ಉದ್ಯೋಗಿಗಳಿಗೆ 2 ಉಚಿತ ಮನೆಗಳನ್ನು ನೀಡುವುದಾಗಿ ಘೋಷಿಸಿದ ಕಂಪನಿ; ಇದಕ್ಕೆ ಮೀಸಲಿಟ್ಟ ಹಣವೆಷ್ಟು?
ಫ್ಲೋರಿಡಾ ಮೂಲದ ಕಂಪನಿಯು ತನ್ನ ಉದ್ಯೋಗಿಗಳಿಗೆ ಎರಡು ಹೊಸ ಮತ್ತು ಅಡಮಾನ-ಮುಕ್ತ ಮನೆಗಳಿಗೆ ರೇಖಾಚಿತ್ರವನ್ನು ನೀಡುತ್ತಿದೆ. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.
ಫ್ಲೋರಿಡಾ: ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಖುಷಿಪಡಿಸಲು, ತಮ್ಮ ಕಂಪನಿಯಲ್ಲೇ ಉಳಿಸಿಕೊಳ್ಳಲು ಬೋನಸ್, ಅಧಿಕ ವೇತನಗಳನ್ನು ನೀಡುತ್ತವೆ. ಆದರೆ ಫ್ಲೋರಿಡಾ (Florida) ಮೂಲದ ಕಂಪನಿಯೊಂದು ಒಂದು ವಿನೂತನ ಹೆಜ್ಜೆ ಇಟ್ಟಿದ್ದು, ಉದ್ಯೋಗಿಗಳಿಗೆ ವಿಶೇಷ ರೀತಿಯಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದೆ. ಅದೇನು ಅಂತೀರಾ? ಹೊಸ ಅಭಿವೃದ್ಧಿಗಳಿಗಾಗಿ ಏರ್ ಕಂಡೀಷನಿಂಗ್ ಮತ್ತು ಕೊಳಾಯಿಗಳನ್ನು ಒದಗಿಸುವ ‘ಮೆಕ್ಯಾನಿಕಲ್ ಒನ್’ (Mechanical one) ಕಂಪನಿಯು, 2 ಹೊಸ ಮತ್ತು ಅಡಮಾನ-ಮುಕ್ತ (mortgage-free) ಮನೆಗಳಿಗೆ ರೇಖಾಚಿತ್ರವನ್ನು ಶೀಘ್ರದಲ್ಲೇ ಒದಗಿಸಲಿದೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಇದಕ್ಕಾಗಿ ಡ್ರಾಯಿಂಗ್ ನಡೆಯಲಿದೆ ಎಂದು ಅಧ್ಯಕ್ಷ ಮತ್ತು ಸಿಇಒ ಜೇಸನ್ ಜೇಮ್ಸ್ ಹೇಳಿದ್ದಾರೆ. ಡಿಸೆಂಬರ್ 4 ರಂದು ನಡೆದ ನೌಕರರ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.
‘‘ನಮ್ಮ ಉತ್ಸಾಹವು ನಿಜವಾಗಿಯೂ ಉದ್ಯೋಗಿಗಳ ಮೆಚ್ಚುಗೆಯನ್ನು ಮರುವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದೆ. ನಮ್ಮ ವ್ಯವಹಾರ ಮಾದರಿಯು ನಿಜವಾಗಿಯೂ, ನಾವು ನಮ್ಮ ಉದ್ಯೋಗಿಗಳ ಕುರಿತು ಕಾಳಜಿ ವಹಿಸಿದರೆ, ಅವರು ನಮಗೆ ಯಾವುದೇ ಮಾರ್ಕೆಟಿಂಗ್ ಬಜೆಟ್‌ಗಿಂತ ಹೆಚ್ಚಿನದನ್ನು ಮರಳಿ ನೀಡುತ್ತಾರೆ’’ ಎಂದು ಜೇಮ್ಸ್ (James) ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ನೀಡಲಾಗುವ ಮನೆಗಳಿಗೆ ಮೂರು ಮಲಗುವ ಕೋಣೆಗಳು, ಎರಡು ಸ್ನಾನದ ಮನೆಗಳಿವೆ. ಯೋಜನೆಗಾಗಿ $500,000 (₹ 3.8 ಕೋಟಿ) ಬಜೆಟ್ ಅನ್ನು ಮೀಸಲಿಡಲಾಗಿದೆ.
ಜೇಮ್ಸ್ ಅವರು ಕಾರು ಅಥವಾ ರಜೆ ನೀಡುವ ಬಗ್ಗೆ ಕಂಪನಿ ಮೊದಲು ಯೋಚಿಸಿತ್ತು. ಆದರೆ ಉದ್ಯೋಗಿಗಳು ಸ್ವಂತ ಮನೆಯನ್ನು ಹೊಂದಬೇಕು ಎಂದು ಕಂಪನಿ ಆಶಿಸಿತು. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಂಸ್ಥೆಯಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕರಿಗೆ ಈಗಾಗಲೇ ಮನೆಗಳಿವೆ. ಆದರೆ ಅವರಲ್ಲಿ ಹೆಚ್ಚಿನವರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅಂಥವರಿಗೆ ಈ ಯೋಜನೆ ಸಹಕಾರಿಯಾಗಲಿದೆ.
ಡ್ರಾಯಿಂಗ್‌ಗೆ ಅರ್ಹತೆ ಪಡೆಯಲು, ಉದ್ಯೋಗಿಗಳು ಕಂಪನಿಯಲ್ಲಿ ಕನಿಷ್ಠ ಒಂದು ವರ್ಷದವರೆಗೆ ಕೆಲಸ ಮಾಡಿರಬೇಕು. ಕಂಪನಿಯು ಪಾವತಿಸುವ ಆರ್ಥಿಕ ಸಾಕ್ಷರತಾ ತರಗತಿಯಲ್ಲಿ ಭಾಗವಹಿಸಬೇಕು. ಇದರೊಂದಿಗೆ ಉದ್ಯೋಗಿಗಳು ತಮ್ಮ ಆಯ್ಕೆಯ ಲಾಭರಹಿತ ಸಂಸ್ಥೆಯಲ್ಲಿ 20 ಗಂಟೆಗಳ ಕಾಲ ಸಮುದಾಯ ಸೇವೆಯಲ್ಲಿ ಭಾಗವಹಿಸಬೇಕು. “ಉದ್ಯೋಗಿಗಳು ಆರ್ಥಿಕ ಶಿಕ್ಷಣವನ್ನು ಪಡೆಯುವುದು, ಸ್ವಂತ ಮನೆಯನ್ನು ಹೊಂದುವ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ಇದು ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಸಿಇಒ ಹೇಳಿದ್ದಾರೆ.
ಕಂಪನಿಯು ಸುಮಾರು 100 ಉದ್ಯೋಗಿಗಳನ್ನು ಹೊಂದಿದೆ. ಇದು ಜುಲೈನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಒಂದು ವರ್ಷ ಪೂರ್ಣವಾಗದ ಕಾರಣ ಯಾವುದೇ ಉದ್ಯೋಗಿ ಇನ್ನೂ ಡ್ರಾಯಿಂಗ್‌ಗೆ ಅರ್ಹತೆ ಪಡೆದಿಲ್ಲ. ಆದರೆ ಕಂಪನಿಯ ಈ ನಿರ್ಧಾರ ಉದ್ಯೋಗಿಗಳಿಗೆ ಆಸಕ್ತಿ ಮೂಡಿಸಿದೆ. ಉದ್ಯೋಗಿಗಳನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಅಮೇರಿಕಾದಲ್ಲಿ ಕಂಪನಿಗಳು ಕಸರತ್ತು ನಡೆಸುತ್ತಿರುವಾಗಲೇ, ಈ ಕಂಪನಿಯ ನಿರ್ಧಾರ ಎಲ್ಲೆಡೆ ಸಂಚಲನ ಮೂಡಿಸಿದೆ.
ಇದನ್ನೂ ಓದಿ:
Gender neutral uniforms ಕೇರಳದಲ್ಲಿ ಶಾಲಾಮಕ್ಕಳಿಗೆ ಜೆಂಡರ್ ನ್ಯೂಟ್ರಲ್ ಸಮವಸ್ತ್ರ, ವಿರೋಧವೇಕೆ?