ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ 123 ಜನ ಸಾವು; ತುರ್ತು ಪರಿಸ್ಥಿತಿ ಘೋಷಣೆ

ದಿತ್ವಾ ಚಂಡಮಾರುತದಿಂದ ಶ್ರೀಲಂಕಾದಲ್ಲಿ 120ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದರಿಂದಾಗಿ ಶ್ರೀಲಂಕಾದಲ್ಲಿ 'ತುರ್ತು ಪರಿಸ್ಥಿತಿ' ಘೋಷಿಸಲಾಗಿದೆ. ಈ ಚಂಡಮಾರುತವು 15,000ಕ್ಕೂ ಹೆಚ್ಚು ಮನೆಗಳನ್ನು ನಾಶಪಡಿಸಿದೆ. 78,000 ಜನರನ್ನು ಸರ್ಕಾರಿ ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (DMC) ತಿಳಿಸಿದೆ. ಪರಿಹಾರ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ. ಸಾವಿರಾರು ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿಯನ್ನು ಪೀಡಿತ ಜಾಗಗಳಲ್ಲಿ ಸಹಾಯ ಮಾಡಲು ನಿಯೋಜಿಸಲಾಗಿದೆ.

ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ 123 ಜನ ಸಾವು; ತುರ್ತು ಪರಿಸ್ಥಿತಿ ಘೋಷಣೆ
Sri Lanka Cyclone

Updated on: Nov 29, 2025 | 7:28 PM

ನವದೆಹಲಿ, ನವೆಂಬರ್ 29: ದಿತ್ವಾ ಚಂಡಮಾರುತದಿಂದಾಗಿ (Ditwah Cyclone) ಶ್ರೀಲಂಕಾದ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹ, ಭೂಕುಸಿತದಿಂದ ಶ್ರೀಲಂಕನ್ನರು ನಲುಗಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ (Sri Lanka) ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಶ್ರೀಲಂಕಾ ದ್ವೀಪದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಈ ಚಂಡಮಾರುತವು ಶ್ರೀಲಂಕಾದಲ್ಲಿ 123 ಜನರನ್ನು ಬಲಿ ತೆಗೆದುಕೊಂಡಿದೆ. ಶುಕ್ರವಾರ ನಡೆದ ಸರ್ವಪಕ್ಷ ಸಭೆಯ ನಂತರ ವಿರೋಧ ಪಕ್ಷದ ನಾಯಕರು ತುರ್ತು ಪರಿಸ್ಥಿತಿಯನ್ನು ಘೋಷಿಸಲು ಕರೆ ನೀಡಲಾಯಿತು.

ದಿತ್ವಾ ಚಂಡಮಾರುತವು 120ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. “ದಿತ್ವಾ ಚಂಡಮಾರುತ ಶ್ರೀಲಂಕಾದಿಂದ ಹೊರಟು ಭಾರತದ ಕರಾವಳಿಯ ಕಡೆಗೆ ಸಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ” ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಅತುಲಾ ಕರುಣನಾಯಕೆ ತಿಳಿಸಿದ್ದಾರೆ. ಇದುವರೆಗೂ ಶ್ರೀಲಂಕಾದಲ್ಲಿ 123 ಜನರು ಮೃತಪಟ್ಟಿದ್ದು, 130 ಜನರು ನಾಪತ್ತೆಯಾಗಿದ್ದಾರೆ. ಈ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಚಂಡಮಾರುತ ಪೀಡಿತ ಶ್ರೀಲಂಕಾಕ್ಕೆ ಆಪರೇಷನ್ ಸಾಗರ್ ಬಂಧು ಅಡಿ ಭಾರತದಿಂದ ಸಹಾಯಹಸ್ತ

ದಿತ್ವಾ ಚಂಡಮಾರುತದ ನಂತರ, ಭಾರತವು ಇಂದು (ನವೆಂಬರ್ 29) ‘ಆಪರೇಷನ್ ಸಾಗರ್ ಬಂಧು’ ಅಡಿಯಲ್ಲಿ 12 ಟನ್ ಮಾನವೀಯ ನೆರವಿನೊಂದಿಗೆ C-130J ವಿಮಾನವನ್ನು ಕೊಲಂಬೊಗೆ ರವಾನಿಸಿತು. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಟೆಂಟ್‌ಗಳು, ಟಾರ್ಪೌಲಿನ್‌ಗಳು, ಕಂಬಳಿಗಳು, ನೈರ್ಮಲ್ಯ ಕಿಟ್‌ಗಳು ಮತ್ತು ತಿನ್ನಲು ಸಿದ್ಧವಾದ ಊಟ ಸೇರಿದಂತೆ ಸಹಾಯದ ಲ್ಯಾಂಡಿಂಗ್ ಅನ್ನು ಘೋಷಿಸಿದರು. ನಿನ್ನೆ INS ವಿಕ್ರಾಂತ್ ಮತ್ತು INS ಉದಯಗಿರಿ 4.5 ಟನ್ ಒಣ ದಿನಸಿ, 2 ಟನ್ ತಾಜಾ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಿದ್ದವು. ಇಂದು 2ನೇ ಬಾರಿಗೆ ಭಾರತದಿಂದ ವಿಮಾನ ಶ್ರೀಲಂಕಾಕ್ಕೆ ಅಗತ್ಯ ವಸ್ತುಗಳನ್ನು ಹೊತ್ತೊಯ್ದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:16 pm, Sat, 29 November 25