Video: ಇಂಡೋನೇಷ್ಯಾ ಮಸೀದಿಯಲ್ಲಿ ಅಗ್ನಿ ಅನಾಹುತ, ಧರೆಗುರುಳಿದ ಪವಿತ್ರ ಗುಮ್ಮಟ
ಇದು ಇಂಡೋನೇಷ್ಯಾದಲ್ಲಿ ಇಸ್ಲಾಂ ಧಾರ್ಮಿಕ ಅಧ್ಯಯನಕ್ಕೆ ಸಂಬಂಧಿಸಿದ ಚಿಂತಕರ ಚಾವಡಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಜಕಾರ್ತಾ: ಇಂಡೋನೇಷ್ಯಾದ (Indonesia) ರಾಜಧಾನಿ ಜಕಾರ್ತಾದ ಉತ್ತರ ಭಾಗದಲ್ಲಿರುವ ಜಾಮೀ ಮಸೀದಿಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಮಸೀದಿಯ ಗುಮ್ಮಟ ಕುಸಿದಿದೆ. ಮಸೀದಿಯಲ್ಲಿ ಜೀರ್ಣೋದ್ಧಾರ ಚಟುವಟಿಕೆಗಳು ನಡೆಯುತ್ತಿದ್ದ ಕಾರಣ ಹೆಚ್ಚಿನ ಜನಸಂದಣಿ ಇರಲಿಲ್ಲ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಬೆಂಕಿ ಆರಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಜಕಾರ್ತಾ ಇಸ್ಲಾಮಿಕ್ ಸೆಂಟರ್ಗೆ ಹೊಂದಿಕೊಂಡಂತಿರುವ ಕಟ್ಟಡ ಸಮುಚ್ಚಯದಲ್ಲಿ ಮಸೀದಿಯು ಇದೆ. ಇದು ಇಂಡೋನೇಷ್ಯಾದಲ್ಲಿ ಇಸ್ಲಾಂ ಧಾರ್ಮಿಕ ಅಧ್ಯಯನಕ್ಕೆ ಸಂಬಂಧಿಸಿದ ಚಿಂತಕರ ಚಾವಡಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಘಟನೆಯ ವಿಡಿಯೊ ವೈರಲ್ ಆಗಿದ್ದು, ಧಗಧಗಿಸುವ ಅಗ್ನಿಯ ಕೆನ್ನಾಲಗೆ ಇಡೀ ಕಟ್ಟಡವನ್ನು ಆವರಿಸಿಕೊಂಡ ನಂತರ ಮಸೀದಿಯ ಪವಿತ್ರ ಗುಮ್ಮಟವು ಕುಸಿಯಿತು. ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಘಟನೆಯ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುತ್ತಿಗೆ ಕಂಪನಿಯ ನೌಕರರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
Published On - 9:16 am, Thu, 20 October 22