ಪ್ರತಿಕ್ರಿಯಿಸಲು 30 ಸೆಕೆಂಡ್ ಮಾತ್ರ ಇತ್ತು; ಭಾರತದ ಬ್ರಹ್ಮೋಸ್ ದಾಳಿ ಬಗ್ಗೆ ಪಾಕಿಸ್ತಾನ ಪ್ರಧಾನಿಯ ಸಹಾಯಕ ಹೇಳಿದ್ದೇನು?

ನೂರ್ ಖಾನ್ ವಾಯುನೆಲೆಯಲ್ಲಿ ಭಾರತೀಯ ಬ್ರಹ್ಮೋಸ್ ದಾಳಿಯ ಬಗ್ಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಗಾರ ಹೇಳಿಕೆ ನೀಡಿದ್ದಾರೆ. 'ನಮಗೆ ಭಾರತದ ದಾಳಿಗೆ ಪ್ರತಿಕ್ರಿಯಿಸಲು ಕೇವಲ 30 ಸೆಕೆಂಡುಗಳು ಮಾತ್ರ ಇತ್ತು' ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ವಿಶೇಷ ಸಲಹೆಗಾರ ರಾಣಾ ಸನಾವುಲ್ಲಾ ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತದ "ಆಪರೇಷನ್ ಸಿಂಧೂರ್" ಸಮಯದಲ್ಲಿ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಉಡಾಯಿಸಿದ್ದರಿಂದ ಪಾಕಿಸ್ತಾನದ ರಕ್ಷಣಾ ಉಪಕರಣವು ಪರದಾಡಿತು ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಲು 30 ಸೆಕೆಂಡ್ ಮಾತ್ರ ಇತ್ತು; ಭಾರತದ ಬ್ರಹ್ಮೋಸ್ ದಾಳಿ ಬಗ್ಗೆ ಪಾಕಿಸ್ತಾನ ಪ್ರಧಾನಿಯ ಸಹಾಯಕ ಹೇಳಿದ್ದೇನು?
Rana Sanaullah

Updated on: Jul 03, 2025 | 10:54 PM

ಇಸ್ಲಾಮಾಬಾದ್, ಜುಲೈ 3: ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ (Shehbaz Sharif) ಅವರ ಹಿರಿಯ ಸಲಹೆಗಾರ ರಾಣಾ ಸನಾವುಲ್ಲಾ ಅವರು, ‘ಆಪರೇಷನ್ ಸಿಂಧೂರ್’ (Operation Sindoor) ಸಮಯದಲ್ಲಿ ಭಾರತ ಹಾರಿಸಿದ ಬ್ರಹ್ಮೋಸ್ ಕ್ಷಿಪಣಿಯು ಪರಮಾಣು ದಾಳಿಯೇ ಎಂದು ತಿಳಿಯಲು ಪಾಕಿಸ್ತಾನ ಸೇನೆಗೆ ಕೇವಲ 30ರಿಂದ 45 ಸೆಕೆಂಡುಗಳು ಮಾತ್ರ ಇತ್ತು ಎಂದು ಒಪ್ಪಿಕೊಂಡಿದ್ದಾರೆ. ಭಾರತದ “ಆಪರೇಷನ್ ಸಿಂಧೂರ್” ಸಮಯದಲ್ಲಿ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಉಡಾವಣೆಯು ಪಾಕಿಸ್ತಾನದ ರಕ್ಷಣಾ ಉಪಕರಣವನ್ನು ಪರದಾಡುವಂತೆ ಮಾಡಿತು ಎಂದು ಪ್ರಧಾನಿಯವರ ವಿಶೇಷ ಸಹಾಯಕ ರಾಣಾ ಸನಾವುಲ್ಲಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ರಾಣಾ ಸನಾವುಲ್ಲಾ, ಭಾರತವು ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಉಡಾಯಿಸಿದಾಗ, ಪಾಕಿಸ್ತಾನ ವಾಯುಪಡೆ (ಪಿಎಎಫ್) ಬೆದರಿಕೆಯ ಸ್ವರೂಪವನ್ನು ನಿರ್ಣಯಿಸಲು ಕೇವಲ 30 ಸೆಕೆಂಡುಗಳಿತ್ತು ಎಂದು ಹೇಳಿದ್ದಾರೆ. “ನಮ್ಮ ಮೇಲಿನ ದಾಳಿಯ ಬಗ್ಗೆ ಕೇವಲ 30 ಸೆಕೆಂಡುಗಳಲ್ಲಿ ನಿರ್ಧರಿಸುವುದು ಅಪಾಯಕಾರಿ ಪರಿಸ್ಥಿತಿಯಾಗಿತ್ತು. ಆದರೆ, ನಮ್ಮ ಬಳಿ ಸಮಯ ಇರಲಿಲ್ಲ” ಎಂದು ಸನಾವುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ಐತಿಹಾಸಿಕ ಪಾಲುದಾರಿಕೆಗೆ ಪಾಕಿಸ್ತಾನ ಸಿದ್ಧ; ವರಸೆ ಬದಲಿಸಿದ ಬಿಲಾವಲ್ ಭುಟ್ಟೋ

ಭಾರತ ಪರಮಾಣು ಬಾಂಬ್ ದಾಳಿಯನ್ನು ಬಳಸದೇ ಇರಬಹುದು, ಪಾಕಿಸ್ತಾನವು ಈ ಉಡಾವಣೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು, ಇದು ಜಾಗತಿಕವಾಗಿ ವಿನಾಶಕಾರಿ ಪರಿಣಾಮಗಳೊಂದಿಗೆ ಪರಮಾಣು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.


ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯ ಪ್ರವಾಸಿಗರು ಪಾಕಿಸ್ತಾನ ಮೂಲದ ಉಗ್ರರಿಂದ ಸಾವನ್ನಪ್ಪಿದ ಘಟನೆಗೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂಧೂರ್ ಎಂಬ ಸಂಘಟಿತ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತು. ಈ ಕಾರ್ಯಾಚರಣೆಯ ಸಮಯದಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ. ಇಆಪರೇಷನ್ ಸಿಂಧೂರ್ ಭಾರತವು ನೂರ್ ಖಾನ್ ವಾಯುನೆಲೆಯ ಮೇಲೆ ನಡೆಸಿದ ಎರಡನೇ ದಾಳಿಯಾಗಿದೆ, ಮೊದಲನೆಯ ಬಾರಿ 1971ರ ಯುದ್ಧದ ಸಮಯದಲ್ಲಿ IAFನ 20 ಸ್ಕ್ವಾಡ್ರನ್ ಹಾಕರ್ ಹಂಟರ್ ಜೆಟ್‌ಗಳನ್ನು ಬಳಸಿ ಈ ಸ್ಥಳವನ್ನು ಗುರಿಯಾಗಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಹೇರಲಾಗಿದ್ದ ಪಾಕಿಸ್ತಾನದ ನ್ಯೂಸ್ ವೆಬ್‌ಸೈಟ್‌, ಯೂಟ್ಯೂಬ್ ಚಾನೆಲ್​ಗಳ ಮೇಲಿನ ನಿಷೇಧ ತೆರವು

ಇದರ ಜೊತೆಗೆ ಇನ್ನೂ ಒಂದು ವಿಷಯವನ್ನು ಸಂದರ್ಶನದಲ್ಲಿ ರಾಣಾ ಸನಾವುಲ್ಲಾ ಹಂಚಿಕೊಂಡಿದ್ದು, ಭಾರತದ ಬ್ರಹ್ಮೋಸ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಬಿಕ್ಕಟ್ಟಿನ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಲು ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊರೆ ಹೋಗಲಾಯಿತು. ಎರಡೂ ದೇಶಗಳ ನಡುವೆ ಕದನವಿರಾಮದಲ್ಲಿ ಟ್ರಂಪ್ ಪಾತ್ರದ ಬಗ್ಗೆ ಸ್ವತಂತ್ರ ಮೌಲ್ಯಮಾಪನ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಇದರ ನಡುವೆ, ಭಾರತವು ಯಾವುದೇ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆಯನ್ನು ನಿರಂತರವಾಗಿ ನಿರಾಕರಿಸಿದೆ. ಪಾಕಿಸ್ತಾನವೇ ನೇರವಾಗಿ ಭಾರತವನ್ನು ಸಂಪರ್ಕಿಸಿ ಕದನವಿರಾಮದ ಪ್ರಸ್ತಾಪ ಮಾಡಿದ್ದು ಎಂದು ಭಾರತ ಹೇಳಿಕೊಂಡಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:52 pm, Thu, 3 July 25