ಪ್ರತಿಷ್ಠಿತ ಕಾರಿಗೆ ಫ್ಯಾನ್ಸಿ ನಂಬರ್​ ಪಡೆಯಲು ದುಬೈ ಉದ್ಯಮಿ ಮಾಡಿದ್ದಾದ್ರೂ ಏನು..?

  • TV9 Web Team
  • Published On - 8:57 AM, 26 Jun 2020
ಪ್ರತಿಷ್ಠಿತ ಕಾರಿಗೆ ಫ್ಯಾನ್ಸಿ ನಂಬರ್​ ಪಡೆಯಲು ದುಬೈ ಉದ್ಯಮಿ ಮಾಡಿದ್ದಾದ್ರೂ ಏನು..?

ಭಾರತದಲ್ಲಿ ಬಹಳ ಹಿಂದಿನಿಂದಲೂ ಸಂಖ್ಯಾಶಾಸ್ತ್ರದ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ. ಜೀವನದ ಬಹಳಷ್ಟು ಆಯಾಮಗಳಲ್ಲಿ, ಉದಾಹರಣೆಗೆ ಮನೆಯ ಡೋರ್​ ನಂಬರ್​ ಅಥವಾ ವಾಹನದ ನೋಂದಣಿ ಸಂಖ್ಯೆ ಹೀಗೆ ಹಲವಾರು ವಿಷಯಗಳಲ್ಲಿ ಒಳ್ಳೆಯ ಸಂಖ್ಯೆಯನ್ನು ಆಯ್ಕೆ ಮಾಡಿದರೆ ಅದೃಷ್ಟ ಮತ್ತು ಏಳಿಗೆ ಎರಡನ್ನೂ ಕಾಣುತ್ತೇವೆ ಎಂಬುದು ಕೆಲವರ ಅಚಲ ನಂಬಿಕೆ. ಅಂತೆಯೇ, ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಯೊಬ್ಬರು ತಮ್ಮ ಹೊಚ್ಚಹೊಸ ಐಷಾರಾಮಿ ರೋಲ್ಸ್​ ರಾಯ್ಸ್​ ಕಾರಿಗೆ ತಮಗಿಷ್ಟವಾದ ನೋಂದಣಿ ಸಂಖ್ಯೆಯನ್ನ ಪಡೆಯಲು ಬರೋಬ್ಬರಿ 60 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ.

D5 ನೋಂದಣಿ ಸಂಖ್ಯೆಗಾಗಿ 33 ಮಿಲಿಯನ್​ ದಿರ್ಹಮ್​..!
ಹೌದು, ದುಬೈನ ಪ್ರತಿಷ್ಠಿತ RSG ಅಂತಾರಾಷ್ಟ್ರೀಯ ಸ್ವತ್ತು ನಿಭಾವಣಾ ಸಂಸ್ಥೆಯ (RSG International property management group) ಮಾಲೀಕರಾದ ಬಲ್ವಿಂದರ್​ ಸಿಂಗ್​ ಸಾಹ್ನಿ ದುಬೈನ ಸಾರಿಗೆ ಇಲಾಖೆ ಆಯೋಜಿಸಿದ್ದ ವಿಶೇಷ ನೋಂದಣಿ ಸಂಖ್ಯೆಗಳ ಹರಾಜು ಪ್ರಕ್ರಿಯೆಯಲ್ಲಿ ತಮಗೆ ಇಷ್ಟವಾದ ‘D5’ ನೋಂದಣಿ ಸಂಖ್ಯೆಗಾಗಿ ಬರೋಬ್ಬರಿ 33 ಮಿಲಿಯನ್​ ದಿರ್ಹಮ್​ಗಳ (60 ಕೋಟಿ ರೂಪಾಯಿ) ಬೃಹತ್​ ಮೊತ್ತವನ್ನು ನೀಡಿ ತಮ್ಮ ಹೊಚ್ಚಹೊಸ ರೋಲ್ಸ್​ ರಾಯ್ಸ್​ ಕಾರಿಗೆ ಈ ನಂಬರ್​ನ ನೋಂದಾಯಿಸಿದ್ದಾರೆ. ಇದು ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ನೋಂದಣಿ ಸಂಖ್ಯೆ ಎಂಬ ಖ್ಯಾತಿ ಸಹ ಪಡೆದಿದೆ.

ಇಡೀ ದುಬೈಯಲ್ಲೇ ‘ಅಬು ಸಬಾಹ್​’ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಬಲ್ವಿಂದರ್​ ಸಾಹ್ನಿ ಈ ಹಿಂದೆಯೂ ತಮಗಿಷ್ಟವಾದ ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಖರೀದಸಲು ಬೃಹತ್​ ಮೊತ್ತವನ್ನು ನೀಡಿದ್ದಾರೆ. ಹಲವಾರು ರೋಲ್ಸ್​ ರಾಯ್ಸ್​ ಕಾರುಗಳನ್ನು ಹೊಂದಿರುವ ಇವರು ಈ ಹಿಂದೆ ತಮ್ಮ ಮತ್ತೊಂದು ಕಾರಿಗೆ ‘O5’ ಎಂಬ ರಿಜಿಸ್ಟ್ರೇಷನ್​ ನಂಬರ್​ನ ಬರೋಬ್ಬರಿ 25 ಮಿಲಿಯನ್​ ದಿರ್ಹಮ್​ಗಳನ್ನು (46 ಕೋಟಿ ರೂಪಾಯಿ) ನೀಡಿ ಖರೀದಿಸಿದ್ದರು.