ದಕ್ಷಿಣ ಚೀನಾ ಸಾಗರದಲ್ಲಿ ಫಿಲಿಪೈನ್ಸ್ ಹಡಗುಗಳ ಮೇಲೆ ಅನಗತ್ಯವಾಗಿ ಜಲಫಿರಂಗಿ ಪ್ರಯೋಗ ಮಾಡಿದ ಚೀನಾ
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ವ್ಯಾಪ್ತಿಗೂ ಮೀರಿ ಹಕ್ಕು ಸಾಧಿಸುತ್ತಿರುವ ಸಂಬಂಧ ವಿವಾದ ಈಗಿನದಲ್ಲ. ಹಾಗ್ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನೂ ಧಿಕ್ಕರಿಸಿದ ದೇಶ ಅದು.
ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಕರಾವಳಿ ರಕ್ಷಕ ಪಡೆಗಳು (China Coast Guard) ಫಿಲಿಪೈನ್ಸ್ ದೇಶದ ಹಡಗುಗಳ ಮೇಲೆ ವೃಥಾ ಜಲಫಿರಂಗಿ ಪ್ರಯೋಗ ಮಾಡುತ್ತಿವೆ ಎಂದು ಫಿಲಿಪೈನ್ಸ್ ಆರೋಪಿಸಿದೆ. ಫಿಲಿಪಿನೋ ನೌಕಾಪಡೆಗಳಿಗೆ ಅಗತ್ಯ ವಸ್ತುಗಳ ಪೂರೈಕೆಯ ಹಡಗುಗಳ ಮೇಲೆ ಚೀನಾ ಕೋಸ್ಟ್ ಗಾರ್ಡ್ ಸಿಬ್ಬಂದಿ ಒಂದೇ ಸಮನೆ ನೀರು ಹಾರಿಸುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಿ ಹಿಂದಿರುಗಬೇಕು ಎಂದು ಫಿಲಿಪೈನ್ಸ್ ಬೀಜಿಂಗ್ಗೆ ಆಗ್ರಹಿಸಿದೆ.
ದಕ್ಷಿಣ ಚೀನಾ ಸಾಗರದಲ್ಲಿನ ವಿವಾದಿತ ಪ್ರದೇಶ ಸ್ಪ್ರಾಟ್ಲಿ ದ್ವೀಪಗಳಲ್ಲಿರುವ ಎರಡನೇ ಥಾಮಸ್ ಶೋಲ್ ಎಂಬಲ್ಲಿಗೆ ಫಿಲಿಪೈನ್ಸ್ ಹಡಗುಗಳು ತೆರಳುತ್ತಿದ್ದವು. ಈ ವೇಳೆ ಚೀನಾ ಕರಾವಳಿ ರಕ್ಷಕ ಪಡೆಗಳು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಇದು ತೀವ್ರ ಖಂಡನೀಯ ಮತ್ತು ಪ್ರತಿಭಟನೆ ಮಾಡುವಂತ ವಿಷಯ. ಅದೃಷ್ಟಕ್ಕೆ ಹಡಗಿನಲ್ಲಿದ್ದ ಯಾರೂ ಗಾಯಗೊಂಡಿಲ್ಲ. ಆದರೆ ನಮ್ಮ ಹಡಗುಗಳು ಪೂರೈಕೆ ಕಾರ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಇದು ನಮ್ಮ ನೌಕಾಪಡೆಗಳಿಗೆ ತೊಂದರೆಯಾಗುತ್ತದೆ. ಈ ಪ್ರದೇಶದಲ್ಲಿ ಚೀನಾ ಯಾವುದೇ ಕಾನೂನು ಜಾರಿ ಹಕ್ಕನ್ನು ಹೊಂದಿಲ್ಲ. ದಾಳಿ ಮಾಡಬಾರದಿತ್ತು ಎಂದು ಫಿಲಿಪೈನ್ಸ್ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಟಿಯೊಡೊರೊ ಲಾಕ್ಸಿನ್ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ವ್ಯಾಪ್ತಿಗೂ ಮೀರಿ ಹಕ್ಕು ಸಾಧಿಸುತ್ತಿರುವ ಸಂಬಂಧ ವಿವಾದ ಈಗಿನದಲ್ಲ. ಈ ಸಂಬಂಧ ಹಾಗ್ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನೂ ಧಿಕ್ಕರಿಸಿದ ದೇಶ ಅದು. ಚೀನಾ ಅನಗತ್ಯ ಉಪಟಳದ ವಿರುದ್ಧ ಫಿಲಿಪೈನ್ಸ್ ಸದಾ ತಿರುಗಿಬಿದ್ದಿದೆ. ಆದರೂ ಚೀನಾ ತನ್ನ ನಡೆಯಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಈ ವರ್ಷದ ಪ್ರಾರಂಭದಲ್ಲಿ ಸ್ಪ್ರಾಟ್ಲಿ ದ್ವೀಪಸಮೂಹದಲ್ಲಿರುವ ವಿಟ್ಸುನ್ ರೀಫ್ನಲ್ಲಿ 100ಕ್ಕೂ ಹೆಚ್ಚು ಚೀನಾದ ದೋಣಿಗಳು ಪತ್ತೆಯಾಗಿದ್ದವು. ಅಂದಿನಿಂದಲೂ ಸ್ಪ್ರಾಟ್ಲಿ ದ್ವೀಪದ ಬಳಿ ಒಂದು ಉದ್ವಿಗ್ನತೆ ಶುರುವಾಗಿದೆ.
ಇದನ್ನೂ ಓದಿ: ಆದಾಯದ ಕನಿಷ್ಟ ಶೇಕಡಾ 25 ಭಾಗ ಹೂಡಿಕೆಗೆ ಮೀಸಲಿಡಬೇಕು: ಡಾ ಬಾಲಾಜಿ ರಾವ್, ಹೂಡಿಕೆ ತಜ್ಞ