ಕ್ಯಾಲಿಫೋರ್ನಿಯಾದಲ್ಲಿ ಸಣ್ಣ ವಿಮಾನ ಪತನ: ಇಬ್ಬರು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

ಕ್ಯಾಲಿಫೋರ್ನಿಯಾದ ಫ್ರೆಸ್ನೋದಲ್ಲಿ ಸಿಯೆರಾ ಸ್ಕೈ ಪಾರ್ಕ್ ಬಳಿ ಸಣ್ಣ ವಿಮಾನ ಪತನಗೊಂಡು ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ತಂಡಗಳು ತಕ್ಷಣ ಕಾರ್ಯಪ್ರವೃತ್ತವಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿವೆ. ಘಟನೆಯಿಂದ ತಾತ್ಕಾಲಿಕ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. FAA ಮತ್ತು NTSB ಸಂಸ್ಥೆಗಳು ಅಪಘಾತದ ನಿಖರ ಕಾರಣ ಪತ್ತೆಗೆ ತನಿಖೆ ನಡೆಸುತ್ತಿವೆ. ಇದು 'ರೆಸಿಡೆನ್ಶಿಯಲ್ ಏವಿಯೇಷನ್ ಕಮ್ಯುನಿಟಿ'ಯಲ್ಲಿ ಸಂಭವಿಸಿದ ದುರಂತ.

ಕ್ಯಾಲಿಫೋರ್ನಿಯಾದಲ್ಲಿ ಸಣ್ಣ ವಿಮಾನ ಪತನ: ಇಬ್ಬರು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ
ವಿಮಾನ ಪತನ
Image Credit source: california post

Updated on: Sep 06, 2026 | 8:49 AM

ಫ್ರೆಸ್ನೋ , ಸೆಪ್ಟೆಂಬರ್ 06: ಅಮೆರಿಕದ ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ಶನಿವಾರ ಮಧ್ಯಾಹ್ನ ಸಣ್ಣ ವಿಮಾನವೊಂದು ಪತನಗೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಬ್ಲೈಥ್ ಅವೆನ್ಯೂದಲ್ಲಿರುವ ‘ಸಿಯೆರಾ ಸ್ಕೈ ಪಾರ್ಕ್’ ವಿಮಾನ ನಿಲ್ದಾಣದ ಸಮೀಪ ಈ ದುರಂತ ಸಂಭವಿಸಿದ್ದು, ರಕ್ಷಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಬ್ಬರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ: ವಿಮಾನದಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಉಳಿದಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮೃತರ ಮತ್ತು ಗಾಯಾಳುಗಳ ವಿವರಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.

ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು: ಫ್ರೆಸ್ನೋ ಪೊಲೀಸ್, ಅಗ್ನಿಶಾಮಕ ದಳ ಮತ್ತು ಕೌಂಟಿ ಶೆರಿಫ್ ಕಚೇರಿ ಸೇರಿದಂತೆ ಹಲವು ತುರ್ತು ರಕ್ಷಣಾ ಸಂಸ್ಥೆಗಳು ಜಂಟಿಯಾಗಿ ಪರಿಹಾರ ಕಾರ್ಯಾಚರಣೆ ನಡೆಸಿವೆ.

ತಾತ್ಕಾಲಿಕ ವಿದ್ಯುತ್ ವ್ಯತ್ಯಯ: ವಿಮಾನ ನೆಲಕ್ಕಪ್ಪಳಿಸಿದ ರಭಸಕ್ಕೆ ವಿದ್ಯುತ್ ತಂತಿಗಳಿಗೆ ಧಕ್ಕೆಯುಂಟಾಗಿ, ಸುತ್ತಮುತ್ತಲಿನ ಮನೆಗಳಲ್ಲಿ ಕೆಲಕಾಲ ವಿದ್ಯುತ್ ಕಡಿತಗೊಂಡಿತ್ತು. ಬಳಿಕ ವಿದ್ಯುತ್ ಕಂಪನಿ ಸಿಬ್ಬಂದಿ ಆಗಮಿಸಿ ಸಂಪರ್ಕವನ್ನು ಮರುಸ್ಥಾಪಿಸಿದರು.

ಕಾರಣ ಪತ್ತೆಗೆ ತನಿಖೆ: ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಹವಾಮಾನ ವೈಪರೀತ್ಯವೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಅಮೆರಿಕದ ವಾಯುಯಾನ ನಿಯಂತ್ರಣ ಸಂಸ್ಥೆಗಳು ಅಪಘಾತದ ನಿಖರ ಕಾರಣ ತಿಳಿಯಲು ಪರಿಶೀಲನೆ ನಡೆಸುತ್ತಿವೆ.

ವಿಡಿಯೋ

ಈ ವಿಮಾನ ನಿಲ್ದಾಣವು ಅಮೆರಿಕದ ಪ್ರಪ್ರಥಮ ‘ರೆಸಿಡೆನ್ಶಿಯಲ್ ಏವಿಯೇಷನ್ ಕಮ್ಯುನಿಟಿ’ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿ ಜನರು ತಮ್ಮ ಮನೆಗಳ ಹಿಂಭಾಗದಲ್ಲೇ ಖಾಸಗಿ ಸಣ್ಣ ವಿಮಾನಗಳನ್ನು ಪಾರ್ಕ್ ಮಾಡಿಕೊಳ್ಳುವ ಹ್ಯಾಂಗರ್‌ಗಳನ್ನು ಹೊಂದಿರುತ್ತಾರೆ. ಜನವಸತಿ ಪ್ರದೇಶಕ್ಕೆ ತೀರಾ ಸಮೀಪದಲ್ಲೇ ರನ್‌ವೇ ಇರುವುದರಿಂದ, ಈ ಅಪಘಾತವು ಬೃಹತ್ ಅನಾಹುತಕ್ಕೆ ಕಾರಣವಾಗಬಹುದಾಗಿದ್ದ ಅಪಾಯವನ್ನು ಸೃಷ್ಟಿಸಿತ್ತು.

ಮತ್ತಷ್ಟು ಓದಿ: ಶ್ರೀನಗರ ಏರ್‌ಪೋರ್ಟ್‌ನಲ್ಲಿ ಪಾರ್ಕಿಂಗ್ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ

ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಎರಡೂ ಸಂಸ್ಥೆಗಳು ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿವೆ. ವಿಮಾನದ ಇಂಜಿನ್ ದೋಷ, ಹಾರಾಟದ ನಿಯಂತ್ರಣ ವ್ಯವಸ್ಥೆ ಮತ್ತು ಪೈಲಟ್‌ನ ಸಂವಹನ ರೆಕಾರ್ಡ್‌ಗಳನ್ನು ಎನ್​ಟಿಎಸ್​ಬಿ ಪರಿಶೀಲಿಸುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us