Explainer | ಫೈಝರ್ ಲಸಿಕೆ ಹಾಕಿಸಿಕೊಂಡವರು ಕೊರೊನಾ ಸೋಂಕಿನಿಂದ ಎಷ್ಟು ಸೇಫ್?

ಫೈಝರ್ ಲಸಿಕೆ ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿಯೇ? ಎಂದಿನಿಂದ ಬರುತ್ತೆ ಸೋಂಕು ನಿರೋಧಕ ಸಾಮರ್ಥ್ಯ? ಲಸಿಕೆ ಪಡೆದವರಿಂದ ಸೋಂಕು ಹರಡುವುದಿಲ್ಲವೇ? ಲಸಿಕೆ ಹಾಕಿಕೊಂಡವರಿಗೆ ಮಾಸ್ಕ್​ ಬಳಕೆ ಬೇಡವೇ? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

  • preethi shettigar
  • Published On - 17:05 PM, 8 Dec 2020
Explainer | ಫೈಝರ್ ಲಸಿಕೆ ಹಾಕಿಸಿಕೊಂಡವರು ಕೊರೊನಾ ಸೋಂಕಿನಿಂದ ಎಷ್ಟು ಸೇಫ್?
ಸಾಂದರ್ಭಿಕ ಚಿತ್ರ

ಲಂಡನ್: ಫೈಝರ್ ಮತ್ತು ಬಯೋಎನ್​ಟೆಕ್ ಕಂಪನಿಗಳು ಅಭಿವೃದ್ಧಿ ಪಡಿಸಿರುವ ಕೋವಿಡ್-19 ಲಸಿಕೆಯನ್ನು ಬ್ರಿಟನ್ ಮಂಗಳವಾರ ಬಿಡುಗಡೆ ಮಾಡಿದೆ. ಈ ಮೂಲಕ ಕೋವಿಡ್-19 ಲಸಿಕೆಯನ್ನು ಲೋಕಾರ್ಪಣೆಗೊಳಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 80 ವರ್ಷಕ್ಕಿಂತ ಮೇಲ್ಪಟ್ಟರಿಗೆ, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ನರ್ಸಿಂಗ್ ಹೋಮ್ ಸಿಬ್ಬಂದಿಗೆ ಲಸಿಕೆ ವಿತರಣೆಯಲ್ಲಿ ಆದ್ಯತೆ ಸಿಗಲಿದೆ.

ಲಸಿಕೆ ಪರಿಣಾಮಕಾರಿಯೇ?

ದುರ್ಬಲ ಕೊರೊನಾ ವೈರಾಣುಗಳ ವಂಶವಾಹಿಯಿಂದ ಫೈಝರ್ ಲಸಿಕೆ ತಯಾರಿಸಲಾಗಿದೆ. ಲಸಿಕೆಯನ್ನು ತೋಳಿಗೆ ಚುಚ್ಚಲಾಗುತ್ತದೆ. ಲಸಿಕೆಯ ಎರಡು ಡೊಸ್​ಗಳನ್ನು ಮೂರು ವಾರಗಳ ಅಂತರದಲ್ಲಿ ನೀಡಲಾಗುತ್ತದೆ. ಲಸಿಕೆ ಪಡೆದುಕೊಂಡವರಲ್ಲಿ ಶೇ 95ರಷ್ಟು ಮಂದಿಯಲ್ಲಿ ಸೋಂಕು ಮರುಕಳಿಸಿಲ್ಲ, ಗಂಭೀರ ಅಡ್ಡಪರಿಣಾಮಗಳೂ ಕಾಣಿಸಿಕೊಂಡಿಲ್ಲ ಎಂದು ಫೈಝರ್ ಹೇಳಿದೆ. ಮೊದಲ ಡೋಸ್​ಗೆ ಹೋಲಿಸಿದರೆ ಎರಡನೇ ಡೋಸ್ ನಂತರ ತುಸು ಅಡ್ಡಪರಿಣಾಮಗಳು ಕಂಡು ಬಂದಿವೆ. ಪ್ರಾಯೋಗಿಕವಾಗಿ ಲಸಿಕೆ ಪಡೆದ ಶೇ 3.8 ಸ್ವಯಂಸೇವಕರಲ್ಲಿ ಆಯಾಸ ಮತ್ತು ಶೇ 2ರಷ್ಟು ಸ್ವಯಂಸೇವಕರಲ್ಲಿ ತಲೆನೋವು ಕಾಣಿಸಿಕೊಂಡಿದೆ.

ಎಂದಿನಿಂದ ಬರುತ್ತೆ ಸೋಂಕು ನಿರೋಧಕ ಸಾಮರ್ಥ್ಯ?

ಫೈಝರ್ ಲಸಿಕೆ ತೆಗೆದುಕೊಂಡ ತಕ್ಷಣವೇ ನಿಮ್ಮ ದೇಹಕ್ಕೆ ಕೊರೊನಾ ಸೋಂಕು ನಿರೋಧಕ ಸಾಮರ್ಥ್ಯ ಬಂದಿರುತ್ತದೆ ಎಂದುಕೊಳ್ಳಲು ಆಗುವುದಿಲ್ಲ. 2ನೇ ಲಸಿಕೆ ಪಡೆದುಕೊಂಡ 7 ದಿನಗಳ ನಂತರವಷ್ಟೇ ಈ ಲಸಿಕೆಯು ಕೊರೊನಾ ಸೋಂಕನ್ನು ನಿಮ್ಮಿಂದ ದೂರ ಇಡಬಲ್ಲದು. ಮೊದಲ ಲಸಿಕೆ ತೆಗೆದುಕೊಂಡ ಸುಮಾರು ಒಂದು ತಿಂಗಳ ಕಾಲ ನಿಮ್ಮ ದೇಹಕ್ಕೆ ಸೋಂಕಿನ ಬಾಧೆ ಹಾಗೆಯೇ ಇರುತ್ತದೆ.

ಲಸಿಕೆ ಪಡೆದವರಿಂದ ಸೋಂಕು ಹರಡುವುದಿಲ್ಲವೇ?
ಲಸಿಕೆ ಪಡೆದುಕೊಂಡವರಲ್ಲಿ ಕೊರೊನಾ ಸೋಂಕು ನಿರೋಧಕ ಶಕ್ತಿ ಬಂದಿರುತ್ತದೆ. ಅಂದರೆ ಅವರು ಕೋವಿಡ್-19ರಿಂದ ಸುರಕ್ಷಿತ. ಆದರೆ ಇಂಥವರ ದೇಹದಿಂದ ವ್ಯಾಪಿಸುವ ವೈರಾಣುಗಳಿಂದ ಇನ್ನೊಬ್ಬರಿಗೆ ಸೋಂಕು ಬರುವುದಿಲ್ಲ ಎಂದು ಹೇಳಲು ಆಗದು. ಸ್ಟೆರ್​ಲೈಸಿಂಗ್​ ನಿರೋಧಕ ಶಕ್ತಿ ಎನ್ನಲಾಗುವ ಇಂಥ ಸಾಮರ್ಥ್ಯವನ್ನು ಕೆಲ ಲಸಿಕೆಗಳು ನೀಡುತ್ತವೆ. ಹೆಪಟೈಟಿಸ್-ಎ ಲಸಿಕೆಯನ್ನು ಉದಾಹರಣೆಯಾಗಿ ನೋಡಬಹುದು. ಆದರೆ ಫೈಝರ್ ಕಂಪನಿಯ ಲಸಿಕೆ ಇಂಥ ಸಾಮರ್ಥ್ಯ ನೀಡುತ್ತದೆ ಎನ್ನಲು ಕ್ಲಿನಿಕಲ್ ಟ್ರಯಲ್​ಗಳಲ್ಲಿ ಪುರಾವೆಯಿಲ್ಲ. ಈ ಲಸಿಕೆ ತೆಗೆದುಕೊಂಡವರಿಗೆ ಸೋಂಕು ಬರುವುದಿಲ್ಲ ಎಂದಷ್ಟೇ ಕಂಪನಿ ಹೇಳುತ್ತದೆ. ಹರಡುವ ಬಗ್ಗೆ ಅದು ಏನನ್ನೂ ಸ್ಪಷ್ಟವಾಗಿ ಹೇಳಿಲ್ಲ.

ಎಷ್ಟು ಕಾಲ ಪರಿಣಾಮಕಾರಿ?
ಈ ಲಸಿಕೆಯು ಕೊರೊನಾ ಸೋಂಕನ್ನು ಎಷ್ಟು ಕಾಲ ತಡೆಯಬಲ್ಲದು ಎಂಬುದಕ್ಕೂ ಸರಿಯಾದ ಪುರಾವೆಗಳು ಇಲ್ಲ. ಲಸಿಕೆಯನ್ನು ಸಾರ್ವಜನಿಕರಿಗೆ ನೀಡಿದ ಕೆಲ ತಿಂಗಳ ನಂತರ ಈ ಕುರಿತು ಮಾಹಿತಿ ಸಿಗಬಹುದು.

ಲಸಿಕೆ ಹಾಕಿಕೊಂಡವರಿಗೆ ಮಾಸ್ಕ್​ ಬಳಕೆ ಬೇಡವೇ?
ವೈರಸ್​ಗಳ ವಿರುದ್ಧ ಯಾವುದೇ ಲಸಿಕೆಯು ಶೇ100ರ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುವುದಿಲ್ಲ. ಹೀಗಾಗಿ ಕೊರೊನಾ ಸೋಂಕು ಸಾರ್ವತ್ರಿಕವಾಗಿ ನಿಯಂತ್ರಣಕ್ಕೆ ಬರುವವರೆಗೆ ಮಾಸ್ಕ್ ಧರಿಸುವುದು, ಕೈಗಳನ್ನು ಶುಭ್ರವಾಗಿಟ್ಟುಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳ ಪಾಲನೆ ಅನಿವಾರ್ಯ. ಲಸಿಕೆ ಹಾಕಿಸಿಕೊಂಡಿದ್ದರೂ ಈ ಮೊದಲಿನಂತೆಯೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಬ್​ನಂಥ ಹೆಚ್ಚು ಜನರು ಸೇರುವ ಸ್ಥಳಗಳಿಂದ ದೂರ ಉಳಿಯಬೇಕು ಎಂದು ಜಾನ್ಸ್​ ಹಾಪ್​ಕಿನ್ಸ್​ ಬ್ಲೂಂಬರ್ಗ್​ ಸ್ಕೂಲ್ ಆಫ್ ಪಬ್ಲಿಕ್​ ಹೆಲ್ತ್​ನ ಸಾಂಕ್ರಾಮಿಕ ರೋಗಗಳ ತಜ್ಞೆ ಡಾ.ಅನಿತಾ ಶೇಟ್ ಹೇಳುತ್ತಾರೆ.

(ಮಾಹಿತಿ: ರಾಯಿಟರ್ಸ್​)

ಬ್ರಿಟನ್​ನಲ್ಲಿ ಕೋವಿಡ್-19 ಲಸಿಕೆ ಸಾರ್ವಜನಿಕ ವಿತರಣೆ ಆರಂಭ: 90 ವರ್ಷದ ಹಿರಿಯಜ್ಜಿಗೆ ಮೊದಲ ಲಸಿಕೆ