ವಿದೇಶಿ ವಿದ್ಯಾರ್ಥಿಗಳ ದಾಖಲಾತಿ ನಿಷೇಧ; ಟ್ರಂಪ್ ಆಡಳಿತದ ವಿರುದ್ಧ ಹಾರ್ವರ್ಡ್ ಮೊಕದ್ದಮೆ ದಾಖಲು
ಗುಣಮಟ್ಟದ ಉನ್ನತ ವಿದ್ಯಾಭ್ಯಾಸಕ್ಕೆ ಹೆಸರಾಗಿರುವ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಮೇಲೆ ಡೊನಾಲ್ಡ್ ಟ್ರಂಪ್ ಕಣ್ಣು ನೆಟ್ಟಿದ್ದು, 2025–26ರ ಅವಧಿಗೆ ಹಾರ್ವರ್ಡ್ ವಿಶ್ವವಿದ್ಯಾಲಯವು ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವುದಕ್ಕೆ ನಿಷೇಧ ಹೇರಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಮೂಲಕ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದ್ಯಾಭ್ಯಾಸಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಭವಿಷ್ಯಕ್ಕೂ ಟ್ರಂಪ್ ತಣ್ಣೀರೆರಚಲು ಮುಂದಾಗಿದ್ದರು. ಹೆಚ್ಚುತ್ತಿರುವ ಯೆಹೂದ್ಯ ವಿರೋಧಿ ಮತ್ತು ಹಮಾಸ್ ಪರ ಭಾವನೆಗಳನ್ನು ಪರಿಹರಿಸಲು ಮತ್ತು ಕ್ಯಾಂಪಸ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಾರ್ವರ್ಡ್ ವಿಫಲವಾಗಿದೆ ಎಂಬ ಕಾರಣ ನೀಡಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಾಖಲಾತಿಗೆ ನಿಷೇಧ ಹೇರಲಾಗಿತ್ತು.

ನವದೆಹಲಿ, ಮೇ 23: ಹಾರ್ವರ್ಡ್ ವಿಶ್ವವಿದ್ಯಾಲಯದ ಮೇಲೆ ನಿರ್ಬಂಧಗಳನ್ನು ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತ ಸೇರಿದಂತೆ ಯಾವುದೇ ಬೇರೆ ದೇಶಗಳ ವಿದ್ಯಾರ್ಥಿಗಳಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ದಾಖಲಾತಿಗೆ ಅವಕಾಶ ನೀಡಬಾರದು ಎಂದು ಆದೇಶಿಸಿದ್ದರು. ಈಗಾಗಲೇ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳು ಬೇರೆ ಕಾಲೇಜುಗಳಿಗೆ ವರ್ಗಾವಣೆ ಮಾಡಿಕೊಳ್ಳಬಹುದು, ಇಲ್ಲದಿದ್ದರೆ ಅವರ ಪದವಿಗೆ ಕಾನೂನು ಮಾನ್ಯತೆ ನೀಡುವುದಿಲ್ಲ. ಮುಂದಿನ ವರ್ಷದಿಂದ ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯನ್ನು ನಿಷೇಧಿಸಲಾಗಿದೆ ಎಂದು ಟ್ರಂಪ್ ಸರ್ಕಾರ ಘೋಷಿಸಿತ್ತು. ಇದು ಬೇರೆ ದೇಶಗಳ ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ಕನಸಿಗೆ ದೊಡ್ಡ ಪೆಟ್ಟು ಕೊಟ್ಟಿತ್ತು. ಆದರೆ, ಇದೀಗ ಹಾರ್ವರ್ಡ್ ವಿಶ್ವವಿದ್ಯಾಲಯ (Harvard University) ಈ ಆದೇಶದ ವಿರುದ್ಧ ಮೊಕದ್ದಮೆ ದಾಖಲಿಸಿದೆ.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಾಖಲಾತಿಯನ್ನು ನಿಷೇಧಿಸಿದ್ದಕ್ಕಾಗಿ ಹಾರ್ವರ್ಡ್ ಟ್ರಂಪ್ ಆಡಳಿತದ ಮೇಲೆ ಮೊಕದ್ದಮೆ ಹೂಡಿದೆ. ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವುದನ್ನು ನಿಷೇಧಿಸುವ ನಿರ್ಧಾರವನ್ನು ಪ್ರಶ್ನಿಸಿ ಹಾರ್ವರ್ಡ್ ವಿಶ್ವವಿದ್ಯಾಲಯವು ಟ್ರಂಪ್ ಆಡಳಿತದ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ದೊಡ್ಡಣ್ಣನಿಗೆ ಇಷ್ಟು ಸಣ್ಣತನವೇಕೆ? ಅತಿಥಿಗಳಿಗೆ ಸತ್ಕಾರದ ಬದಲು ಅವಮಾನ ಮಾಡ್ತಿದ್ದಾರೆ ಟ್ರಂಪ್
ಶ್ವೇತಭವನದ ರಾಜಕೀಯ ಬೇಡಿಕೆಗಳನ್ನು ವಿರೋಧಿಸಿದ್ದಕ್ಕಾಗಿ ಈ ನಿಷೇಧ ಹೇರಲಾಗಿದೆ. ಇದು ಅಸಂವಿಧಾನಿಕ ಪ್ರತೀಕಾರ ಎಂದು ವಿಶ್ವವಿದ್ಯಾಲಯವು ಆರೋಪಿಸಿದೆ. ಬೋಸ್ಟನ್‌ನ ಫೆಡರಲ್ ನ್ಯಾಯಾಲಯದಲ್ಲಿ ಇಂದು ಸಲ್ಲಿಸಲಾದ ಮೊಕದ್ದಮೆಯಲ್ಲಿ, ಹಾರ್ವರ್ಡ್ ವಿಶ್ವವಿದ್ಯಾಲಯವು ಸರ್ಕಾರದ ಕ್ರಮವು ಮೊದಲ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿತು. ಇದು “ಹಾರ್ವರ್ಡ್ ಮತ್ತು 7,000ಕ್ಕೂ ಹೆಚ್ಚು ವೀಸಾ ಹೊಂದಿರುವವ ವಿದ್ಯಾರ್ಥಿಗಳ ಮೇಲೆ ತಕ್ಷಣದ ಮತ್ತು ವಿನಾಶಕಾರಿ ಪರಿಣಾಮ ಬೀರುತ್ತದೆ” ಎಂದು ಅದು ಹೇಳಿದೆ.
ಹಾರ್ವರ್ಡ್ ಪ್ರಸ್ತುತ ತನ್ನ ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್ ಕ್ಯಾಂಪಸ್‌ನಲ್ಲಿ ಸುಮಾರು 6,800 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊಂದಿದೆ. ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಪದವಿ ಅಧ್ಯಯನವನ್ನು ಮಾಡುತ್ತಿದ್ದಾರೆ ಮತ್ತು 100ಕ್ಕೂ ಹೆಚ್ಚು ವಿವಿಧ ದೇಶಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಇತ್ತೀಚೆಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿ ವೀಸಾ ಹೊಂದಿರುವವರು ನಡೆಸುತ್ತಿರುವ ಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳ ಕುರಿತ ಮಾಹಿತಿಯನ್ನು ಏಪ್ರಿಲ್ 30ರ ಒಳಗಾಗಿ ಸಲ್ಲಿಸುವಂತೆ ಅಮೆರಿಕ ಗೃಹ ಇಲಾಖೆಯು ಈಚೆಗೆ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು. ಹಾಗೇ, ವಿಶ್ವವಿದ್ಯಾಲಯಕ್ಕೆ 2.7 ಮಿಲಿಯನ್ ಡಾಲರ್‌ಗೂ (ಅಂದಾಜು 23 ಕೋಟಿ ರೂ.) ಅನುದಾನ ನೀಡುವುದನ್ನು ಟ್ರಂಪ್ ಸರ್ಕಾರ ರದ್ದು ಮಾಡಿತ್ತು. ಅಮೆರಿಕ ಸರ್ಕಾರ ನೀಡಿದ್ದ ಕೆಲವು ಆದೇಶಗಳನ್ನು ಹಾರ್ವರ್ಡ್ ವಿಶ್ವವಿದ್ಯಾಲಯ ಅನುಸರಿಸದೆ ಇದ್ದುದರಿಂದ ಟ್ರಂಪ್ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ನಿಷೇಧ ಹೇರಿದ್ದರು. ಹಾಗೇ, ಈ ವಿಶ್ವವಿದ್ಯಾಲಯಕ್ಕೆ ನೀಡಿದ ತೆರಿಗೆ ವಿನಾಯಿತಿಯನ್ನು ವಾಪಾಸ್ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದರು. ಇದು ಟ್ರಂಪ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








