ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್ಗೆ ಕ್ಯಾನ್ಸರ್: ವಿಡಿಯೋ ಸಂದೇಶದಲ್ಲಿ ಹೇಳಿದ್ದಿಷ್ಟು
ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್ ಇತ್ತೀಚೆಗೆ ಹಲವಾರು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ಹೊಟ್ಟೆಯ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದರು. ನಂತರ ಅವರ ಆರೋಗ್ಯದ ವಿಚಾರ ಗುಟ್ಟಾಗಿ ಉಳಿದಿತ್ತು. ಇದೀಗ ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಅವರು, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ನವದೆಹಲಿ, ಮಾರ್ಚ್ 23: ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್ (Kate Middleton) ಕ್ಯಾನ್ಸರ್‌ಗೆ (Cancer) ಕಿಮೋಥೆರಪಿಗೆ ಒಳಗಾಗುತ್ತಿರುವುದಾಗಿ ಶುಕ್ರವಾರ ಬಹಿರಂಗಪಡಿಸಿದ್ದಾರೆ. ವೀಡಿಯೊ ಸಂದೇಶದಲ್ಲಿ ಮಾಹಿತಿ ನೀಡಿದ ಅವರು, ‘ನಾನು ಚೆನ್ನಾಗಿದ್ದೇನೆ ಮತ್ತು ಪ್ರತಿದಿನ ಸುಧಾರಿಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಈ ವರ್ಷದ ಜನವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದು ಅವರ ಆರೋಗ್ಯದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿತ್ತು. ಜನವರಿಯಲ್ಲಿ, ಕೇಟ್ ಮಿಡಲ್ಟನ್ ಲಂಡನ್‌ನಲ್ಲಿ ಹೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದನ್ನು ಆರಂಭದಲ್ಲಿ ಕ್ಯಾನ್ಸರ್ ಅಲ್ಲ ಎಂದು ಭಾವಿಸಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ನಂತರದ ವೈದ್ಯಕೀಯ ಪರೀಕ್ಷೆಗಳು ಕೇಟ್ ಮಿಡಲ್ಟನ್ ಕ್ಯಾನ್ಸರ್ನಿಂದ ಬಳಲುತ್ತಿರುವುದನ್ನು ದೃಢಪಡಿಸಿದ್ದವು.
ವೀಡಿಯೊ ಸಂದೇಶದಲ್ಲಿ ಕೇಟ್ ಮಿಡಲ್ಟನ್, ‘ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ನಿಮ್ಮ ಬೆಂಬಲ ಮತ್ತು ಶುಭ ಹಾರೈಕೆಗಳಿಗಾಗಿ ನಾನು ವೈಯಕ್ತಿಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ಇಡೀ ಕುಟುಂಬಕ್ಕೆ ಕಳೆದ ಎರಡು ತಿಂಗಳು ಬಹಳಷ್ಟು ಕಷ್ಟಕರ ದಿನಗಳಾಗಿವೆ. ಆದರೆ ಅದ್ಭುತ ವೈದ್ಯಕೀಯ ತಂಡ ನನ್ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಅದಕ್ಕಾಗಿ ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ಹೊಟ್ಟೆಯ ಶಸ್ತ್ರ ಚಿಕಿತ್ಸೆ ಮಾಡಿದಾಗ ಕ್ಯಾನ್ಸರ್ ಪತ್ತೆಯಾಗಿರಲಿಲ್ಲ’ ಎಂದು ಹೇಳಿದ್ದಾರೆ
ಕೆನ್ಸಿಂಗ್ಟನ್ ಪ್ಯಾಲೇಸ್ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ವೇಲ್ಸ್ ರಾಜಕುಮಾರಿ ಬಗ್ಗೆ ಮಾಹಿತಿ ನೀಡಲಾಗಿದ್ದು, ಮಿಡಲ್ಟನ್ಗೆ ಶಸ್ತ್ರಚಿಕಿತ್ಸೆಯ ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಗಳಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಹಾಗಾಗಿ ವೈದ್ಯಕೀಯ ತಂಡವು ಕೀಮೋಥೆರಪಿಯ ಕೋರ್ಸ್ ಅನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿತ್ತು. ಈಗ ಆ ಚಿಕಿತ್ಸೆಯ ಆರಂಭಿಕ ಹಂತದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೇಗನ್ ಮಾರ್ಕೆಲ್ ಕೇಟ್ ಜತೆಗಿದ್ದು ಧೈರ್ಯ ತುಂಬಿದ್ದಾರೆ. ಕೇಟ್ ಅವರು ಆರೋಗ್ಯದ ಬಗ್ಗೆ ಮಾರ್ಚ್ 22 ರಂದು ವೀಡಿಯೊವನ್ನು ಹಂಚಿಕೊಂಡ ನಂತರ ಡ್ಯೂಕ್ ಮತ್ತು ಡಚೆಸ್ ಆಫ್ ಸಸೆಕ್ಸ್‌ನಿಂದ ಅಧಿಕೃತ ಹೇಳಿಕೆ ಬಂದಿದೆ.
ಇದನ್ನೂ ಓದಿ: ರಷ್ಯಾ: ಕಂಡು ಕೇಳರಿಯದ ಭಾರೀ ಭಯೋತ್ಪಾದನೆ, ಹತ್ತಾರು ಬಾಂಬು ಸ್ಪೋಟ, ನೂರಾರು ಮಂದಿ ಸಾವು
ಪ್ರಸ್ತುತ ಕ್ಯಾನ್ಸರ್ ಆರಂಭಿಕ ಹಂತದಲ್ಲಿದ್ದೇನೆ ಎಂದಿರುವ ಕೇಟ್, ಇತರ ಕ್ಯಾನ್ಸರ್ ಪೀಡಿತರ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕ್ಯಾನ್ಸರ್ ಪೀಡಿತರು ಭರವಸೆಯನ್ನು ಕಳೆದುಕೊಳ್ಳದೆ ಸೂಕ್ತ ಚಿಕಿತ್ಸೆಯನ್ನು ಪಡೆಯುವಂತೆ ಸಲಹೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ