Japan: ಜಪಾನ್‌ನ ಒಸಾಕಾದಲ್ಲಿ ಅಗ್ನಿ ದುರಂತ; 27 ಜನರ ದುರ್ಮರಣ
Building fire in Osaka: ಜಪಾನ್‌ನ ಒಸಾಕಾದ ಕಟ್ಟಡವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದೆ. 27 ಜನರು ದುರ್ಮರಣಕ್ಕೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಟೋಕಿಯೊ: ಜಪಾನ್‌ನ (Japan) ಒಸಾಕಾ ಜಿಲ್ಲೆಯ (Osaka) ವಾಣಿಜ್ಯ ಕಟ್ಟಡವೊಂದರಲ್ಲಿ ಶುಕ್ರವಾರ (ಡಿಸೆಂಬರ್ 17) ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಬೆಂಕಿಯನ್ನು ನಂದಿಸಿದ ನಂತರ ಎಂಟು ಅಂತಸ್ತಿನ ಕಟ್ಟಡದ ಒಳಗೆ ಮತ್ತು ಹೊರಗೆ ಹತ್ತಾರು ಅಗ್ನಿಶಾಮಕ ಸಿಬ್ಬಂದಿ ಕೆಲಸ ಮಾಡುತ್ತಿರುವುದನ್ನು ಟಿವಿ ದೃಶ್ಯಾವಳಿಗಳು ತೋರಿಸಿವೆ. ಬೆಂಕಿಗೆ ಆಹುತಿಯಾದ ಮಹಡಿಯು ಮಾನಸಿಕ ಆರೋಗ್ಯ ಸೇವೆಗಳು ಮತ್ತು ಸಾಮಾನ್ಯ ವೈದ್ಯಕೀಯ ಆರೈಕೆಯನ್ನು ಒದಗಿಸುವ ಕ್ಲಿನಿಕ್ ಅನ್ನು ಹೊಂದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಒಸಾಕಾ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಎಎಫ್‌ಪಿಗೆ ಈ ಕುರಿತು ಮಾಹಿತಿ ನೀಡಿ, ‘‘ದುರಂತದಲ್ಲಿ ಒಟ್ಟು 28 ಮಂದಿ ಸಿಲುಕಿದ್ದರು. ಅವರಲ್ಲಿ 27 ಜನರು ಮೃತಪಟ್ಟಿದ್ದು, ಶರೀರಗಳನ್ನು ಆಸ್ಪತ್ರೆಗೆ ಒಯ್ಯಲಾಗಿದೆ’’ ಎಂದಿದ್ದಾರೆ. ಜಪಾನ್ ಕಾಲಮಾನ ಬೆಳಿಗ್ಗೆ 10:18 ಕ್ಕೆ ನಾಲ್ಕನೇ ಮಹಡಿಯಲ್ಲಿ ಬೆಂಕಿ ಪತ್ತೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 70 ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದವು.
ಪಶ್ಚಿಮ ಜಪಾನ್‌ನ ನಗರದ ಕಿಟಾಶಿಂಚಿ ರೈಲು ನಿಲ್ದಾಣದ ಬಳಿಯ ಜನನಿಬಿಡ ವ್ಯಾಪಾರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಅರ್ಧ ಗಂಟೆಯ ನಂತರ ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬೆಂಕಿಗೆ ಕಾರಣ ಮತ್ತು ಇತರ ವಿವರಗಳು ತಕ್ಷಣಕ್ಕೆ ತಿಳಿದುಬಂದಿಲ್ಲ. ಒಸಾಕಾ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಟ್ಟಡದ ಇತರ ಮಹಡಿಯಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ:
ಗೆಳತಿ ಮನೆಯಲ್ಲಿ ಕಳ್ಳತನ; ಬಟ್ಟೆ ಬದಲಿಸುವ ನೆಪದಲ್ಲಿ ಚಿನ್ನಾಭರಣ ಹೊತ್ತು ಪರಾರಿ
Published On - 9:59 am, Fri, 17 December 21