Florona: ಇಸ್ರೇಲ್ನಲ್ಲಿ ಮೊದಲ ‘ಪ್ಲೊರೊನಾ’ ರೋಗದ ಪ್ರಕರಣ ಪತ್ತೆಯಾಗಿದ್ದು ಕೋವಿಡ್-19 ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ!
Israel | Covid 19: ಏತನ್ಮಧ್ಯೆ, ಇಸ್ರೇಲಿನ ರಾಷ್ಟ್ರೀಯ ಆರೋಗ್ಯ ಕಾರ್ಯಕರ್ತರು ದುರ್ಬಲ ರೋಗ ನಿರೋಧಕ ಶಕ್ತಿ ಉಳ್ಳವರಿಗೆ ಕೋವಿಡ್-19 ಸೋಂಕಿನ ವಿರುದ್ಧ ಲಸಿಕೆ ನಾಲ್ಕನೇ ಡೋಸ್ ನೀಡುವುದನ್ನು ಶುಕ್ರವಾರ ಆರಂಭಿಸಿದರು.
ಅರಬ್ ನ್ಯೂಸ್ ಗುರುವಾರ ಮಾಡಿರುವ ವರದಿಯ ಪ್ರಕಾರ ಇಸ್ರೇಲ್ನಲ್ಲಿ ಮೊಟ್ಟ ಮೊದಲ ‘ಫ್ಲೊರೊನಾ’ (Florona) ರೋಗದ ಪ್ರಕರಣ ಬೆಳಕಿಗೆ ಬಂದಿದೆ. ಫ್ಲೊರೊನಾ, ಕೋವಿಡ್-19 ಮತ್ತು ಇನ್ಫ್ಲುಯೆಂಜಾ ಮಿಶ್ರಣದ ಸೋಂಕಾಗಿದ್ದು ಜಾಸ್ತಿ ಅಪಾಯಕಾರಿ ಎನ್ನಲಾಗಿದೆ. ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಅರಬ್ ನ್ಯೂಸ್ ಫ್ಲೊರೊನಾ ಸೋಂಕಿನ ಪ್ರಕರಣವನ್ನು ಖಚಿತ ಪಡಿಸಿದೆ.
#BREAKING: #Israel records first case of #florona disease, a double infection of #COVID19 and influenza: Al-Arabiya https://t.co/PTTLP4n0rS pic.twitter.com/mYpgnG8ZE1
— Arab News (@arabnews) December 31, 2021
ಏತನ್ಮಧ್ಯೆ, ಇಸ್ರೇಲಿನ ರಾಷ್ಟ್ರೀಯ ಆರೋಗ್ಯ ಕಾರ್ಯಕರ್ತರು ದುರ್ಬಲ ರೋಗ ನಿರೋಧಕ ಶಕ್ತಿ ಉಳ್ಳವರಿಗೆ ಕೋವಿಡ್-19 ಸೋಂಕಿನ ವಿರುದ್ಧ ಲಸಿಕೆ ನಾಲ್ಕನೇ ಡೋಸ್ ನೀಡುವುದನ್ನು ಶುಕ್ರವಾರ ಆರಂಭಿಸಿದರು.
ಒಮೈಕ್ರಾನ್ ಸೋಂಕಿನ ಪ್ರಕರಣಗಳು ವಿಶ್ವದೆಲ್ಲೆಡೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಆರೋಗ್ಯ ಸಚಿವಾಲಯದ ಮಹಾ-ನಿರ್ದೇಶಕ ನಚ್ಮನ್ ಆಶ್ ಅವರು ದೇಹದಲ್ಲಿ ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವವರಿಗೆ ಬೂಸ್ಟರ್ ಡೋಸ್ ನೀಡಲು ಶುಕ್ರವಾರ ಅನುಮೋದನೆ ಕೊಟ್ಟರು. ಕನಿಷ್ಟ 4 ತಿಂಗಳ ಹಿಂದೆ ಕೋವಿಡ್ ಲಸಿಕೆಯ ಮೂರನೇ ಡೋಸ್ ಹಾಕಿಸಿಕೊಂಡವರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ ಎಂದು ಟೈಮ್ ಆಫ್ ಇಸ್ರೇಲ್ ಪತ್ರಿಕೆ ವರದಿ ಮಾಡಿದೆ.
ವೃದ್ಧಾಶ್ರಮ ಮತ್ತು ಇತರ ವಯಸ್ಕರ ಕೇಂದ್ರಗಳಲ್ಲಿರುವ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹ ಆಶ್ ಶುಕ್ರವಾರ ಬೆಳಗ್ಗೆ ಅನುಮೋದನೆ ನೀಡಿದರು. ಇಂಥ ಕೇಂದ್ರಗಳಲ್ಲಿ ವಾಸವಾಗಿರುವ ಜನ ಬೇಗ ಸೋಂಕಿಗೆ ಈಡಾಗುವ ಭೀತಿ ಮತ್ತು ಅವರ ಆರೋಗ್ಯ ಮತ್ತು ಜೀವಕ್ಕೆ ಅಪಾಯ ಉಂಟಾಗಬಹುದಾದ ಹಿನ್ನೆಲೆಯಲ್ಲಿ ಈ ಕ್ರಮ ಜಾರಿಗೊಳಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿರುವುದನ್ನು ಟೈಮ್ ಆಫ್ ಇಸ್ರೇಲ್ ಪತ್ರಿಕೆ ವರದಿ ಮಾಡಿದೆ.
ಕಳವಳಕಾರಿ ಅಂಶವೇನೆಂದರೆ, ಇಸ್ರೇಲ್ ನಲ್ಲೂ ಕೊವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಸ್ರೇಲ್ ಆರೋಗ್ಯ ಸಚಿವಾಲಯ ಶುಕ್ರವಾರದಂದು ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ಗುರುವಾರ ಸುಮಾರು 5,000 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: ಸೊಟ್ರೋವಿಮಾಬ್ ಚುಚ್ಚುಮದ್ದು ಒಮೈಕ್ರಾನ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ಮತ್ತು ಪರೀಕ್ಷೆಗಳು ಸಾಬೀತು ಮಾಡಿವೆ