Fact Check: ಬಾಂಗ್ಲಾದೇಶದಲ್ಲಿ ಮುಸ್ಲಿಮರು ಧ್ವಂಸ ಮಾಡಿದ್ದು ಹಿಂದೂ ದೇವಸ್ಥಾನವನ್ನಲ್ಲ: ನಿಜಾಂಶ ಇಲ್ಲಿದೆ
ವೈರಲ್ ವಿಡಿಯೋದಲ್ಲಿ ಅಪಾರ ಸಂಖ್ಯೆಯ ಜನರು ಕೋಲುಗಳಿಂದ ಕಟ್ಟಡವನ್ನು ಧ್ವಂಸಗೊಳಿಸುತ್ತಿದ್ದಾರೆ. ಇಲ್ಲಿರುವ ಅನೇಕ ಜನರು ತಲೆಯ ಮೇಲೆ ಬಿಳಿ ಟೋಪಿಗಳನ್ನು ಧರಿಸಿದ್ದಾರೆ. ವಿಡಿಯೋವನ್ನು ಶೇರ್ ಮಾಡುವವರ ಪ್ರಕಾರ, ಬಾಂಗ್ಲಾದೇಶಿ ಮುಸ್ಲಿಮರು ಅಲ್ಲಿರುವ ಹಿಂದೂ ದೇವಾಲಯವನ್ನು ಧ್ವಂಸ ಮಾಡುತ್ತಿದ್ದಾರೆ.
ನವೆಂಬರ್ 30 ರಂದು ಇಸ್ಕಾನ್ ಮಾಜಿ ಸದಸ್ಯ ಮತ್ತು ಹಿಂದೂ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಿದ ನಂತರ, ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಕನಿಷ್ಠ ಮೂರು ದಾಳಿ ಪ್ರಕರಣಗಳು ವರದಿಯಾಗಿವೆ. ಚಿನ್ಮಯ್ ಪರವಾಗಿ ಯಾವುದೇ ವಕೀಲರು ಪ್ರಕರಣದ ಹೋರಾಟಕ್ಕೆ ಮುಂದಾಗದ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಅಪಾರ ಸಂಖ್ಯೆಯ ಜನರು ಕೋಲುಗಳಿಂದ ಕಟ್ಟಡವನ್ನು ಧ್ವಂಸಗೊಳಿಸುತ್ತಿದ್ದಾರೆ. ಇಲ್ಲಿರುವ ಅನೇಕ ಜನರು ತಲೆಯ ಮೇಲೆ ಬಿಳಿ ಟೋಪಿಗಳನ್ನು ಧರಿಸಿದ್ದಾರೆ. ವಿಡಿಯೋವನ್ನು ಶೇರ್ ಮಾಡುವವರ ಪ್ರಕಾರ, ಬಾಂಗ್ಲಾದೇಶಿ ಮುಸ್ಲಿಮರು ಅಲ್ಲಿರುವ ಹಿಂದೂ ದೇವಾಲಯವನ್ನು ಧ್ವಂಸ ಮಾಡುತ್ತಿದ್ದಾರೆ. ಈ ಕುರಿತ ವೈರಲ್ ಪೋಸ್ಟ್ ಅನ್ನು ನೀವು ಇಲ್ಲಿ ನೋಡಬಹುದು. ‘‘ಸಾವಿರಾರು ಸುನ್ನಿ ಬಾಂಗ್ಲಾದೇಶಿಗಳು ಹಿಂದೂ ದೇವಾಲಯಗಳನ್ನು ಒಡೆಯುತ್ತಿದ್ದಾರೆ, ಹಿಂದೂಗಳನ್ನು ಕಂಡಲ್ಲಿ ಕೊಲ್ಲುತ್ತಿದ್ದಾರೆ. ಆದರೆ ಹಿಂದೂಗಳು ಮಾತ್ರ ಡೆಕಾಥ್ಲಾನ್, ಜಾರಾ, ಮಾರ್ಕ್ಸ್ ಎಂಬ ಹಲವು ಮೇಡ್ ಇನ್ ಬಾಂಗ್ಲಾದೇಶದ ವಸ್ತುಗಳನ್ನು ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ. ಹಿಂದೂಗಳೇ ಬಹಿಷ್ಕರಿಸಿ ಜಾಗೃತರಾಗಿ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬಾಂಗ್ಲಾದೇಶದ ಸಿರಾಜ್‌ಗಂಜ್‌ನಲ್ಲಿರುವ ಮುಸ್ಲಿಂ ಸಂತ ಅಲಿ ಪಾಗ್ಲಾ ಅವರ ದೇಗುಲವನ್ನು ಜನರು ಧ್ವಂಸಗೊಳಿಸಿದ ವಿಡಿಯೋ ಇದಾಗಿದೆ. ಅಲ್ಲದೆ ಈ ಘಟನೆ ನಡೆದಿರುವುದು ಈ ವರ್ಷದ ಆಗಸ್ಟ್ 29 ರಲ್ಲಿ.
ನಿಜಾಂಶವನ್ನು ತಿಳಿಯಲು ನಾವು ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ನಲ್ಲಿ ಹಿಮ್ಮುಖವಾಗಿ ಸರ್ಚ್ ಮಾಡಿದ್ದೇವೆ. ಆಗ ಆಗಸ್ಟ್ 30 ರ ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಕಂಡುಕೊಂಡಿದ್ದೇವೆ. ಹಜರತ್ ಬಾಬಾ ಅಲಿ ಪಾಗ್ಲಾ ಅವರ ದರ್ಗಾದಲ್ಲಿ ಈ ಘಟನೆ ನಡೆದಿದೆ ಎಂದು ಇಲ್ಲಿ ಹೇಳಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ಬಾಂಗ್ಲಾದೇಶದ ಸುದ್ದಿ ಚಾನೆಲ್ ಮೆಟ್ರೋ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವಿಡಿಯೋದ ದೀರ್ಘ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. ಆಗಸ್ಟ್ 29 ರ ಈ ವಿಡಿಯೋದಲ್ಲಿ, ಈ ಘಟನೆ ಬಾಂಗ್ಲಾದೇಶದ ಸಿರಾಜ್‌ಗಂಜ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ವರದಿಯ ಪ್ರಕಾರ, ಬಾಂಗ್ಲಾದೇಶದ ಸಿರಾಜ್‌ಗಂಜ್ ಜಿಲ್ಲೆಯಲ್ಲಿ ಆಗಸ್ಟ್ 29 ರಂದು ಈ ಘಟನೆ ನಡೆದಿದೆ. ಕಾಜಿಪುರ ಉಪಜಿಲ್ಲಾದ ಮನ್ಸೂರ್‌ನಗರ ಪ್ರದೇಶದಲ್ಲಿ ಮುಸ್ಲಿಂ ಸಂತ ಹಜರತ್ ಬಾಬಾ ಅಲಿ ಪಾಗ್ಲಾ ಅವರ ದರ್ಗಾವನ್ನು ಕೆಡವಲಾಯಿತು. ಇಮಾಮ್ ಗುಲಾಮ್ ರಬ್ಬಾನಿಯವರ ಆದೇಶದ ಮೇರೆಗೆ ಜನರು ಈ ಸಂಪೂರ್ಣ ಘಟನೆಯನ್ನು ನಡೆಸಿದ್ದರು. ವರದಿಗಳ ಪ್ರಕಾರ, ಈ ಘಟನೆಯ ನಂತರ ರಬ್ಬಾನಿ ಅವರನ್ನು ಅವರ ಸ್ಥಾನದಿಂದ ತೆಗೆದುಹಾಕಲಾಯಿತು.
ಮತ್ತೊಂದು ವರದಿಯ ಪ್ರಕಾರ, ಅಲಿ ಪಾಗ್ಲಾ ಒಬ್ಬ ಸಂತ, ಅವರು 10 ವರ್ಷಗಳ ಕಾಲ ಮಸೀದಿಯ ಇಮಾಮ್ ಆಗಿದ್ದರು. ಸೆಪ್ಟೆಂಬರ್ 19, 2004 ರಂದು ಅವರ ಮರಣದ ನಂತರ, ಅವರ ಅನುಯಾಯಿಗಳು ಅವರ ದರ್ಗಾವನ್ನು ನಿರ್ಮಿಸಿದರು. ಆದರೆ, ಆಗಸ್ಟ್ 29, 2024 ರಂದು, ಇಮಾಮ್ ಗುಲಾಮ್ ರಬ್ಬಾನಿ ಕೆಲವು ಜನರು ಅದನ್ನು ಕೆಡವಿದರು. ಘಟನೆಯಿಂದ ಕೋಪಗೊಂಡ ಸ್ಥಳೀಯ ಜನರು ಗುಲಾಮ್ ರಬ್ಬಾನಿ ವಿರುದ್ಧ ಪ್ರತಿಭಟನೆ ಆರಂಭಿಸಿದರು, ನಂತರ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸಲಾಯಿತು. ಈ ಸಂಬಂಧ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ. ಈ ಮೂಲಕ ವೈರಲ್ ಆಗಿರುವ ವಿಡಿಯೋದಲ್ಲಿ ಬಾಂಗ್ಲಾದೇಶದಲ್ಲಿ ಜನರು ದರ್ಗಾವನ್ನು ಕೆಡವಿದ್ದು ದೇವಸ್ಥಾನವನ್ನಲ್ಲ ಎಂಬುದು ಸ್ಪಷ್ಟವಾಗಿದೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ