ಬೀಜಿಂಗ್: ಚೀನಾದಲ್ಲಿ ಕೊರೊನಾ ಸೋಂಕು (Coronavirus) ವ್ಯಾಪಿಸುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 20ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ ಚೀನಾ ಲಾಕ್ಡೌನ್ ಘೋಷಿಸಿದ್ದು, ಸಂಚಾರಕ್ಕೂ ನಿರ್ಬಂಧಗಳನ್ನು ವಿಧಿಸಿದೆ. ಚೀನಾದಲ್ಲಿ ನಿನ್ನೆ (ಮಾರ್ಚ್ 22) ಒಟ್ಟು 2591 ಮಂದಿಯಲ್ಲಿ ಕೊವಿಡ್ ಸೋಂಕು ಪತ್ತೆಯಾಗಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಸ್ಥಳೀಯವಾಗಿ ವರದಿಯಾಗಿರುವ ಸೋಂಕು ಪ್ರಕರಣಗಳ ಪೈಕಿ ಜಿಲಿನ್ ಪ್ರಾಂತ್ಯದಲ್ಲಿ ಅತಿಹೆಚ್ಚು (2,320) ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಫುಜೈನ್ ಪ್ರಾಂತ್ಯದಲ್ಲಿ 110, ಲಿಯಾನಿಂಗ್ ಪ್ರಾಂತ್ಯದಲ್ಲಿ 36, ಟಿನಾಜಿನ್ ಮತ್ತು ಶಾಂಗ್ಡಾಂಗ್ ಪ್ರಾಂತ್ಯದಲ್ಲಿ ತಲಾ 24, ಗುನ್ಡೊಂಗ್ ಪ್ರಾಂತ್ಯದಲ್ಲಿ 15 ಮತ್ತು ಹಿಲೊನ್ಗ್ಜಿಯಾಂಗ್ ಪ್ರಾಂತ್ಯದ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಚೀನಾದ ಸುದ್ದಿಸಂಸ್ಥೆಯ ಕ್ಸಿನುವಾ ವರದಿ ಮಾಡಿದೆ.
12 ಸೋಂಕುಗಳು ಇತರ ಪ್ರಾಂತ್ಯಗಳಲ್ಲಿ ವರದಿಯಾಗಿವೆ. ವಿವಿಧೆಡೆಯಿಂದ ಬಂದಿರುವ 76 ಮಂದಿ ಸೋಂಕಿತರೂ ಈ ಪಟ್ಟಿಯಲ್ಲಿ ಸೇರಿದ್ದಾರೆ. ಎಲ್ಲ ಶಂಕಿತ ಸೋಂಕಿತರು ಮತ್ತು ಇತರೆಡೆಗಳಿಂದ ಬಂದವರನ್ನು ಸಾಂಘೈನಲ್ಲಿ ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜಾಗತಿಕ ಪಿಡುಗಿನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಚೀನಾದ ಅಧಿಕಾರಿಗಳು ಹಲವು ಪ್ರಾಂತ್ಯಗಳು ಮತ್ತು ನಗರಗಳಲ್ಲಿ ಪ್ರವಾಸ ನಿರ್ಬಂಧಿಸಿದ್ದು, ಲಾಕ್ಡೌನ್ ಘೋಷಿಸಿದ್ದಾರೆ. ಜಿಲಿನ್, ಹೆಬೈ, ಗುಂಗ್ಡೊಂಗ್ ಮತ್ತು ಶಾಂಘೈ ಪ್ರಾಂತ್ಯಗಳಲ್ಲಿ ಪರಿಸ್ಥಿತಿ ವಿಷಮಿಸಿದೆ.
ದೇಶವ್ಯಾಪಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವುದರಿಂದ ಚೀನಾ ತನ್ನ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ‘ಕೊವಿಡ್ ವಿಚಾರದಲ್ಲಿ ಮತ್ತು ನಿರ್ಬಂಧಗಳನ್ನು ಪಾಲಿಸುವಲ್ಲಿ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಿ’ ಎಂದು ಈ ಮೊದಲು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಕೊವಿಡ್ ನಿರ್ವಹಣೆಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
‘ಕೊರೊನಾ ವೈರಸ್ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ’ (Novel Coronavirus Diagnosis And Treatment Plan) ದಾಖಲೆಯನ್ನು ತನ್ನ ವೆಬ್ಸೈಟ್ಗೆ ಅಪ್ಲೋಡ್ ಮಾಡಿದೆ. ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಚೀನಾದ ಪ್ರಾಂತೀಯ ಸರ್ಕಾರಗಳು ಕೊವಿಡ್ ನಿರ್ಬಂಧಗಳಿಂದಾಗಿ ಏದುಸಿರು ಬಿಡುತ್ತಿವೆ. ಆರೋಗ್ಯ ವೆಚ್ಚದ ಏರಿಕೆ ಮತ್ತು ನಿರ್ಬಂಧದ ಆದೇಶಗಳ ಅಡಕತ್ತರಿಯಲ್ಲಿ ಸ್ಥಳೀಯ ಸರ್ಕಾರಗಳು ಸಿಲುಕಿವೆ.
ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಹೆಚ್ಚಾಗಿದೆ ಕೊರೊನಾ ವೈರಸ್; ಒಂದು ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿನಿಂದ ಸಾವು
ಇದನ್ನೂ ಓದಿ: ವಿಯೆಟ್ನಾಂನ ಡ್ರ್ಯಾಗನ್ ಹಣ್ಣಿನಲ್ಲೂ ಕೊರೊನಾ ವೈರಸ್ ಪತ್ತೆ; ಚೀನಾದಲ್ಲಿ ಸೂಪರ್ ಮಾರ್ಕೆಟ್ಗಳು ಬಂದ್