೇಟ್ಸ್ ಇದನ್ನು ಓದಬೇಕು ಎಂದು ಕೇಳಿಕೊಂಡಿದ್ದರು ಎಂಬ ಆರೋಪ ಬಂದಿತ್ತು. 2020ರ ಮಾರ್ಚ್​ನಲ್ಲಿ 65 ವರ್ಷದ ಗೇಟ್ಸ್ ದಿಢೀರನೆ ಆಡಳಿತ ಮಂಡಳಿಯನ್ನು ತೊರೆದರು. ಆಗಿನ್ನೂ ತನಿಖೆ ನಡೆಯುತ್ತಲೇ ಇತ್ತು.

ಆಕ್ರಮ ಸಂಬಂಧದ ಸುಳಿವು ಸಿಕ್ಕ ಮೇಲೆ ಬಿಲ್​ ಗೇಟ್ಸ್ ತಮ್ಮ ಹುದ್ದೆ ತೊರೆಯಬೇಕು ಎಂದು ಮೈಕ್ರೋಸಾಫ್ಟ್ ಆಡಳಿತಮಂಡಳಿ ನಿರ್ಧರಿಸಿತು ಎಂದು ವಾಲ್​ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಅದೇ ದಿನ ಬರ್ಕ್​ಶೈರ್ ಹಾಥ್​ವೇ ಮಂಡಳಿಯನ್ನೂ ಗೇಟ್ಸ್ ತೊರೆದಿದ್ದಾರೆ. ಸಿಇಒ ಸತ್ಯ ನಾಡೆಲ್ಲಾಗೆ ತಾಂತ್ರಿಕ ಸಲಹೆಗಾರನಾಗಿ ಮುಂದುವರಿಯುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಬಿಲ್​ ಗೇಟ್ಸ್ ಹೇಳಿದ್ದರು. ವಾಲ್​ಸ್ಟ್ರೀಟ್ ಜರ್ನಲ್ ಜತೆಗೆ ಮೈಕ್ರೋಸಾಫ್ಟ್ ವಕ್ತಾರ ಮಾತನಾಡಿ, 2019ರ ದ್ವಿತೀಯಾರ್ಧದಲ್ಲಿ ಮೈಕ್ರೋಸಾಫ್ಟ್​ಗೆ ಪತ್ರವೊಂದು ಬಂತು. 2000ನೇ ಇಸವಿಯಲ್ಲಿ ಕಂಪೆನಿ ಉದ್ಯೋಗಿಯೊಬ್ಬರ ಜತೆ ಸಂಬಂಧ ಬೆಳೆಸುವುದಕ್ಕೆ ಕೇಳಿದ್ದಾರೆ ಎಂಬ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಮೈಕ್ರೋಸಾಫ್ಟ್ ಮಂಡಳಿಯ ಸಮಿತಿಯು ಪರಿಶೀಲನೆ ನಡೆಸಿ, ಸಂಪೂರ್ಣವಾದ ವಿಚಾರಣೆ ನಡೆಸುವಂತೆ ಹೊರಗಿನ ಕಾನೂನು ಸಂಸ್ಥೆಯೊಂದನ್ನು ನೇಮಕ ಮಾಡಿದೆ. ಇನ್ನು ಬಿಲ್​ ಗೇಟ್ಸ್​ ಮೇಲೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ ಆರೋಪ ಮಾಡಿದ ಉದ್ಯೋಗಿಗೆ ಅಗತ್ಯ ಬೆಂಬಲವನ್ನು ಸಹ ಒದಗಿಸಲಾಗಿದೆ.

ಇಪ್ಪತ್ತು ವರ್ಷಗಳ ಹಳೆಯ ಸಂಬಂಧ
ಆ ಸಂಬಂಧಕ್ಕೂ ಮಂಡಳಿ ತೊರೆಯುವ ನಿರ್ಧಾರಕ್ಕೂ ತಳುಕು ಹಾಕುವಂತಿಲ್ಲ ಎಂತಿಲ್ಲ ಎಂದು ಬಿಲ್​ ಗೇಟ್ಸ್ ವಕ್ತಾರರು ಹೇಳಿದ್ದಾರೆ. ಇಪ್ಪತ್ತು ವರ್ಷಗಳ ಹಳೆಯ ಸಂಬಂಧ ಅದು. ಸೌಹಾರ್ದಯುತವಾಗಿ ಬಗೆಹರಿದಿದೆ. ದಾನ- ದತ್ತಿ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡರು ಎಂದು ತಿಳಿಸಿದ್ದಾರೆ. ತಮ್ಮ ವಿವಾಹೇತರ ಸಂಬಂಧ ಹಾಗೂ ಈಗ ವಿಚ್ಛೇದನ ನೀಡಿರುವ ಮೆಲಿಂಡಾಗೆ ವಂಚನೆ ಮಾಡಿರುವ ಬಗ್ಗೆ ಬಿಲ್​ ಗೇಟ್ಸ್ ಮೊದಲ ಬಾರಿಗೆ ಒಪ್ಪಿಕೊಂಡಿದ್ದನ್ನು ಎರಡು ಪ್ರತ್ಯೇಕ ವರದಿಗಳಲ್ಲಿ ಕಾಣಬಹುದಾಗಿದೆ.

ನ್ಯೂಯಾರ್ಕ್ ಟೈಮ್ಸ್ ಭಾನುವಾರದಂದು ಮಾಡಿರುವ ವರದಿಯಲ್ಲಿ, ಅದಾಗಲೇ ಮೆಲಿಂಡಾರನ್ನು ಮದುವೆಯಾಗಿದ್ದ ಬಿಲ್​ ಗೇಟ್ಸ್​, ಮೈಕ್ರೋಸಾಫ್ಟ್ ಮತ್ತು ದತ್ತಿ ಸಂಸ್ಥೆಯಲ್ಲಿ ಕೆಲಸ ಮಾಡುವ ಇಬ್ಬರು ಮಹಿಳೆಯರನ್ನು ಡೇಟ್ಸ್​ಗೆ ಹೇಗೆ ಕರೆದರು ಎಂಬ ಬಗ್ಗೆ ತಿಳಿಸಲಾಗಿದೆ. ಇನ್ನು ಗೇಟ್ಸ್ ಆಪ್ತರಾದ ಮೈಕೇಲ್ ಲಾರ್ಸನ್ ಮೇಲೆ ಬಂದ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮೆಲಿಂಡಾ ಬೇಸರದಲ್ಲಿದ್ದರು ಅಂತಲೂ ವರದಿ ಆಗಿದೆ.

ಜೆಫ್ರಿ ಎಪ್​ಸ್ಟೀನ್​ ಜತೆಗೆ ಹತ್ತು ಸಲಕ್ಕೂ ಹೆಚ್ಚು ಭೇಟಿ
ಡೇಲಿ ಬೀಸ್ಟ್ ವರದಿ ಪ್ರಕಾರ, ಮ್ಯಾನ್​ಹಟನ್​ನಲ್ಲಿರುವ ಟೌನ್​ಹೌಸ್​ನಲ್ಲಿ 2011 ಮತ್ತು 2014ರ ಮಧ್ಯೆ ಶಿಕ್ಷೆಗೆ ಒಳಗಾದ ಪೆಡೋಫಿಲಿ ಜೆಫ್ರಿ ಎಪ್​ಸ್ಟೀನ್​ನನ್ನು ಹತ್ತಕ್ಕೂ ಹೆಚ್ಚು ಬಾರಿ ಭೇಟಿ ಆಗಿ, ಮದುವೆಯ ಬಗ್ಗೆ ಸಲಹೆ ಕೇಳಿದ್ದಾರೆ ಎನ್ನಲಾಗಿದೆ. ಮೆಲಿಂಡಾ ಜತೆಗಿನ ಮದುವೆ “ನಂಜಿನಂಥದ್ದು” ಎಂದು ಇಬ್ಬರೂ ತಮಾಷೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನು 2008ರಲ್ಲಿ ಅಪ್ರಾಪ್ತೆಯೊಬ್ಬಳನ್ನು ವೇಶ್ಯಾವಾಟಿಕೆಗೆ ಕರೆದಿದ್ದಕ್ಕೆ ಸಂಬಂಧಿಸಿದಂತೆ ಎಪ್​ಸ್ಟೀನ್​ಗೆ ಶಿಕ್ಷೆಯಾಗಿತ್ತು. ಆ ಇಮೇಜ್​ ಬದಲಾಯಿಸಿಕೊಳ್ಳುವುದಕ್ಕೆ ತನ್ನ ದತ್ತಿ ಸಂಸ್ಥೆ ಸೇರುವಂತೆ ಬಿಲ್​ ಗೇಟ್ಸ್ ಕೇಳಿಕೊಂಡಿದ್ದರು. ಇನ್ನು ಹೇಗಾದರೂ ಮದುವೆಯಿಂದ ಹೊರಬರಬೇಕು ಎಂಬ ಕಾರಣಕ್ಕೆ ಎಪ್​ಸ್ಟೀನ್​ನನ್ನು ಪದೇಪದೇ ಭೇಟಿ ಆಗುತ್ತಿದ್ದರು ಎಂದು ಆ ಸಂದರ್ಭಗಳಲ್ಲಿ ಸ್ಥಳದಲ್ಲಿ ಇರುತ್ತಿದ್ದ ಮೂಲಗಳು ತಿಳಿಸಿವೆ.

ಇನ್ನು ಟೈಮ್ಸ್ ವರದಿಯ ಪ್ರಕಾರ, 2006ರಲ್ಲಿ ಪ್ರಸಂಟೇಷನ್ ಸಂದರ್ಭದಲ್ಲಿ ಬಿಲ್​ ಗೇಟ್ಸ್​ ಆಕೆಯನ್ನು ನೋಡಿದ್ದಾರೆ. ಒಂದು ವೇಳೆ ಇದು ಸರಿಹೊಂದಲಿಲ್ಲ ಅಂದರೆ ಏನೂ ಆಗಿಯೇ ಇಲ್ಲ ಎಂದುಕೊಂಡು ಬಿಡಿ ಆ ಸಿಬ್ಬಂದಿಗೆ ಇ ಮೇಲ್ ಮಾಡಿದ್ದಾರೆ ಗೇಟ್ಸ್ ಎನ್ನಲಾಗಿದೆ. ಆ ರೀತಿ ಸಿಬ್ಬಂದಿಯು ಪರಿಗಣಿಸಿದ್ದಾರೆ, ದೈಹಿಕ ಸಂಬಂಧದ ತನಕ ಮುಂದುವರಿದಿಲ್ಲ. ಕೆಲವು ವರ್ಷಗಳ ನಂತರ ಬಿಲ್​- ಮೆಲಿಂಡಾ ಗೇಟ್ಸ್ ಫೌಂಡೇಷನ್ ಮೂಲಕ ಸಿಬ್ಬಂದಿಯನ್ನು ಕೇಳಿದ್ದಾರೆ. ನ್ಯೂಯಾರ್ಕ್ ಪ್ರವಾಸದಲ್ಲಿ ಇರುವಾಗ, ನಾನು ನಿನ್ನನ್ನ ನೋಡಬೇಕು. ನನ್ನ ಜತೆಗೆ ಡಿನ್ನರ್​ಗೆ ಬರ್ತೀಯಾ ಎಂದು ಕೇಳಿದ್ದಾರೆ ಗೇಟ್ಸ್. ಇದರಿಂದ ನನಗೆ ಮುಜುಗರ ಆಯಿತು. ಆದರೆ ನಕ್ಕು ಸುಮ್ಮನಾದೆ ಎಂದು ಮಹಿಳಾ ಸಿಬ್ಬಂದಿ ಹೇಳಿದ್ದಾರೆ.

ಆತನ ಹೆಸರು ಮೈಕೇಲ್ ಲಾರ್ಸನ್
ಬಿಲ್​ ಗೇಟ್ಸ್​ನ ಈ ಸ್ವಭಾವದ ಬಗ್ಗೆ ಮೆಲಿಂಡಾಗೆ ಗೊತ್ತಿತ್ತೋ ಇಲ್ಲವೋ, ಆದರೆ ಗೇಟ್ಸ್​ನ ಪರಮಾಪ್ತ ಮೈಕೇಲ್​ ಲಾರ್ಸನ್ ಹೇಗೆ ಅಂತ ಗೊತ್ತಿತ್ತು. ಈ ಹಿಂದೆ ಮಹಿಳೆಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಆತನ ವಿರುದ್ಧ ತನಿಖೆಗೆ ಸ್ವತಃ ಮೆಲಿಂಡಾ ಆದೇಶಿಸಿದ್ದರು. ಕೆಲ ಕಾಲದ ನಂತರ ಆ ಮಹಿಳೆ ಜತೆಗೆ ಸಂಧಾನ ಮಾತುಕತೆ ನಡೆಸಿ, ಆ ಪ್ರಕರಣವನ್ನು ಕೊನೆಗೊಳಿಸಲಾಯಿತು. ವಿಚಾರಣೆ ನಡೆಯುವ ವೇಳೆಯಲ್ಲಿ ರಜಾದ ಮೇಲಿದ್ದ ಲಾರ್ಸನ್​ ಮತ್ತೆ ವಾಪಸ್​ ಬಂದು, ಈಗ ಕ್ಯಾಸ್ಕೇಡ್ ಇನ್ವೆಸ್ಟ್​ಮೆಂಟ್ ಮುನ್ನಡೆಸುತ್ತಿದ್ದಾರೆ. ಈ ಬಗ್ಗೆ ಮೆಲಿಂಡಾಗೆ ಅಸಮಾಧಾನ ಇದೆ. ಆದರೆ ಜೆಫ್ರಿ ಎಪ್​ಸ್ಟೀನ್ ಜತೆಗೆ ಗೇಟ್ಸ್​ ಸ್ನೇಹದ ಬಗ್ಗೆ 2019ರ ಅಕ್ಟೋಬರ್​ನಲ್ಲಿ ವರದಿ ಆದ ಮೇಲೆ ಇನ್ನೂ ಹೆಚ್ಚು ಸಿಟ್ಟಾಗಿದ್ದಾರೆ. ಅದು 2011ರಿಂದ ಗೇಟ್ಸ್​ ಮತ್ತು ಎಪ್​ಸ್ಟೀನ್ ಸ್ನೇಹ ಇದೆ. ಆತ ಅಪ್ರಾಪ್ತೆಯೊಬ್ಬಳನ್ನು ವೇಶ್ಯಾವಾಟಿಕೆಗೆ ಆಹ್ವಾನಿಸಿದ ಆರೋಪದಲ್ಲಿ ಅಪರಾಧಿ ಎಂದು ಘೋಷಿಸಿದ ಮೂರು ವರ್ಷದ ಮೇಲೆ ಅವರಿಬ್ಬರ (ಬಿಲ್ ಗೇಟ್ಸ್- ಎಪ್​ಸ್ಟೀನ್) ಸ್ನೇಹ ಶುರುವಾಗಿತ್ತು.

ಬಿಲ್​ ಗೇಟ್ಸ್- ಮೆಲಿಂಡಾ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ದಂಪತಿ. ಈಚೆಗಷ್ಟೇ ತಮ್ಮ ವಿವಾಹ ವಿಚ್ಛೇದನ ಕುರಿತು ಘೋಷಿಸಿದ್ದರು. ಭಾರತದ ರೂಪಾಯಿ ಲೆಕ್ಕದಲ್ಲಿ 10 ಲಕ್ಷ ಕೋಟಿಯಷ್ಟು ಆಸ್ತಿಯು ಸಹ ಇವರ ಹೆಸರಲ್ಲಿದೆ. ಬಿಲ್- ಮೆಲಿಂಡಾ ಗೇಟ್ಸ್ ಹೆಸರಲ್ಲಿ ದತ್ತಿ ಸಂಸ್ಥೆ ಕೂಡ ಇದೆ. ಇನ್ನು ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ಇದನ್ನೂ ಓದಿ: Bill Gates divorce: ಬಿಲ್- ಮೆಲಿಂಡಾ ಗೇಟ್ಸ್ ಡೈವೋರ್ಸ್ ಕೇಸ್​ನಲ್ಲಿ ದುಡ್ಡಿನ ವ್ಯವಹಾರ ಏನು, ಎತ್ತ?

(Bill Gates step down Microsoft board after woman employee complain against him about inappropriate relationship. Bill and Melinda Gate divorce revealing now)