ರಷ್ಯಾ-ಉಕ್ರೇನ್ ಯುದ್ಧ(Russia-Ukraine War) ಶುರುವಾಗಿ ಎರಡು ವಾರ ಸಮೀಪಿಸುತ್ತಿದೆ. ಯುದ್ಧ ನಿಲ್ಲಲಿ ಎಂಬುದು ಅನೇಕರ ಪ್ರಾರ್ಥನೆ. ವಿಶ್ವದ ಹಲವು ರಾಷ್ಟ್ರಗಳ ಒತ್ತಾಯ. ಏನೇ ಆದರೂ ಯುದ್ಧ ನಿಲ್ಲಿಸುವುದು ರಷ್ಯಾ ಅಧ್ಯಕ್ಷ ಪುಟಿನ್ ಕೈಯಲ್ಲೇ ಇದೆ ಎಂಬುದು ಪ್ರತಿಯೊಬ್ಬರಿಗೂ ಅರ್ಥವಾದ ಸತ್ಯ. ಈ ಮಧ್ಯೆ, ಹೇಗಾದರೂ ಸರಿ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಮನವಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಆ ಸಾಲಿಗೆ ಈಗ ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಸೇರ್ಪಡೆಯಾಗಿದ್ದಾರೆ. ‘ಪುಟಿನ್ ಅವರಿಗೆ ಹೇಗಾದರೂ ಅರ್ಥ ಮಾಡಿಸಿ, ಈ ಯುದ್ಧ ಎಲ್ಲರ ಹಿತಾಸಕ್ತಿಗೆ ವಿರುದ್ದವಾಗಿ ನಡೆಯುತ್ತಿದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿ’ ಎಂದು ಹೇಳಿದ್ದಾರೆ. ದೂರದರ್ಶನದ ಮೂಲಕ ಭಾಷಣ ಮಾಡಿದ ಅವರು, ಪ್ರಧಾನಿ ಮೋದಿಗೆ ಮಾತ್ರವಲ್ಲದೆ ಇಡೀ ಭಾರತೀಯರಿಗೆ ಈ ನನ್ನ ಸಂದೇಶ ಎಂದೂ ಹೇಳಿದ್ದಾರೆ. ಹಾಗೇ, ಉಳಿದ ಕೆಲವು ದೇಶಗಳನ್ನೂ ಉಲ್ಲೇಖಿಸಿದ್ದಾರೆ.
ಈ ಯುದ್ಧದಲ್ಲಿ ಆಸಕ್ತಿ ಹೊಂದಿರುವ ಇಡೀ ಭೂಮಿಯಲ್ಲಿರುವ ಏಕೈಕ ವ್ಯಕ್ತಿಯೆಂದರೆ ಅದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತ್ರ. ಉಳಿದಂತೆ ಯಾರಿಗೂ ಯುದ್ಧ ಬೇಕಾಗಿಲ್ಲ. ರಷ್ಯಾದ ಜನರಿಗೂ ಈ ಯುದ್ಧ ನಡೆಸುವುದು ಇಷ್ಟವಿಲ್ಲ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ದಯವಿಟ್ಟು ಪುಟಿನ್ ಜತೆ ಮಾತನಾಡಿ ಯುದ್ಧ ನಿಲ್ಲುವಂತೆ ಮಾಡಬೇಕು ಎಂದು ನಾವು ಮನವಿ ಮಾಡುತ್ತೇವೆ ಎಂದು ಹೇಳಿದ ಕುಲೆಬಾ, ಉಕ್ರೇನಿಯನ್ ಕೃಷಿ ಉತ್ಪನ್ನಗಳಿಗೆ ಭಾರತವೂ ಕೂಡ ಬಹುದೊಡ್ಡಮಟ್ಟದ ಗ್ರಾಹಕ. ಆದರೆ ಹೀಗೆ ಯುದ್ಧ ನಡೆಯುತ್ತಿದ್ದರೆ ನಮಗೆ ಹೊಸ ಬೆಳೆ ತೆಗೆಯುವುದು ತುಂಬ ಕಷ್ಟ. ಭಾರತದೊಂದಿಗೆ ಇನ್ನೂ ಹಲವು ದೇಶಗಳು ನಮ್ಮ ಗ್ರಾಹಕರಾಗಿವೆ. ಹೀಗಾಗಿ ಭಾರತ ಮತ್ತು ಜಾಗತಿಕ ಆಹಾರ ಸುರಕ್ಷತೆ ದೃಷ್ಟಿಯಿಂದಲೂ ಈ ಯುದ್ಧ ಕೂಡಲೇ ನಿಲ್ಲಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ರಷ್ಯಾ ಅಧ್ಯಕ್ಷನೊಂದಿಗೆ ಉತ್ತಮ ಸಂಬಂಧಹೊಂದಿರುವ ಭಾರತ, ಚೀನಾ, ನೈಜೀರಿಯಾ ಸೇರಿ ಇನ್ನಿತರ ರಾಷ್ಟ್ರಗಳಿಗೆ ಯುದ್ಧ ನಿಲ್ಲಿಸಲು ಸಹಾಯ ಮಾಡುವಂತೆ ಕೇಳಿಕೊಂಡಿರುವ ಉಕ್ರೇನ್ ಸಚಿವ ಕುಲೆಬಾ, ರಷ್ಯಾ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸಿ. ಆ ದೇಶ ಯುದ್ಧದ ನಿಯಮ ಉಲ್ಲಂಘಿಸುತ್ತಿದೆ. ಈಗ ಕದನ ವಿರಾಮವನ್ನೂ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಉಕ್ರೇನ್ನಲ್ಲಿರುವ ಇತರ ದೇಶಗಳ ನಾಗರಿಕರು, ನಮ್ಮ ನಾಗರಿಕರನ್ನು ಇಲ್ಲಿಂದ ಸ್ಥಳಾಂತರ ಮಾಡಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಯುದ್ಧದಿಂದ ಬಸವಳಿದ ವನ್ಯಜೀವಿಗಳು; ಉಕ್ರೇನ್ ಬಿಟ್ಟು ಎರಡು ದಿನ ಪ್ರಯಾಣಿಸಿ ಪೋಲ್ಯಾಂಡ್ ಸೇರಿಕೊಂಡು ಸಿಂಹ, ಹುಲಿಗಳು
Published On - 11:16 am, Sun, 6 March 22