IHU Variant: ಫ್ರಾನ್ಸ್ನಲ್ಲಿ ಪತ್ತೆಯಾಯ್ತು ಕೊವಿಡ್ 19ನ ಮತ್ತೊಂದು ತಳಿ; ಆಫ್ರಿಕನ್ ದೇಶದ ಪ್ರಯಾಣ ಹಿನ್ನೆಲೆ ಇರುವ 12 ಮಂದಿಯಲ್ಲಿ ಐಎಚ್ಯು ಪತ್ತೆ
IHU Covid Variant: ಈ ಸೋಂಕು ಬೇರೆ ಯಾವುದೇ ದೇಶದಲ್ಲೂ ಪತ್ತೆಯಾಗಿಲ್ಲ. ಹೊಸ ತಳಿ ಹೇಗೆ ವರ್ತಿಸುತ್ತದೆ. ಯಾವ ಪ್ರಮಾಣದ ಸೋಂಕು ಉಂಟು ಮಾಡುತ್ತದೆ ಮತ್ತು ಲಸಿಕೆಗಳು ಈ ಸೋಂಕಿನ ವಿರುದ್ಧ ಹೇಗೆ ಹೋರಾಡುತ್ತವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ
ಸದ್ಯ ಜಗತ್ತಿನ ಅನೇಕ ದೇಶಗಳಲ್ಲಿ ಒಮಿಕ್ರಾನ್ ಸೋಂಕು ಹರಡುತ್ತಿದೆ. ನವೆಂಬರ್ನಲ್ಲಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಮಾರಣಾಂತಿಕವಲ್ಲದೆ ಇದ್ದರೂ, ವೇಗವಾಗಿ ಹರಡುವ ವೈರಸ್. ಆದರೆ ಈ ಮಧ್ಯೆ ಫ್ರಾನ್ಸ್ನ ವಿಜ್ಞಾನಿಗಳು, ಕೊವಿಡ್ 19ನ ಇನ್ನೊಂದು ರೂಪಾಂತರಿ ತಳಿಯನ್ನು ಪತ್ತೆ ಮಾಡಿದ್ದಾರೆ. ಆಫ್ರಿಕನ್ ದೇಶ ಕೆಮೆರೂನ್ಗೆ ಪ್ರಯಾಣ ಮಾಡಿದ್ದವರು ಮತ್ತು ಅವರಿಗೆ ಸಂಬಂಧ ಪಟ್ಟ ಸುಮಾರು 12 ಜನರಲ್ಲಿ ಈ ಹೊಸ ತಳಿ ಕಾಣಿಸಿಕೊಂಡಿದ್ದಾಗಿ ಐಎಚ್ಯು ಮೆಡಿಟರೇನಿ ಇನ್ಫೆಕ್ಷನ್ ಇನ್ಸ್ಟಿಟ್ಯೂಟ್ನ ಸಂಶೋಧಕರು ಹೇಳಿದ್ದಾರೆ. B.1.640.2 ರೂಪಾಂತರವಾದ ಇದಕ್ಕೆ ಐಎಚ್ಯು (IHU) ಎಂದೇ ಹೆಸರಿಸಲಾಗಿದೆ. ಅಂದಹಾಗೆ ಈ ಎಲ್ಲ ಪ್ರಕರಣಗಳೂ ಕೂಡ ಫ್ರಾನ್ಸ್ನ ಮಾರ್ಸಿಲ್ಲೆಸ್ ಬಳಿ ಪತ್ತೆಯಾಗಿದೆ.
ಸದ್ಯ ಈ ಸೋಂಕು ಬೇರೆ ಯಾವುದೇ ದೇಶದಲ್ಲೂ ಪತ್ತೆಯಾಗಿಲ್ಲ. ಹೊಸ ತಳಿ ಹೇಗೆ ವರ್ತಿಸುತ್ತದೆ. ಯಾವ ಪ್ರಮಾಣದ ಸೋಂಕು ಉಂಟು ಮಾಡುತ್ತದೆ ಮತ್ತು ಲಸಿಕೆಗಳು ಈ ಸೋಂಕಿನ ವಿರುದ್ಧ ಹೇಗೆ ಹೋರಾಡುತ್ತವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದೂ ಸಂಶೋಧಕರು ತಿಳಿಸಿದ್ದಾರೆ. ಆದರೆ ಐಎಚ್ಯು ಒಟ್ಟು 46 ರೂಪಾಂತರಿಗಳನ್ನು ಒಳಗೊಂಡಿದ್ದು, ಒಮಿಕ್ರಾನ್ಗಿಂತಲೂ ಜಾಸ್ತಿ ಇದು ಎಂದೂ ಹೇಳಿದ್ದಾರೆ. ಯುಎಸ್ನ ಎಪಿಡೆಮಿಯಾಲಜಿಸ್ಟ್ ಮತ್ತು ಆರೋಗ್ಯ ಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ಅವರು, ಸರಣಿ ಟ್ವೀಟ್ ಮೂಲಕ ಪ್ರಸ್ತುತ ರೂಪಾಂತರದ ಬಗ್ಗೆ ಹೇಳಿದ್ದಾರೆ. ಕೊವಿಡ್ 19 ಸೋಂಕಿನ ರೂಪಾಂತರಿಗಳ ಪ್ರಮಾಣ ದಿನದಿನವೂ ಹೆಚ್ಚುತ್ತಿದೆ. ಹಾಗಂದ ಮಾತ್ರಕ್ಕೆ ಯಾರೂ ಹೆದರಬೇಕಾಗಿಲ್ಲ. ಇದೀಗ ಪತ್ತೆಯಾಗಿರುವ ತಳಿಯಲ್ಲಿ 46 ರೂಪಾಂತರಗಳು ಮತ್ತು 37 ವಿಲೋಪನಗಳು ಇರುವುದಾಗಿ ಫ್ರಾನ್ಸ್ ಸಂಶೋಧಕರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆದ ವಿನಃ ಏನೂ ಹೇಳಲಾಗದು ಎಂದು ಹೇಳಿದ್ದಾರೆ.
ಫ್ರಾನ್ಸ್ ಗಿಮಿಕ್ ಮಾಡಿತಾ? ಈ ಮಧ್ಯೆ ಇಲ್ಲೊಂದು ಅನುಮಾನವೂ ಕಾಡುತ್ತಿದೆ. ಫ್ರಾನ್ಸ್ ಸಂಶೋಧಕರು ಹೇಳಿರುವ ಐಎಚ್ಯು ವೈರಸ್ ಜಗತ್ತಿನ ಇನ್ಯಾವುದೇ ದೇಶದಲ್ಲೂ ಕಂಡುಬಂದಿಲ್ಲ. ವಿಶ್ವಸಂಸ್ಥೆಯೂ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೊಸ ತಳಿಯೆಂಬ ಲೇಬಲ್ ಕೊಟ್ಟಿಲ್ಲ. ಹೀಗಾಗಿ ಫ್ರಾನ್ಸ್ನಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವವರನ್ನು ಲಸಿಕೆ ತೆಗೆದುಕೊಳ್ಳುವಂತೆ ಮಾಡಲು, ಹೀಗೊಂದು ಹೊಸ ತಳಿಯ ಗಿಮಿಕ್ ಮಾಡಿರಬಹುದಾ ಎಂಬ ಅನುಮಾನವೂ ಕಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇನ್ನಷ್ಟು ಸಂಶೋಧನೆಯ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಕೇಸ್; 24 ಗಂಟೆಯಲ್ಲಿ ಕೊವಿಡ್ ಪ್ರಕರಣಗಳು ದ್ವಿಗುಣ
Published On - 5:42 pm, Tue, 4 January 22