ಕೋವಿಡ್ ಪ್ರಕರಣ ಹೆಚ್ಚಳ: ಪ್ರಯಾಣ ಕಾರಿಡಾರ್ ಪಟ್ಟಿಯಿಂದ ಯುಎಇ ತೆಗೆದುಹಾಕಿದ ಬ್ರಿಟನ್
ಮಂಗಳವಾರ ಬೆಳಗ್ಗಿನ ಜಾವ 4 ಗಂಟೆಗೆ ಯುಎಇಯಿಂದ ಇಂಗ್ಲೆಂಡ್, ವೇಲ್ಸ್, ಸ್ಕಾಟ್ ಲೆಂಡ್ ಮತ್ತು ಉತ್ತರ ಐರ್ಲೆಂಡ್ಗೆ ಬಂದಿಳಿದ ಪ್ರಯಾಣಿಕರು 10 ದಿನಗಳ ಕಾಲ ಸ್ವಯಂ ಐಸೋಲೇಟ್ ಆಗಬೇಕು ಎಂದು ಸಾರಿಗೆ ಸಂಪರ್ಕ ಇಲಾಖೆ ನಿರ್ದೇಶಿಸಿದೆ.
ಲಂಡನ್: ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಯುಕ್ತ ಅರಬ್ ರಾಷ್ಟ್ರವನ್ನು (ಯುಎಇ) ತಮ್ಮ ಪ್ರಯಾಣ ಕಾರಿಡಾರ್ ಪಟ್ಟಿಯಿಂದ (ಎರಡು ದೇಶಗಳ ನಡುವಿನ ವಿಮಾನಯಾನ) ತಗೆದು ಹಾಕಿರುವುದಾಗಿ ಬ್ರಿಟನ್ ಸಾರಿಗೆ ಸಂಪರ್ಕ ಇಲಾಖೆ ಹೇಳಿದೆ.
ಮಂಗಳವಾರ ಮುಂಜಾನೆ 4 ಗಂಟೆಗೆ ಯುಎಇಯಿಂದ ಇಂಗ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್ಗೆ ಬಂದಿಳಿದ ಪ್ರಯಾಣಿಕರು 10 ದಿನಗಳ ಕಾಲ ಸ್ವಯಂ ಐಸೋಲೇಟ್ ಆಗಬೇಕು ಎಂದು ಸಾರಿಗೆ ಸಂಪರ್ಕ ಇಲಾಖೆ ನಿರ್ದೇಶಿಸಿದೆ. ಕಳೆದ ಒಂದು ವಾರದಲ್ಲಿ ಯುಎಇಯಲ್ಲಿ ಶೇ. 52ರಷ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ.
ಬ್ರಿಟನ್ ನ ಪ್ರಯಾಣ ಕಾರಿಡಾರ್ ಪಟ್ಟಿಯಿಂದ ತಕ್ಷಣವೇ ಯುಎಇಯನ್ನು ತೆಗೆದುಹಾಕಬೇಕು ಎಂದು ಬ್ರಿಟಿಷ್ ಸಾರಿಗೆ ಸಚಿವ ಗ್ರಾಂಟ್ ಶಪ್ಸ್ ಟ್ವೀಟ್ ಮಾಡಿದ್ದಾರೆ .
The LATEST data indicates we need to immediately remove the #UAE from the #TRAVELCORRIDOR list. From 0400 Tuesday 12 Jan anyone arriving from the UAE will need to SELF-ISOLATE.
— Rt Hon Grant Shapps MP (@grantshapps) January 11, 2021
ಈಗಿರುವ ನಿಯಮಗಳ ಪ್ರಕಾರ ಯುಎಇ ಸೇರಿದಂತೆ ಇತರ ದೇಶಗಳಿಂದ ಬರುವ ಪ್ರಯಾಣಿಕರು ಇಂಗ್ಲೆಂಡ್ ಅಥವಾ ಸ್ಕಾಟ್ಲೆಂಡ್ ಗೆ ಪ್ರಯಾಣ ಬೆಳೆಸುವುದಕ್ಕಿಂತ ಮೂರು ದಿನ ಮುನ್ನ ಕೋವಿಡ್ ಪರೀಕ್ಷೆಗೊಳಗಾಗಿ ರೋಗ ಇಲ್ಲ ಎಂಬ ಪರೀಕ್ಷಾ ವರದಿ ಸಲ್ಲಿಸಬೇಕು.
ಒಂದೆಡೆ ಕೋವಿಡ್ನಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಾಡುತ್ತಿತ್ತು. ಈ ಹೊತ್ತಲ್ಲಿ ಬ್ರಿಟನ್ ಕೋವಿಡ್ ಲಸಿಕೆ ಪ್ರಕ್ರಿಯೆ ಆರಂಭಿಸಿದ್ದು, ಇದು ಸಮಯದ ವಿರುದ್ಧದ ಓಟ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದರು.
ಯುಎಇನಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಿದ್ದು, ಕಳೆದ ವಾರ ಅಬುದಾಬಿಯಲ್ಲಿ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ V ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದಿದೆ.
ವೇಗ ಪಡೆದುಕೊಂಡ ರೂಪಾಂತರ ಕೊರೊನಾ: ಬ್ರಿಟನ್ನಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸಿದ ಪ್ರಧಾನಿ ಬೋರಿಸ್ ಜಾನ್ಸನ್