ಅಪ್ಪಂದಿರಾಗಲು ಹೊರಟ ಡಚ್ ಪ್ರಧಾನಿ ರಾಬ್ ಹಾಗೂ ಹಾಕಿ ಆಟಗಾರ ನಿಕೋಲಸ್ : ಸರೊಗಸಿ ಮೂಲಕ ಮಗುವಿನ ನಿರೀಕ್ಷೆಯಲ್ಲಿ ಸಲಿಂಗ ಜೋಡಿ

ನೆದರ್‌ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ ಹಾಗೂ ಸಂಗಾತಿ ನಿಕೋಲಸ್ ಕೀನನ್, ತಮ್ಮ ಮೊದಲ ಮಗುವನ್ನು ಸರೊಗಸಿ ಮೂಲಕ ಸ್ವಾಗತಿಸುತ್ತಿದ್ದಾರೆ. ಆಪ್ತ ಸ್ನೇಹಿತೆ ಲಿಸಾ ಅಂಡಾಣು ದಾನ ಮಾಡಿ ಬಾಡಿಗೆ ತಾಯಿಯಾಗಲು ಒಪ್ಪಿಕೊಂಡಿದ್ದಾರೆ. ವಾಣಿಜ್ಯೇತರ ಈ ಪ್ರಕ್ರಿಯೆ ಪ್ರೀತಿ ಮತ್ತು ಸ್ನೇಹಕ್ಕೆ ಸಾಕ್ಷಿ. ಡಚ್‌ನ ಮೊದಲ ಬಹಿರಂಗ ಸಲಿಂಗಕಾಮಿ ಪ್ರಧಾನಿ ಪಿತೃತ್ವದ ಈ ಸುದ್ದಿ ವ್ಯಾಪಕ ಮೆಚ್ಚುಗೆ ಗಳಿಸಿದೆ.

ಅಪ್ಪಂದಿರಾಗಲು ಹೊರಟ ಡಚ್ ಪ್ರಧಾನಿ ರಾಬ್ ಹಾಗೂ ಹಾಕಿ ಆಟಗಾರ ನಿಕೋಲಸ್ : ಸರೊಗಸಿ ಮೂಲಕ ಮಗುವಿನ ನಿರೀಕ್ಷೆಯಲ್ಲಿ ಸಲಿಂಗ ಜೋಡಿ
ರಾಬ್-ನಿಕೋಲಸ್

Updated on: Oct 21, 2026 | 11:08 AM

ಆಮ್‌ಸ್ಟರ್‌ಡ್ಯಾಮ್, ಅಕ್ಟೋಬರ್ 21: ನೆದರ್‌ಲ್ಯಾಂಡ್ಸ್‌ನ ಪ್ರಧಾನಿ ರಾಬ್ ಜೆಟ್ಟನ್ ಹಾಗೂ ಅವರ ಸಂಗಾತಿ, ಅರ್ಜೆಂಟೀನಾದ ಖ್ಯಾತ ಅಂತಾರಾಷ್ಟ್ರೀಯ ಫೀಲ್ಡ್ ಹಾಕಿ ಆಟಗಾರ ನಿಕೋಲಸ್ ಕೀನನ್ ತಮ್ಮ ಬದುಕಿನ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಬಾಡಿಗೆ ತಾಯ್ತನದ (ಸರೊಗಸಿ) ಮೂಲಕ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧವಾಗಿದ್ದು, ಈ ಸಂತಸದ ಸುದ್ದಿಯನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದಾರೆ.

ಈ ತಾಯ್ತನದ ಹಿಂದೆ ಅಪಾರ ಪ್ರೀತಿ ಹಾಗೂ ನಿಸ್ವಾರ್ಥ ಸ್ನೇಹದ ಕಥೆಯಿದೆ. ಜೆಟ್ಟನ್ ದಂಪತಿಯ ಆಪ್ತ ಸ್ನೇಹಿತೆಯಾದ ಲಿಸಾ ಎಂಬುವವರು ಯಾವುದೇ ವಾಣಿಜ್ಯ ಉದ್ದೇಶವಿಲ್ಲದೆ, ಕೇವಲ ಸ್ನೇಹ ಮತ್ತು ವಾತ್ಸಲ್ಯದಿಂದ ಅಂಡಾಣು ದಾನ ಮಾಡಿ ಬಾಡಿಗೆ ತಾಯಿಯಾಗಲು (Surrogate Mother) ಒಪ್ಪಿಕೊಂಡಿದ್ದಾರೆ. ಈಗಾಗಲೇ ಸ್ವಂತ ಮಕ್ಕಳನ್ನು ಹೊಂದಿರುವ ಲಿಸಾ ಮತ್ತು ಅವರ ಕುಟುಂಬ, ಈ ಜೋಡಿಗೆ ಪೋಷಕರಾಗುವ ಕನಸನ್ನು ನನಸು ಮಾಡಲು ಕೈಜೋಡಿಸಿದೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಜೆಟ್ಟನ್ ಮತ್ತು ಕೀನನ್, “ನಮ್ಮ ಬದುಕಿಗೆ ಬಹಳ ವಿಶೇಷವಾದ ಪುಟ್ಟ ಜೀವವೊಂದು ಆಗಮಿಸುತ್ತಿದೆ. 2027ರಲ್ಲಿ ನಿನ್ನ ಭೇಟಿಯಾಗಲಿದ್ದೇವೆ ಪುಟ್ಟ ಕಂದಮ್ಮ. ನಮ್ಮ ಬಾಡಿಗೆ ತಾಯಿ ಲಿಸಾ ಹಾಗೂ ಆಕೆಯ ಕುಟುಂಬಕ್ಕೆ ಧನ್ಯವಾದ ಹೇಳಲು ನಮ್ಮ ಬಳಿ ಪದಗಳೇ ಸಾಲುತ್ತಿಲ್ಲ” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ನೆದರ್‌ಲ್ಯಾಂಡ್ಸ್‌ನಲ್ಲಿ ವಾಣಿಜ್ಯ ಸರೊಗಸಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಅಲ್ಲಿನ ನಿಯಮಗಳಿಗೆ ಅನುಗುಣವಾಗಿ, ಯಾವುದೇ ಹಣಕಾಸಿನ ವಹಿವಾಟಿಲ್ಲದೆ ಐವಿಎಫ್ (IVF) ವಿಧಾನದ ಮೂಲಕವೇ ಈ ಗರ್ಭಧಾರಣೆ ಪ್ರಕ್ರಿಯೆ ನಡೆದಿದೆ. ಮಗು ಜನಿಸಿದ ಬಳಿಕ ಜೆಟ್ಟನ್ ಕೆಲವೇ ದಿನಗಳ ಕಾಲ ಪಿತೃತ್ವ ರಜೆ ಪಡೆಯಲಿದ್ದಾರೆ.

ರಾಬ್ ಜೆಟ್ಟನ್ ಯಾರು?
1987ರಲ್ಲಿ ಜನಿಸಿದ 39 ವರ್ಷದ ರಾಬ್ ಜೆಟ್ಟನ್, ಡೆಮೋಕ್ರಾಟ್ಸ್ 66 (D66) ಪಕ್ಷದ ನಾಯಕರಾಗಿದ್ದು, ಡಚ್ ಇತಿಹಾಸದಲ್ಲೇ ದೇಶದ ಚುಕ್ಕಾಣಿ ಹಿಡಿದ ಅತ್ಯಂತ ಕಿರಿಯ ಪ್ರಧಾನಿ ಹಾಗೂ ಮೊದಲ ಬಹಿರಂಗ ಸಲಿಂಗಕಾಮಿ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದ ಜೆಟ್ಟನ್, ಒಲಿಂಪಿಕ್ ಚಾಂಪಿಯನ್ ಸಿಫಾನ್ ಹಸನ್ ಅವರ ತರಬೇತಿಯಲ್ಲಿ ‘ಪೇಸ್ ಸೆಟ್ಟರ್’ ಆಗಿ ಓಡಿದ್ದರು.

ಇದನ್ನೂ ಓದಿ:Video: ಆಹಾ! ಎಂತ ಜೋಡಿ; ಚಿಂತೆಯನ್ನೆಲ್ಲಾ ಬಿಟ್ಟು ಬೀಡಿ ಸೇದುತ್ತಾ ಕುಳಿತ ವೃದ್ಧ ದಂಪತಿ

ರಾಜಕೀಯ ಪಯಣ: 2017ರಲ್ಲಿ ಸಂಸತ್ ಪ್ರವೇಶಿಸಿದ ಅವರು, ಮಾಜಿ ಪ್ರಧಾನಿ ಮಾರ್ಕ್ ರುಟ್ಟೆ ಸಂಪುಟದಲ್ಲಿ ಹವಾಮಾನ ಮತ್ತು ಇಂಧನ ನೀತಿ ಸಚಿವರಾಗಿ ಪ್ರಮುಖ ಸುಧಾರಣೆಗಳನ್ನು ತಂದಿದ್ದರು. ಅರ್ಜೆಂಟೀನಾ ಹಾಕಿ ಆಟಗಾರ ನಿಕೋಲಸ್ ಕೀನನ್ ಜೊತೆ 2024ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೆಟ್ಟನ್, ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಿದ್ದರು. 2001ರಲ್ಲೇ ಸಲಿಂಗ ವಿವಾಹವನ್ನು ಜಗತ್ತಿನಲ್ಲೇ ಮೊದಲು ಕಾನೂನುಬದ್ಧಗೊಳಿಸಿದ ಮುಕ್ತ ಸಮಾಜದ ನೆದರ್‌ಲ್ಯಾಂಡ್ಸ್‌ನಲ್ಲಿ, ಇದೀಗ ದೇಶದ ಪ್ರಧಾನಿಯೇ ಪೋಷಕರಾಗುತ್ತಿರುವ ಸುದ್ದಿ ವ್ಯಾಪಕ ಮೆಚ್ಚುಗೆ ಹಾಗೂ ಪ್ರೀತಿಗೆ ಪಾತ್ರವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us