ಆನ್​ಲೈನ್​ನಲ್ಲಿ ಅನಧಿಕೃತ ಸಾಲ ನೀಡುವ ಆ್ಯಪ್​ಗಳನ್ನು ಇನ್ಸ್ಟಾಲ್ ಮಾಡಿದ್ದೀರಾ? ನಿಮ್ಮ ಅಮೂಲ್ಯ ಡೇಟಾ ಕಳವಾಗಬಹುದು, ಎಚ್ಚರ!

ಆನ್​ಲೈನ್​ನಲ್ಲಿ ಅನಧಿಕೃತ ಸಾಲ ನೀಡುವ ಆ್ಯಪ್​ಗಳನ್ನು ಇನ್ಸ್ಟಾಲ್ ಮಾಡಿದ್ದೀರಾ? ನಿಮ್ಮ ಅಮೂಲ್ಯ ಡೇಟಾ ಕಳವಾಗಬಹುದು, ಎಚ್ಚರ!
ಪ್ರಾತಿನಿಧಿಕ ಚಿತ್ರ

Cyber Dost: ಆನ್​ಲೈನ್​ನಲ್ಲಿ ಅನಧಿಕೃತವಾಗಿ ಸಾಲ ನೀಡುವ ಕಂಪನಿಗಳಿಂದ ದೂರವಿರಿ ಎಂದು ಕೇಂದ್ರ ಗೃಹ ಸಚಿವಾಲಯದ ‘ಸೈಬರ್ ದೋಸ್ತ್’ ಸಲಹೆ ನೀಡಿದೆ. ಅದು ಹೀಗೆ ಎಚ್ಚರಿಸಲು ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

TV9kannada Web Team

| Edited By: shivaprasad.hs

Dec 17, 2021 | 10:13 AM

ಪ್ರಸ್ತುತ ಆನ್​ಲೈನ್​ನಲ್ಲಿ ತ್ವರಿತವಾಗಿ ಸಾಲ (Online Quick Loan) ನೀಡಲಾಗುವ ಹಲವಾರು ಅನಧಿಕೃತ ಮೊಬೈಲ್ ಅಪ್ಲಿಕೇಶನ್​ಗಳು ಹುಟ್ಟಿಕೊಂಡಿವೆ. ಇವುಗಳ ಕುರಿತು ದೂರುಗಳು ದಾಖಲಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಇವುಗಳಿಂದ ದೂರವಿರುವಂತೆ ಜನರಿಗೆ ಸಲಹೆ ನೀಡಿದೆ. ಕೇಂದ್ರ ಗೃಹ ಸಚಿವಾಲಯ ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಸ್ಥಾಪಿಸಲಾದ ‘ಸೈಬರ್ ದೋಸ್ತ್​’ನಲ್ಲಿ (Cyber Dost) ನಡೆಯುತ್ತಿರುವ ಜಾಗೃತಿ ಅಭಿಯಾನದಡಿ ಈ ಮಾಹಿತಿಯನ್ನು ಟ್ವೀಟ್ ಮಾಡಲಾಗಿದೆ. ತ್ವರಿತ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸಾಲದಾತರಿಂದ ದೂರವಿರಿ. ಇದು ಜನರನ್ನು ತೊಂದರೆಗೆ ಸಿಲುಕಿಸಬಹುದು ಎಂದು ತಿಳಿಸಲಾಗಿದೆ. ಸಾಲಗಳಿಗೆ ಅರ್ಜಿ ಸಲ್ಲಿಸುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸುರಕ್ಷತಾ ಸಲಹೆಗಳನ್ನು ಸರ್ಕಾರ ಪೋಸ್ಟ್ ಮಾಡಿದೆ. ಆರ್​ಬಿಐ ಪೋರ್ಟಲ್​ (RBI Portal)ನಲ್ಲಿ ಎಲ್ಲಾ ಕಂಪನಿಗಳ ಬಗ್ಗೆ ಮಾಹಿತಿಯಿದ್ದು, ಸಾಲ ಪಡೆಯುವ ಮುನ್ನ ಸಾಲ ನೀಡುವ ಕಂಪನಿಯ ದೃಢೀಕರಣವನ್ನು ಪರಿಶೀಲಿಸಿ ಎಂದು ಜನರಿಗೆ ಅದು ತಿಳಿಸಿದೆ.

ಡೇಟಾ ಕಳವಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ ಸೈಬರ್ ದೋಸ್ತ್: ಇದಲ್ಲದೆ, ಸೈಬರ್ ದೋಸ್ತ್ ಟ್ವಿಟರ್ ಹ್ಯಾಂಡಲ್ ಜನರು ತಮ್ಮ ಮೊಬೈಲ್ ಫೋನ್‌ನಲ್ಲಿ ಸಾಲವನ್ನು ಒದಗಿಸುವ ಅಜ್ಞಾತ ಅಪ್ಲಿಕೇಶನ್‌ಗಳನ್ನು ಇನ್​ಸ್ಟಾಲ್ ಮಾಡುವ ಮೊದಲು ಜಾಗರೂಕರಾಗಿರಲು ಕೇಳಿಕೊಂಡಿದೆ. ಅನಧಿಕೃತ ಆಪ್​ಗಳನ್ನು ಇನ್ಸ್ಟಾಲ್ ಮಾಡುವುದು ಬಳಕೆದಾರರ ಗೌಪ್ಯ ಡೇಟಾ ಮತ್ತು ಹಣಕಾಸನ್ನು ಅಪಾಯಕ್ಕೆ ಸಿಲುಕಬಹುದು ಎಂದು ಅದು ಹೇಳಿದೆ.

ಸೈಬರ್ ದೋಸ್ತ್ ತನ್ನ ಮಾಹಿತಿಯಲ್ಲಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಅಥವಾ ಪಾವತಿ ಮಾಡುವ ಮೊದಲು ವೆಬ್‌ಸೈಟ್‌ನ URL ನ ದೃಢೀಕರಣವನ್ನು ಪರಿಶೀಲಿಸಿ ಎಂದು ಬಳಕೆದಾರರಿಗೆ ಸಲಹೆ ನೀಡಿದೆ. ಆರ್‌ಬಿಐ ಕೂಡ ಅನಧಿಕೃತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ನೀಡುವ ತ್ವರಿತ ಮತ್ತು ಸುಲಲಿತ ಪ್ರಕ್ರಿಯೆಯ ಭರವಸೆ ನೀಡುವ ಸಾಲಗಳ ಬಗ್ಗೆ ಜನರನ್ನು ಎಚ್ಚರಿಸುತ್ತಲೇ ಇದೆ.

ಅನಧಿಕೃತ ಸಾಲ ನೀಡುವ ಕಂಪನಿಗಳ ಕಿರುಕುಳದಿಂದ ವರದಿಯಾದ ಪ್ರಕರಣಗಳು: ಇಂತಹ ಅನಧಿಕೃತ ಸಾಲ ವಸೂಲಿಗಾರರ ವಿರುದ್ಧ ದೇಶದ ಹಲವೆಡೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ದೆಹಲಿ, ಗುರುಗ್ರಾಮ್ ಮತ್ತು ಹೈದರಾಬಾದ್‌ಗಳಲ್ಲಿ ಇಂತಹ ಸಾಲದ ಅಪ್ಲಿಕೇಶನ್ ಹಗರಣವನ್ನು ಬಹಿರಂಗವಾಗಿ, ಹಲವಾರು ಮಂದಿಯನ್ನು ಬಂಧಿಸಲಾಗಿತ್ತು. ತೆಲಂಗಾಣದಲ್ಲಿ ಇಂತಹ ಕಂಪನಿಗಳ ಕಿರುಕುಳದಿಂದ ಸಾಫ್ಟ್‌ವೇರ್ ಇಂಜಿನಿಯರ್ ಸೇರಿದಂತೆ ಮೂರು ಆತ್ಮಹತ್ಯೆ ಪ್ರಕರಣಗಳು ವರದಿಯಾದ ನಂತರ ಅಂತಹ ಕಂಪನಿಗಳ ವಿರುದ್ಧ ಶಿಸ್ತುಕ್ರಮವನ್ನು ಪ್ರಾರಂಭಿಸಲಾಯಿತು.

ಯಾವೆಲ್ಲಾ ಮೂಲಗಳಿಂದ ಅಧಿಕೃತವಾಗಿ ಸಾಲ ಪಡೆಯಬಹುದು? ಬ್ಯಾಂಕ್‌ಗಳು, ಆರ್‌ಬಿಐ ನೋಂದಾಯಿತ ಹಣಕಾಸು ಕಂಪನಿಗಳು ಮತ್ತು ರಾಜ್ಯ ಸರ್ಕಾರಗಳು ನಿಯಂತ್ರಿಸುವ ಘಟಕಗಳಿಂದ ಕಾನೂನುಬದ್ಧ ಸಾಲಗಳನ್ನು ಪಡೆಯಬಹುದು ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ.

ಅನಧಿಕೃತ ಆಪ್​ಗಳು ಆನ್​ಲೈನ್​ನಲ್ಲಿ ಹೇಗೆ ವಂಚಿಸುತ್ತವೆ? ಜನರನ್ನು ತಮ್ಮ ಬಲೆಗೆ ಬೀಳಿಸಲು ಕಂಪನಿಗಳು ಅಗ್ಗದ ಸಾಲಗಳ ಲಿಂಕ್ ಮತ್ತು ಕಡಿಮೆ ಸಿಐಬಿಐಎಲ್(CIBIL) ಸ್ಕೋರ್ ಅನ್ನು ಕಳುಹಿಸುತ್ತವೆ. ಆ ಲಿಂಕ್ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡುವ ನಿಬಂಧನೆ ಹೊಂದಿರುತ್ತದೆ. ಇದರಿಂದ ಡೇಟಾ ಕಳವಾಗುವ ಸಾಧ್ಯತೆ ಹೆಚ್ಚು. ಇದಲ್ಲದೇ ಸಾಲ ಪಡೆದವರಿಗೆ ಕಂಪನಿಗಳು ಮಾನಸಿಕ ಕಿರುಕುಳ ನೀಡುತ್ತವೆ. ಈ ಮೂಲಕ ಸಾಲ ವಾಪಸ್ ಪಡೆಯಲು ಯತ್ನಿಸುತ್ತವೆ. ತೇಜೋವಧೆಗೂ ಮುಂದಾಗುತ್ತವೆ. ಡೇಟಾ ಕಳವು, ಮಾನಸಿಕ ಹಿಂಸೆ ಮೊದಲಾದ ಕಾರಣಗಳಿಂದ ಈ ಆಪ್​ಗಳು ಅಪಾಯಕಾರಿಯಾಗಿವೆ.

ದೇಶದಲ್ಲಿ 600 ನಕಲಿ ಸಾಲದ ಅಪ್ಲಿಕೇಶನ್‌ಗಳಿವೆ ಎಂದು ಈ ವಾರ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಆರ್‌ಬಿಐ ಸಲ್ಲಿಸಿದ ವರದಿಯನ್ನು ಆಧರಿಸಿ ಈ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ:

ಉತ್ತರ ಕೊರಿಯಾದಲ್ಲಿ 11 ದಿನ ರಾಷ್ಟ್ರೀಯ ಶೋಕಾಚರಣೆ; ನಗೋದು ಕೂಡ ಬ್ಯಾನ್! ಕಾರಣವೇನು ಗೊತ್ತಾ?

PM Modi: ಇಂದು ಅಖಿಲ ಭಾರತ ಮೇಯರ್​ಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಲಿರುವ ಪ್ರಧಾನಿ ಮೋದಿ

Follow us on

Related Stories

Most Read Stories

Click on your DTH Provider to Add TV9 Kannada