ಲಾವೋಸ್‌ನಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ-ನರೇಂದ್ರ ಮೋದಿ ಭೇಟಿ ವೇಳೆ ನಡೆದ ಚರ್ಚೆಗಳೇನು?
ಲಾವೋಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸಂಕ್ಷಿಪ್ತ ಸಭೆ ನಡೆಸಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದಾರೆ. ಆದರೆ, ಈ ವೇಳೆ ಹೆಚ್ಚೇನೂ ಚರ್ಚೆಯಾಗಿಲ್ಲ. ಕೆನಡಿಯನ್ನರ ಸುರಕ್ಷತೆ ಮತ್ತು ಯಾವುದೇ ಕೆನಡಿಯನ್ ಸರ್ಕಾರದ ಕಾನೂನಿನ ಮೂಲಭೂತ ಜವಾಬ್ದಾರಿಗಳನ್ನು ಎತ್ತಿಹಿಡಿಯುವುದು ನಮ್ಮ ಕರ್ತವ್ಯವಾಗಿದೆ. ಭಾರತದೊಂದಿಗಿನ ನಿಜವಾದ ಸಮಸ್ಯೆಗಳನ್ನು ನಾವು ಬಗೆಹರಿಸಬೇಕಾಗಿದೆ ಎಂದು ಟ್ರುಡೊ ಹೇಳಿದ್ದಾರೆ.
ನವದೆಹಲಿ: ಆಸಿಯಾನ್ ಶೃಂಗಸಭೆಗಾಗಿ ಲಾವೋಸ್ನಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಭೇಟಿಯಾಗಿದ್ದಾರೆ. ಲಾವೋಸ್‌ನ ವಿಯೆಂಟಿಯಾನ್‌ನಲ್ಲಿ ಗುರುವಾರ ನಡೆದ ಅಸೋಸಿಯೇಷನ್ ಆಫ್ ಆಗ್ನೇಯ ಏಷ್ಯಾ ರಾಷ್ಟ್ರಗಳ (ASEAN) ಶೃಂಗಸಭೆಯಲ್ಲಿ ಉಭಯ ನಾಯಕರು ಭೇಟಿಯಾಗಿದ್ದು, ಜಸ್ಟಿನ್ ಟ್ರುಡೊ ಈ ಸಭೆಯನ್ನು “ಬಹಳ ಸಂಕ್ಷಿಪ್ತ ವಿನಿಮಯ” ಎಂದು ವಿವರಿಸಿದ್ದಾರೆ.
ಕೆನಡಾದ ಖಲಿಸ್ತಾನಿ ಪ್ರತ್ಯೇಕತಾವಾದಿಯ ಸಾವಿನಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ ಸುಮಾರು 1 ವರ್ಷದ ನಂತರ ಲಾವೋಸ್‌ನಲ್ಲಿ ಆಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭೇಟಿಯಾಗಿದ್ದಾರೆ. ಟ್ರುಡೊ ಪ್ರಕಾರ, ಕಳೆದ ವರ್ಷ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ ನಂತರ ಉಭಯ ರಾಷ್ಟ್ರಗಳ ನಡುವಿನ ಹದಗೆಟ್ಟ ಬಾಂಧವ್ಯವನ್ನು ಪ್ರಸ್ತಾಪಿಸಿರುವ ಅವರು “ನಾವು ಮಾಡಬೇಕಾದ ಕೆಲಸ”ದ ಕುರಿತು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ‘ನಾನು ಭಾರತದ ದೊಡ್ಡ ಅಭಿಮಾನಿ’; ಲಾವೋಸ್‌ನಲ್ಲಿ ಮೋದಿ ಭೇಟಿಗೆ ನ್ಯೂಜಿಲೆಂಡ್ ಪ್ರಧಾನಿ ಸಂತಸ
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇಂದು ಲಾವೋಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ “ಸಂಕ್ಷಿಪ್ತ ವಿನಿಮಯ” ಮಾಡಿದ್ದೇನೆ ಎಂದು ಹೇಳಿದ್ದಾರೆ. “ನಾವು ಮಾಡಬೇಕಾದ ಕೆಲಸ ಇನ್ನೂ ಹಲವಿದೆ ಎಂದು ನಾನು ಒತ್ತಿಹೇಳಿದೆ” ಎಂದು ಟ್ರೂಡೊ ಲಾವೋಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
Canada PM Justin Trudeau says had a “brief exchanged” with PM Modi in Laos
Says, “Safety of Canadians & upholding rule of law fundamental responsibilities of any Canadian govt”. Adds “real issues (with India) we need to solve”
Source: CPAC pic.twitter.com/ylcdaK3Frj
— shafqat (@shafquath) October 11, 2024
“ನಾವು ಏನು ಮಾತನಾಡಿದ್ದೇವೆ ಎಂಬುದರ ಕುರಿತು ನಾನು ವಿವರಗಳನ್ನು ನೀಡಲು ಹೋಗುವುದಿಲ್ಲ, ಆದರೆ, ಕೆನಡಿಯನ್ನರ ಸುರಕ್ಷತೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುವುದು ಯಾವುದೇ ಕೆನಡಾದ ಸರ್ಕಾರದ ಮೂಲಭೂತ ಜವಾಬ್ದಾರಿಗಳಲ್ಲಿ ಒಂದಾಗಿದೆ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಅದನ್ನೇ ನಾನು ಮಾಡುತ್ತೇನೆ” ಎಂದು ಜಸ್ಟಿನ್ ಟ್ರುಡೊ ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂಗಳು ಕೆನಡಾ ತೊರೆಯಿರಿ ಎಂಬ ಖಲಿಸ್ತಾನ್ ಪರ ಕರೆಗಳನ್ನು ಖಂಡಿಸಿದ ವಿಪಕ್ಷ ನಾಯಕ
ಕೆನಡಾವು ಭಾರತದೊಂದಿಗೆ ತನ್ನ ವ್ಯಾಪಾರ ಸಂಬಂಧಗಳನ್ನು ಮತ್ತು ಜನರೊಂದಿಗೆ ಜನರ ಸಂಬಂಧವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಬೇಕಾಗಿದೆ ಎಂದು ಟ್ರೂಡೊ ಹೇಳಿದರು. ಖಲಿಸ್ತಾನ್ ಟೈಗರ್ ಫೋರ್ಸ್‌ನ ಮುಖ್ಯಸ್ಥ ಮತ್ತು ಭಾರತ ಸರ್ಕಾರಕ್ಕೆ ಬೇಕಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಜೂನ್ 2023ರಲ್ಲಿ ಕೆನಡಾದ ಸರ್ರೆಯಲ್ಲಿ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದರು. ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರು ಭಾರತೀಯ ಪ್ರಜೆಗಳ ಮೇಲೆ ಕೊಲೆ ಮತ್ತು ಪಿತೂರಿ ನಡೆಸಿದ ಆರೋಪವಿದೆ.
ಕೆನಡಾದ ಆರೋಪಗಳ ನಂತರ, ಭಾರತದೊಂದಿಗೆ ಸಂಪರ್ಕ ಹೊಂದಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಯುಎಸ್ ವರದಿ ಮಾಡಿತ್ತು. ಈ ಆರೋಪದ ಬಗ್ಗೆ ತನಿಖೆ ಆರಂಭಿಸಿರುವುದಾಗಿ ಭಾರತ ಹೇಳಿತ್ತು. ಕಳೆದ ತಿಂಗಳು, ಪನ್ನುನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಸ್ ನ್ಯಾಯಾಲಯವು ಭಾರತ ಸರ್ಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಜಿ ಆರ್ ಆ್ಯಂಡ್ ಎಡಬ್ಲ್ಯೂ ಮುಖ್ಯಸ್ಥ ಸಮಂತ್ ಗೋಯೆಲ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ