China Plane: ಚೀನಾದ ಸಿ919 ವಿಮಾನದಿಂದ ಹೊಸ ಇತಿಹಾಸ; ಅಮೆರಿಕದ ಬೋಯಿಂಗ್, ಏರ್ಬಸ್ ಪ್ರಾಬಲ್ಯಕ್ಕೆ ಸೆಡ್ಡು
China's C919 Makes History: ಚೀನಾ ಸ್ವಂತವಾಗಿ ನಿರ್ಮಿಸಿದ ಮೊದಲ ಪ್ಯಾಸೆಂಜರ್ ವಿಮಾನ ಸಿ919 ಮೇ 28ರಂದು ಮೊದಲ ಕಮರ್ಷಿಯಲ್ ಕಾರ್ಯಾಚರಣೆ ಯಶಸ್ವಿಯಾಗಿ ಪೂರೈಸಿದೆ. ಶಾಂಘೈನಿಂದ ಬೀಜಿಂಗ್ಗೆ ಈ ವಿಮಾನ ಹಾರಾಟ ಮಾಡಿದೆ.
ಬೀಜಿಂಗ್: ಚೀನಾ ತಾನೇ ಸ್ವಂತವಾಗಿ ತಯಾರಿಸಿದ ಮೊದಲ ಪ್ಯಾಸೆಂಜರ್ ವಿಮಾನವಾದ ಸಿ919 ಯಶಸ್ವಿಯಾಗಿ ಸೇವೆ ಆರಂಭಿಸಿದೆ. ಮೇ 28, ಭಾನುವಾರ ಸಿ919 ವಿಮಾನದ ಕಮರ್ಷಿಯಲ್ ಫ್ಲೈಟ್ ನಡೆಯಿತು. ಚೀನಾ ಈಸ್ಟರ್ನ್ ಏರ್ಲೈನ್ಸ್ ಸಂಸ್ಥೆ ಖರೀದಿಸಿ ಮಾಡಿದ ಈ ವಿಮಾನ ಶಾಂಘೈ ಏರ್ಪೋರ್ಟ್ನಿಂದ ಬೆಳಗ್ಗೆ 10:32ಕ್ಕೆ ಹೊರಟು ಬೀಜಿಂಗ್ ಏರ್ಪೋರ್ಟನ್ನು ಮಧ್ಯಾಹ್ನ 12:31ಕ್ಕೆ ತಲುಪಿತು. ಈ ಹಾರಾಟದಲ್ಲಿ ಯಾವ ತೊಡರೂ ಎದುರಾಗಲಿಲ್ಲ ಎಂದು ಹೇಳಲಾಗಿದೆ. ಚೀನಾದ ಕಮರ್ಷಿಯಲ್ ಏರ್ಕ್ರಾಫ್ಟ್ ಕಾರ್ಪೊರೇಶನ್ (COMAC- Commercial Aircraft Corporation of China) ಈ ವಿಮಾನವನ್ನು ಅಭಿವೃದ್ಧಿಪಡಿಸಿದ್ದು, ಕಳೆದ ವರ್ಷದ ಸೆಪ್ಟಂಬರ್ ತಿಂಗಳಲ್ಲೇ ಆ ದೇಶದ ನಾಗರಿಕ ವಿಮಾನಯಾನ ಆಡಳಿತವು ಸರ್ಟಿಫಿಕೇಟ್ ಕೊಟ್ಟು ಅನುಮತಿ ನೀಡಿತ್ತು.
ಚೀನಾಗೆ ವಿಮಾನ ಅಭಿವೃದ್ಧಿ ಸಾಮರ್ಥ್ಯ ಇರಲಿಲ್ಲವೇ?
ಚೀನಾ, ಹಾಗೆಯೇ ಹಲವು ದೇಶಗಳು ಸ್ವಂತವಾಗಿ ಮಿಲಿಟರಿ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತವೆ. ಆದರೆ, ಕಮರ್ಷಿಯಲ್ ವಿಮಾನ ಬಂದರೆ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಇರುವುದು ಪಾಶ್ಚಿಮಾದ್ಯ ದೇಶದ ಬೆರಳೆಣಿಕೆಯ ಕಂಪನಿಗಳೇ. ಬೋಯಿಂಗ್ ಮತ್ತು ಏರ್ಬಸ್ ಕಂಪನಿಗಳು ಪ್ರಯಾಣಿಕ ವಿಮಾನಗಳ ತಯಾರಿಕೆಯಲ್ಲಿ ನಿಷ್ಣಾತ ಎನಿಸಿವೆ. ಇವತ್ತು ಹಾರಾಡುತ್ತಿರುವ ಬಹುತೇಕ ಎಲ್ಲಾ ಪ್ಯಾಸೆಂಜರ್ ವಿಮಾನಗಳು ಇವೆರಡು ಕಂಪನಿಗಳಿಗೆ ಸೇರಿದ್ದವೇ. ಇಂಥ ಹೊತ್ತಿನಲ್ಲಿ ಚೀನಾದ ಕಂಪನಿಯು ಸ್ಪರ್ಧೆಗೆ ಇಳಿದಿದೆ.
ಇದನ್ನೂ ಓದಿ: Arizona News: ಬೆಂಕಿಗೆ ಸಿಲುಕಿದ ಕುಟುಂಬವನ್ನು ಕಾಪಾಡಿದ ನಿರಾಶ್ರಿತ; ಧೈರ್ಯ ಮತ್ತು ನಿಸ್ವಾರ್ಥತೆಯ ಪ್ರತಿರೂಪ!
ಬಹಳ ವರ್ಷಗಳ ಹಿಂದೆಯೇ ಸಿಒಎಂಎಸಿ ಪ್ಯಾಸೆಂಜರ್ ಏರ್ಕ್ರಾಫ್ಟ್ ಅಭಿವೃದ್ಧಿಗೆ ಇಳಿದಿತ್ತಾದರೂ ವಿವಿಧ ಕಾರಣಗಳಿಂದ ತಡವಾಗಿತ್ತು. ಇದರ ಮೊದಲ ಪ್ರಾಯೋಗಿಕ ಹಾರಾಟ 2017ರಲ್ಲೇ ಆಗಿತ್ತು. ಅದಾದ ಬಳಿಕ ಎಲ್ಲಾ ರೀತಿಯ ಪ್ರತಿಕೂಲ ಹವಾಮಾನದಲ್ಲೂ ಇದರ ಹಾರಾಟ ಪ್ರಯೋಗ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳಲ್ಲೂ ಈ ವಿಮಾನ ತೇರ್ಗಡೆಯಾಗಿ ಬಂದು ಈಗ ಮೊದಲ ಕಮರ್ಷಿಯಲ್ ಫ್ಲೈಟ್ ನಡೆದಿದೆ.
ಡಬಲ್ ಎಂಜಿನ್ನ ಈ ಏರ್ಕ್ರಾಫ್ಟ್ 164 ಸೀಟುಗಳನ್ನು ಹೊಂದಿದೆ. ಮೊದಲ ಫ್ಲೈಟ್ನಲ್ಲಿ 130ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತುಹೊಯ್ದಿದೆ. ಸರ್ಕಾರಿ ಸ್ವಾಮ್ಯದ ಚೀನಾ ಈಸ್ಟರ್ನ್ ಏರ್ಲೈನ್ಸ್ ಈ ವಿಮಾನವನ್ನು ಬಳಸುತ್ತಿದ್ದು, ಶಾಂಘೈನಿಂದ ಚೆಂಗ್ಡು ಮಾರ್ಗದಲ್ಲಿ ಇದು ನಿತ್ಯ ಸಂಚರಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.