
ಲಾ ಪಾಜ್, ಸೆಪ್ಟೆಂಬರ್ 05: ದಕ್ಷಿಣ ಅಮೆರಿಕದ ರಾಷ್ಟ್ರ ಬೊಲಿವಿಯಾದ ರಾಜಧಾನಿ ಲಾ ಪಾಜ್ ಸಮೀಪದ ಮಿಲಿಟರಿ ನೆಲೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 10ಜನರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಶ್ಚಿಮ ಬೊಲಿವಿಯಾದ ವಿಯಾಚಾ ನಗರದಲ್ಲಿರುವ ಸೇನಾ ಬ್ಯಾರಕ್‌ನ ಶಸ್ತ್ರಾಸ್ತ್ರ ಸಂಗ್ರಹಣಾ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವು ಮನೆಗಳು ಜಖಂಗೊಂಡಿದ್ದು, ಅವಶೇಷಗಳಡಿ ಸಿಲುಕಿರುವ ಇತರ ಏಳು ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ವಿಯಾಚಾ ನಗರದ ಸೇನಾ ಸಂಕೀರ್ಣದಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ ಸುಮಾರು2.30 ರ ವೇಳೆಗೆ ಪಟಾಕಿ ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಈ ಸ್ಫೋಟ ಸಂಭವಿಸಿದೆ. ಕ್ಷಣಾರ್ಧದಲ್ಲಿ ಆಕಾಶದೆತ್ತರಕ್ಕೆ ದಟ್ಟ ಕಪ್ಪು ಹೊಗೆ ವ್ಯಾಪಿಸಿದ್ದು, ಇಡೀ ನಗರವೇ ಕಂಪಿಸಿದೆ.
ಸ್ಥಳೀಯ ಆರೋಗ್ಯ ನಿರ್ದೇಶಕಿ ರೀಟಾ ನೆಬ್ರಸ್ಕಾ ನೀಡಿದ ಮಾಹಿತಿಯ ಪ್ರಕಾರ, ಘಟನೆಯಲ್ಲಿ ಇದುವರೆಗೆ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಗಾಯಗೊಂಡ 62 ಮಂದಿಯಲ್ಲಿ 52 ಮಂದಿ ಸ್ಥಳೀಯ ನಾಗರಿಕರಾಗಿದ್ದು, ಉಳಿದವರು ಕರ್ತವ್ಯದಲ್ಲಿದ್ದ ಯೋಧರಾಗಿದ್ದಾರೆ. ಪುಟ್ಟ ಬಾಲಕಿ ಸೇರಿದಂತೆ ಸ್ಥಿತಿ ಗಂಭೀರವಾಗಿರುವ 14 ಮಂದಿಯನ್ನು ತುರ್ತು ಚಿಕಿತ್ಸೆಗಾಗಿ ಲಾ ಪಾಜ್ ನಗರದ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಮತ್ತಷ್ಟು ಓದಿ: Car Blast Case: ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್ಪಿ ಹೇಳಿದ್ದೇನು?
ಮತ್ತೊಂದು ಸ್ಫೋಟದ ಆತಂಕ
150 ಮೀಟರ್ ದೂರವಿರಲು ಎಚ್ಚರಿಕೆ: ಸ್ಫೋಟ ನಡೆದ ಸ್ಥಳದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಶಾಖ ಮತ್ತು ಸುಡದ ಸ್ಫೋಟಕಗಳು ಇರುವುದರಿಂದ, ಮತ್ತೊಮ್ಮೆ ಸ್ಫೋಟ ಸಂಭವಿಸುವ ಸಾಧ್ಯತೆಯಿದೆ ಎಂದು ರಕ್ಷಣಾ ಪಡೆಗಳು ಎಚ್ಚರಿಸಿವೆ. ಸಾರ್ವಜನಿಕರು ಸೇನಾ ನೆಲೆಯಿಂದ ಕನಿಷ್ಠ 150 ಮೀಟರ್ ದೂರವಿರುವಂತೆ ಸೂಚಿಸಲಾಗಿದೆ.
ಮನೆಗಳಿಗೆ ವ್ಯಾಪಕ ಹಾನಿ: ಸೇನಾ ನೆಲೆಯ ಗೋಡೆಗೆ ಹೊಂದಿಕೊಂಡಂತಿದ್ದ ಡಜನ್‌ಗೂ ಹೆಚ್ಚು ವಸತಿ ಕಟ್ಟಡಗಳ ಕಿಟಕಿ ಗಾಜುಗಳು, ಛಾವಣಿಗಳು ಸ್ಫೋಟದ ಒತ್ತಡಕ್ಕೆ ಛಿದ್ರಗೊಂಡಿವೆ.
ತನಿಖೆಗೆ ಸೇನೆ ಆದೇಶ: ಬೊಲಿವಿಯಾದ ರಕ್ಷಣಾ ಸಚಿವ ಅರ್ನೆಸ್ಟೊ ಜಸ್ಟಿನಿಯಾನೋ ಪ್ರತಿಕ್ರಿಯಿಸಿ, ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಮಿಲಿಟರಿ ಹಾಗೂ ಸಿವಿಲ್ ಪೊಲೀಸರ ಜಂಟಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಯಾಚಾ ನಗರದ ಭೌಗೋಳಿಕತೆ: ಸುಮಾರು 1 ಲಕ್ಷ ಜನಸಂಖ್ಯೆ ಹೊಂದಿರುವ ವಿಯಾಚಾ ಪಟ್ಟಣವು ಬೊಲಿವಿಯಾದ ಆಡಳಿತ ರಾಜಧಾನಿ ಲಾ ಪಾಜ್‌ನಿಂದ ಕೇವಲ 30 ಕಿಲೋಮೀಟರ್ 19 ಮೈಲಿ ದೂರದಲ್ಲಿದೆ. ಗಾಯಾಳುಗಳ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಆಂಬ್ಯುಲೆನ್ಸ್ ಹಾಗೂ ಪರಿಹಾರ ಪಡೆಗಳನ್ನು ಯುದ್ಧೋಪಾದಿಯಲ್ಲಿ ನಿಯೋಜಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ