ಅರಿವಿಗೆ ಬರುವ ಮೊದಲೇ ಹರಡಿದ ಒಮಿಕ್ರಾನ್: 20 ದೇಶಗಳಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ಕಾದಿದೆಯೇ ಸಂಕಷ್ಟ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 01, 2021 | 4:16 PM

ವಿಶ್ವದಲ್ಲಿ ಕೊರೊನಾ ಪಿಡುಗು ಮತ್ತೊಮ್ಮೆ ಕಾಣಿಸಿಕೊಳ್ಳಬಹುದು ಎಂಬ ಆತಂಕವನ್ನು ಈ ರೂಪಾಂತರಿ ಹುಟ್ಟುಹಾಕಿದೆ.

ಅರಿವಿಗೆ ಬರುವ ಮೊದಲೇ ಹರಡಿದ ಒಮಿಕ್ರಾನ್: 20 ದೇಶಗಳಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ಕಾದಿದೆಯೇ ಸಂಕಷ್ಟ
ಒಮಿಕ್ರಾನ್

ನ್ಯೂಯಾರ್ಕ್: ಬಹುರೂಪಾಂತರಿ ಕೊರೊನಾ ವೈರಾಣು ಒಮಿಕ್ರಾನ್ ಸೋಂಕು ವಿಶ್ವದ ಸುಮಾರು 20 ದೇಶಗಳಲ್ಲಿ ಕಾಣಿಸಿಕೊಂಡಿದೆ. ಇಂಥದ್ದೊಂದು ರೂಪಾಂತರಿ ಇದೆ ಎಂಬ ವಿಷಯ ತಿಳಿಯುವ ಹಲವು ದಿನಗಳ ಮೊದಲಿನಿಂದಲೂ ಈ ರೂಪಾಂತರಿ ಯೂರೋಪ್​ನಲ್ಲಿ ಇತ್ತು. ವಿಶ್ವದಲ್ಲಿ ಕೊರೊನಾ ಪಿಡುಗು ಮತ್ತೊಮ್ಮೆ ಕಾಣಿಸಿಕೊಳ್ಳಬಹುದು ಎಂಬ ಆತಂಕವನ್ನು ಈ ರೂಪಾಂತರಿ ಹುಟ್ಟುಹಾಕಿದೆ.

ನ.24ರಂದು ಒಮಿಕ್ರಾನ್​ ವಿಚಾರದ ಬಗ್ಗೆ ವಿಶ್ವದಲ್ಲಿ ಚರ್ಚೆ ಆರಂಭವಾಯಿತು. ಆದರೆ ನ.19 ಮತ್ತು ನ.23ರಂದು ಸಂಗ್ರಹಿಸಿದ್ದ ಮಾದರಿಗಳಲ್ಲಿಯೂ ಒಮಿಕ್ರಾನ್​ ರೂಪಾಂತರಿಗಳು ಇದ್ದವು ಎಂದು ನೆದರ್​ಲೆಂಡ್ಸ್​ನ ನ್ಯಾಷನಲ್ ಇನ್​ಸ್ಟಿಟ್ಯೂಟ್ ಫಾರ್ ಪಬ್ಲಿಕ್ ಹೆಲ್ತ್​ ಅಂಡ್ ಎನ್​ವಿರಾನ್​ಮೆಂಟ್ ಹೇಳಿತ್ತು. ಸೋಂಕು ಪತ್ತೆಯಾದ ಇಬ್ಬರು ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದವರನ್ನು ಗುರುತಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೋಂಕು ಹರಡುವುದನ್ನು ಸಾಧ್ಯವಾದ ಮಟ್ಟಿಗೂ ಮಿತಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.

ಒಮಿಕ್ರಾನ್​ ರೂಪಾಂತರಿಯು ಕೊರೊನಾದ ಈ ಹಿಂದಿನ ಪ್ರಭೇದಗಳಿಗಿಂತಲೂ ಹೆಚ್ಚು ಅಪಾಯಕಾರಿ. ಮತ್ತಷ್ಟು ಪರೀಕ್ಷಾ ಫಲಿತಾಂಶಗಳು ಇಲ್ಲದೆ ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಳೆದ ಮಂಗಳವಾರದಿಂದ ಅಮೆರಿಕದ ರೋಗ ನಿಯಂತ್ರಣ ವಿಭಾಗವು ಇತರ ದೇಶಗಳಿಂದ ಬರುತ್ತಿರುವ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲು ಆದೇಶಿಸಿತು. ಪ್ರಯಾಣ ಆರಂಭಿಸುವ 24 ತಾಸು ಮೊದಲು ಕೊರೊನಾ ತಪಾಸಣೆ ಮಾಡಿಸಿಕೊಂಡಿರಬೇಕು, ಅದರ ನೆಗೆಟಿವ್ ವರದಿಯನ್ನು ತೋರಿಸಬೇಕು ಎಂದು ಸೂಚಿಸಿದ್ದಾರೆ.

60 ವರ್ಷ ಮೇಲ್ಪಟ್ಟ, ಲಸಿಕೆ ಹಾಕಿಸಿಕೊಳ್ಳದವರಿಗೆ ಒಮಿಕ್ರಾನ್ ಆತಂಕ ಹೆಚ್ಚು ಎಂದು ಹೇಳಲಾಗಿದೆ. ಇಂಥವರು ತಮ್ಮ ಪ್ರಯಾಣವನ್ನು ಮುಂದೂಡಬೇಕು ಎಂದು ಯೂರೋಪ್​ನ ಬಹುತೇಕ ದೇಶಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಮುಂದಿನ ಜನವರಿ 16ರ ಒಳಗೆ ಲಸಿಕೆಯ ಒಂದೂ ಡೋಸ್ ಪಡೆದುಕೊಳ್ಳದವರಿಗೆ ದಂಡ ವಿಧಿಸಲಾಗುವುದು ಎಂದು ಗ್ರೀಸ್ ದೇಶ ಘೋಷಿಸಿದೆ.

ಒಮಿಕ್ರಾನ್ ಅಸ್ತಿತ್ವವನ್ನು ಜಗತ್ತಿಗೆ ಸಾರಿ ಹೇಳಿದ ದಕ್ಷಿಣ ಆಫ್ರಿಕಾದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಕೆಲ ದಿನಗಳಿಗೆ ಮೊದಲು ದಿನಕ್ಕೆ ಸರಾಸರಿ ಕೇವಲ 300 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಆದರೆ ಈಗ ಇದು 3000ಕ್ಕೆ ಮುಟ್ಟಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸೋಂಕಿತ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದು ವಿಷಾದದ ಸಂಗತಿ. ದಕ್ಷಿಣ ಆಫ್ರಿಕಾದಿಂದ 2 ವಿಮಾನಗಳಲ್ಲಿ ನೆದರ್​ಲೆಂಡ್ಸ್​ಗೆ ಬಂದಿದ್ದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ 61 ಮಂದಿಯಲ್ಲಿ ಸೋಂಕು ಪತ್ತೆಯಾಯಿತು. ಈ ಪೈಕಿ 14 ಮಂದಿಯಲ್ಲಿ ಒಮಿಕ್ರಾನ್ ರೂಪಾಂತರಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದರು.

ಒಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಒಮಿಕ್ರಾನ್ ವಿರುದ್ಧ ಲಸಿಕೆಗಳು ಪರಿಣಾಮಕಾರಿಯೇ? ಯಾವ ಚಿಕಿತ್ಸಾ ಕ್ರಮ ಅನುಸರಿಸವುದು ಒಳ್ಳೆಯದು? ಒಮಿಕ್ರಾನ್​ ರೂಪಾಂತರಿಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯೇ? ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ. ಒಮಿಕ್ರಾನ್ ಕುರಿತಂತೆ ಈವರೆಗೆ ಪ್ರಕಟವಾಗಿರುವ ವರದಿಗಳನ್ನು ತಳ್ಳಿಹಾಕಿರುವ ತಜ್ಞರು ಇಂಥ ವರದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದು. ಏಕೆಂದರೆ ಈ ದತ್ತಾಂಶಗಳು ಅತ್ಯಂತ ಕಡಿಮೆ. ದಕ್ಷಿಣ ಆಫ್ರಿಕಾದ ಉದಾಹರಣೆಯನ್ನು ಆಧರಿಸಿ ಹೇಳುವುದಾದರೆ, ಈ ಹಿಂದೆ ಕೊವಿಡ್-19 ಕಾಣಿಸಿಕೊಂಡು, ಗುಣವಾದವರಲ್ಲಿಯೂ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಾಣುಗಳು ಪತ್ತೆಯಾಗಿವೆ. ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಆಂಥೋನಿ ಫೌಸಿ ಪ್ರಾರಂಭಿಕ ಉತ್ತರಗಳು ಸಿಗಲು ನಮಗೆ ಇನ್ನೂ ಎರಡರಿಂದ ನಾಲ್ಕು ವಾರಗಳು ಬೇಕಾಗಬಹುದು ಎಂದು ಹೇಳಿದ್ದಾರೆ.

ಐರೋಪ್ಯ ದೇಶಗಳು 20 ಲಕ್ಷಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಪ್ರತಿವಾರ ವರದಿಯಾಗುತ್ತಿವೆ. ಲಸಿಕಾಕರಣ ಹಾಗೂ ಚಿಕಿತ್ಸೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಹೀಗಾಗಿಯೇ ಕಳೆದ ವರ್ಷಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ನೆದರ್​ಲೆಂಡ್​, ಬೆಲ್ಜಿಯಂ, ಹಂಗೇರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ, ಡೆನ್ಮಾರ್ಕ್ ಮತ್ತು ನಾರ್ವೆ ದೇಶಗಳಲ್ಲಿ ಕಳೆದ ವಾರದಿಂದ ಸೋಂಕಿತರ ಪ್ರಮಾಣವು ಹೊಸ ದಾಖಲೆಗಳನ್ನು ಬರೆದಿದೆ.

ಇದನ್ನೂ ಓದಿ: ಕೊರೊನಾ ವೈರಸ್ 13ನೇ ರೂಪಾಂತರಿಗೆ ಒಮಿಕ್ರಾನ್ ಹೆಸರು ಯಾಕೆ ಬಂತು, ಅದರ ಹಿನ್ನೆಲೆ ಏನು ಅಂತ ಗೊತ್ತಾ? ಇದನ್ನೂ ಓದಿ: ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ; ಇಂದಿನಿಂದ ಏರ್​ಪೋರ್ಟ್​ಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಜಾರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada