ಬ್ರಿಟನ್‌ನ ರಾಣಿ ಎಲಿಜಬೆತ್​ಗೆ 95ನೇ ಹುಟ್ಟುಹಬ್ಬ, ಸಾರ್ವಜನಿಕ ಆಚರಣೆಗಳಿಲ್ಲ

ಬ್ರಿಟನ್‌ನ ರಾಣಿ ಎಲಿಜಬೆತ್​ಗೆ 95ನೇ ಹುಟ್ಟುಹಬ್ಬ, ಸಾರ್ವಜನಿಕ ಆಚರಣೆಗಳಿಲ್ಲ
ರಾಣಿ ಎಲಿಜಬೆತ್

Queen Elizabeth Birthday: ಸುದೀರ್ಘ ಕಾಲ ಅಧಿಕಾರದಲ್ಲಿದ್ದ ಎಲಿಜಬೆತ್ ಹುಟ್ಟುಹಬ್ಬದಂದು ಅರಮನೆಯಲ್ಲೇ ಇರಲಿದ್ದು, ಹುಟ್ಟು ಹಬ್ಬದ ಕಾರ್ಯಕ್ರಮ ಸರಳವಾಗಿ ಇಲ್ಲವೇ ಸಂಭ್ರಮಾಚರಣೆ ಯಾವುದೂ ಇಲ್ಲದೆಯೂ ಇರಬಹುದು ಎಂದು ಬಲ್ಲಮೂಲಗಳು ಹೇಳಿವೆ.

Rashmi Kallakatta

|

Apr 21, 2021 | 10:31 AM

ಬ್ರಿಟನ್‌: ಬ್ರಿಟನ್‌ನ ರಾಣಿ ಎಲಿಜಬೆತ್ ಬುಧವಾರ 95 ನೇ ವರ್ಷಕ್ಕೆ ಕಾಲಿಟ್ಟಿದ್ದು, ಯಾವುದೇ ಸಂಭ್ರಮಾಚರಣೆಗಳು ಇರುವುದಿಲ್ಲ. ಏಳು ದಶಕಗಳ ಕಾಲ ದಾಂಪತ್ಯ ಜೀವನದಲ್ಲಿ ಜತೆಯಾಗಿದ್ದ ಪತಿ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದರಿಂದ ರಾಣಿಹುಟ್ಟು ಹಬ್ಬಕ್ಕೆ ಆಚರಣೆಗಳಿರುವುದಿಲ್ಲ. 1947 ರಲ್ಲಿ ಎಲಿಜಬೆತ್ ಅವರನ್ನು ವಿವಾಹವಾದ ಪ್ರಿನ್ಸ್ ಫಿಲಿಪ್ ಏಪ್ರಿಲ್ 9 ರಂದು ತಮ್ಮ 99 ನೇ ವಯಸ್ಸಿನಲ್ಲಿ ನಿಧನರಾದರು. ವಿಂಡ್ಸರ್ ಕ್ಯಾಸಲ್‌ನಲ್ಲಿ ಶನಿವಾರ ನಡೆದ ಅವರ ಅಂತ್ಯಕ್ರಿಯೆಯಲ್ಲಿ ರಾಯಲ್ಸ್ ಕುಟುಂಬ ಫಿಲಿಪ್ ಅವರಿಗೆ ಗೌರವ ನಮನ ಸಲ್ಲಿಸಿದ್ದರು. ಕೊವಿಡ್ ನಿರ್ಬಂಧಗಳ ಕಾರಣದಿಂದಾಗಿ ರಾಣಿ ಫಿಲಿಪ್‌ ವಿಯೋಗದ ಕಾರ್ಯಕ್ರಮಗಳಲ್ಲಿ ಏಕಾಂಗಿಯಾಗಿ ಕುಳಿತು ದುಃಖಿಸಿದ್ದರು.

ಸುದೀರ್ಘ ಕಾಲ ಅಧಿಕಾರದಲ್ಲಿದ್ದ ಎಲಿಜಬೆತ್ ಹುಟ್ಟುಹಬ್ಬದಂದು ಅರಮನೆಯಲ್ಲೇ ಇರಲಿದ್ದು, ಹುಟ್ಟು ಹಬ್ಬದ ಕಾರ್ಯಕ್ರಮ ಸರಳವಾಗಿ ಇಲ್ಲವೇ ಸಂಭ್ರಮಾಚರಣೆ ಯಾವುದೂ ಇಲ್ಲದೆಯೂ ಇರಬಹುದು ಎಂದು ಬಲ್ಲಮೂಲಗಳು ಹೇಳಿವೆ.

ಆದಾಗ್ಯೂ, ಈ ವರ್ಷ ರಾಜಮನೆತನದವರು ಎರಡು ವಾರಗಳ ಶೋಕಾಚರಣೆ ಮಾಡುವುದರಿಂದ ಸಾರ್ವಜನಿಕ ಸಮಾರಂಭಗಳು ಕಡಿಮೆ ಇರುತ್ತದೆ. ಲಂಡನ್ ಟವರ್ ಅಥವಾ ರಾಜಧಾನಿಯ ಹೈಡ್ ಪಾರ್ಕ್‌ನಲ್ಲಿ ರಾಣಿಯ ಹುಟ್ಟುಹಬ್ಬದಂದು ಸಾಮಾನ್ಯವಾಗಿ ನಡೆಯುವ ಯಾವುದೇ ಗನ್ ಸೆಲ್ಯೂಟ್‌ಗಳು ಇರುವುದಿಲ್ಲ.

ರಾಣಿಗೆ ಅಧಿಕೃತ ಜನ್ಮದಿನವೂ ಇದೆ. ಇದನ್ನು ಸಾಮಾನ್ಯವಾಗಿ ಜೂನ್‌ ಎರಡನೇ ಶನಿವಾರದಂದು ಹೆಚ್ಚು ಆಡಂಬರದಿಂದ ಆಚರಿಸಲಾಗುತ್ತದೆ.

ಫಿಲಿಪ್ ಅವರ ನಿಧನವು ಎಲಿಜಬೆತ್ ಅವರ ಹತ್ತಿರದ ಮತ್ತು ಅತ್ಯಂತ ವಿಶ್ವಾಸಾರ್ಹತೆ ವ್ಯಕ್ತಿಯನ್ನು ಕಸಿದುಕೊಂಡಿದೆ. 69 ವರ್ಷಗಳ ಆಳ್ವಿಕೆಯ ಅವಧಿಯಲ್ಲಿ ಫಿಲಿಪ್ ಸದಾ ಎಲಿಜಬೆತ್ ಜತೆಯಾಗಿ ನಿಂತಿದ್ದರು.  ರಾಜಮನೆತನದಲ್ಲಿ ಜನಾಂಗೀಯ ನಿಂದನೆ ಇದೆ ಎಂಬ ಆರೋಪ, ಮೊಮ್ಮಗ ಪ್ರಿನ್ಸ್ ಹ್ಯಾರಿ ಮತ್ತು ಆತನ ಹೆಂಡತಿ ಮೇಘನ್ ಅವರಿಂದ ನಿರ್ಲಕ್ಷ್ಯ ಮೊದಲಾದ ಬಿಕ್ಕಟ್ಟು ಎದುರಿಸುತ್ತಿರುವ ಹೊತ್ತಿನಲ್ಲಿಯೇ ಫಿಲಿಪ್ ನಿಧನ ಸಂಭವಿಸಿದೆ.

ಪತಿಯ ವಿಯೋಗದಿಂದ ಏಕಾಂಗಿಯಾಗಿರುವ ರಾಣಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಮುಂದಿನ ದಿನಗಳಲ್ಲಿ ಕುಟುಂಬ ಸದಸ್ಯರು ಅರಮನೆಗೆ ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಪ್ರತಿಕ್ರಿಯಸಲು ಬಕಿಂಗ್​ಹ್ಯಾಮ್ ಅರಮನೆಯ ವಕ್ತಾರರು ನಿರಾಕರಿಸಿದ್ದು, ಫಿಲಿಪ್ ಅಂತ್ಯಕ್ರಿಯೆಯ ನಂತರ ನಡೆಯುವ ರಾಜಕುುಟಂಬದ ಎಲ್ಲಕಾರ್ಯಕ್ರಮಗಳು ಖಾಸಗಿ ಆಗಿರುತ್ತವೆ ಎಂದಿದ್ದಾರೆ .

1926 ಏಪ್ರಿಲ್ 21ರಂದು ಮಧ್ಯ ಲಂಡನ್‌ನ ಬ್ರೂಟನ್ ಸ್ಟ್ರೀಟ್‌ ನಲ್ಲಿ ಜನಿಸಿದ ಎಲಿಜಬೆತ್ ರಾಣಿಯಾಗುವ ನಿರೀಕ್ಷೆಯಿಲ್ಲದೇ ಬೆಳದವರು.ಎಲಿಜಬೆತ್ ಅವರ ಹಿರಿಯ ಸಹೋದರ ಎಡ್ವರ್ಡ್ VIII 1936 ರಲ್ಲಿ ಅಮೆರಿಕಾದ ವಿಚ್ಛೇದಿತ ವಾಲಿಸ್ ಸಿಂಪ್ಸನ್ ಅವರನ್ನು ಮದುವೆಯಾಗಲು ಅಧಿಕಾರ ತ್ಯಜಿಸಿದಾಗ, ಅಪ್ಪ ಜಾರ್ಜ್ VI ಅವರ ಅಧಿಕಾರ ಎಲಿಜಬೆತ್​ಗೆ ಬಂದು ರಾಣಿಯಾಗಿದ್ದರು.

ಎಲಿಜಬೆತ್ 1952 ರಲ್ಲಿ ತಮ್ಮ 25 ನೇ ವಯಸ್ಸಿನಲ್ಲಿ ಸಿಂಹಾಸನಕ್ಕೆ ಏರಿದ್ದು, ಸೆಪ್ಟೆಂಬರ್ 2015 ರಲ್ಲಿ ಬ್ರಿಟನ್‌ನ ಸುದೀರ್ಘ ಆಳ್ವಿಕೆಯ ರಾಣಿಯಾಗಿದ್ದ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾ ಅವರ ಅಧಿಕಾರವಧಿಗಿಂತ ಹೆಚ್ಚಿನ ಅವಧಿ ಆಳ್ವಿಕೆ ನಡೆಸಿದವರಾಗಿದ್ದಾರೆ.

ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ 15 ಮಾಜಿ ಬ್ರಿಟಿಷ್ ವಸಾಹತುಗಳಿಗೆ ಎಲಿಜಬೆತ್ ರಾಣಿಯಾಗಿದ್ದಾರೆ.

ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್​ರ 70 ವರ್ಷಗಳ ಸಂಗಾತಿ ಎಡಿನ್​ಬರ್ಗ್ ಅರಸ ಪ್ರಿನ್ಸ್ ಫಿಲಿಪ್ ಇನ್ನಿಲ್ಲ

Follow us on

Related Stories

Most Read Stories

Click on your DTH Provider to Add TV9 Kannada