ಪಾಕ್ ಪ್ರಧಾನಿ ಶೆಹಬಾಜ್ ಸಂಪುಟಕ್ಕೆ ಹೀನಾ ರಬ್ಬಾನಿ ಖರ್: ಈ ಹಿಂದೆ ಫ್ಯಾಷನ್ ಕಾರಣಕ್ಕೆ ಸುದ್ದಿಯಾಗಿದ್ದು ಹೆಚ್ಚು
ಹೀನಾ ರಬ್ಬಾನಿ ಖರ್ ಈ ಹಿಂದೆ ಸಚಿವರಾಗಿದ್ದಾಗ ಅವರ ದುಬಾರಿ ಉಡುಪುಗಳು, ಸನ್ ಗ್ಲಾಸ್ ಮತ್ತು 9000 ಡಾಲರ್ ಬೆಲೆಬಾಳುವ ಬರ್ಕಿನ್ ಬ್ಯಾಗ್ ದಿನಪತ್ರಿಕೆಗಳಲ್ಲಿ ಹೆಡ್ಲೈನ್ ಆಗಿ ರಾರಾಜಿಸಿತ್ತು. ಮಾಧ್ಯಮ ಸಂದರ್ಶನಗಳಿಗಾಗಿ ಅವರು ತಮ್ಮ ಉಡುಗೆಗಳನ್ನು ಬದಲಿಸುತ್ತಿರಲಿಲ್ಲ.
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸರ್ಕಾರದಲ್ಲಿ ಭಾರತ ಸ್ನೇಹಿ ನಿಲುವಿನ ಹೀನಾ ರಬ್ಬಾನಿ ಖರ್ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. ಶೆಹ್ಬಾಝ್ ಷರೀಫ್ ಸಚಿವ ಸಂಪುಟದಲ್ಲಿ ಇವರು ವಿದೇಶಾಂಗ ವ್ಯವಹಾರಗಳ ಉಪ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೀನಾ ರಬ್ಬಾನಿ ಅವರು 2011ರಲ್ಲಿ ತಮ್ಮ 34ನೇ ವಯಸ್ಸಿನಲ್ಲಿ ಮೊದಲ ಬಾರಿ ಸಚಿವರಾಗಿದ್ದರು. ಆ ಮೂಲಕ ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಕಿರಿಯ ವಯಸ್ಸಿನ ಮೊದಲ ಮಹಿಳೆ ಎಂಬ ಶ್ರೇಯಕ್ಕೂ ಪಾತ್ರರಾದರು. ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಹೇಳಿಕೆಗಳಿಗಿಂತಲೂ ಹೆಚ್ಚಾಗಿ ಉಡುಗೆ-ತೊಡುಗೆ ಮತ್ತು ಫ್ಯಾಷನ್ನಿಂದ ಸುದ್ದಿಯಾಗಿದ್ದರು. ಅಧಿಕಾರದಲ್ಲಿದ್ದ ಕೇವಲ ಎರಡೇ ವರ್ಷಗಳಲ್ಲಿ ಹೀನಾ ರಬ್ಬಾನಿ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ ಹೀನಾ, ಭಾರತ ಮತ್ತು ಅಫ್ಘಾನಿಸ್ತಾನದೊಂದಿಗೆ ಪಾಕಿಸ್ತಾನದ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಬಿಲಾವಲ್ ಭುಟ್ಟೊ ಜರ್ದಾರಿ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗಿದೆ. ಇದೇ ಇಲಾಖೆಯ ಉಪ ಸಚಿವರಾಗಿ ಹೀನಾ ರಬ್ಬಾನಿ ಅವರಿಗೆ ಹೊಣೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಲವು ದೇಶಗಳೊಂದಿಗೆ ಪಾಕಿಸ್ತಾನದ ಸಂಬಂಧ ಸುಧಾರಿಸಲು ಈ ಯುವಜೋಡಿ ಶ್ರಮಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಷರೀಫ್ ಅವರ ಸಚಿವ ಸಂಪುಟದಲ್ಲಿ ಹೀನಾ ರಬ್ಬಾನಿ ಸೇರಿದಂತೆ ಒಟ್ಟು ಐವರು ಮಹಿಳೆಯರಿಗೆ ಸಚಿವರಾಗಲು ಅವಕಾಶ ಸಿಕ್ಕಿದೆ. ಮರಿಯಮ್ ಔರಂಗಾಜೇಬ್, ಶೆರಿ ರೆಹ್ಮಾನ್, ಶಾಝಿ ಮರಿ ಮತ್ತು ಆಯೇಶಾ ಘೌಸ್ ಪಾಷಾ ಇತರ ಮಹಿಳೆಯರು.
ಜನರಲ್ ಪರ್ವೇಜ್ ಮುಷರಫ್ ಸರ್ಕಾರದಲ್ಲಿ ಹೀನಾ ರಬ್ಬಾನಿ ಸಂಪುಟ ದರ್ಜೆ ಸಚಿವರಾಗಿದ್ದರು. ಆಸಿಫ್ ಆಲಿ ಝರ್ದಾರಿ ಅವರ ಸರ್ಕಾರದಲ್ಲಿಯೂ ಇವರ ಅಧಿಕಾರ ಮುಂದುವರಿದಿತ್ತು. ತಮ್ಮ ಅಧಿಕಾರ ಅವಧಿಯಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿರುವ ಹೀನಾ ರಬ್ಬಾನಿ ತಮ್ಮ 25ನೇ ವಯಸ್ಸಿನಲ್ಲಿ ಸಂಪ್ರದಾಯಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮೀಣ ಕ್ಷೇತ್ರವೊಂದರಿಂದ ಗೆದ್ದು ಸಂಸತ್ ಪ್ರವೇಶಿಸಿದರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶ್ರೀಮಂತ, ಭೂ ಮಾಲೀಕ ಕುಟುಂಬದಿಂದ ಬಂದಿರುವ ಅವರ ಫ್ಯಾಷನ್ ಪ್ರೀತಿ ಭಾರತ ಭೇಟಿಯ ಸಂದರ್ಭದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
ದುಬಾರಿ ಉಡುಪುಗಳು, ಸನ್ ಗ್ಲಾಸ್ ಮತ್ತು 9000 ಡಾಲರ್ ಬೆಲೆಬಾಳುವ ಬರ್ಕಿನ್ ಬ್ಯಾಗ್ ದಿನಪತ್ರಿಕೆಗಳಲ್ಲಿ ಹೆಡ್ಲೈನ್ ಆಗಿ ರಾರಾಜಿಸಿತ್ತು. ಮಾಧ್ಯಮ ಸಂದರ್ಶನಗಳಿಗಾಗಿ ಅವರು ತಮ್ಮ ಉಡುಗೆಗಳನ್ನು ಬದಲಿಸುತ್ತಿರಲಿಲ್ಲ. ಈ ಎಲ್ಲ ಸಂಗತಿಗಳು ಆಗ ದೊಡ್ಡ ಸುದ್ದಿಯಾಗಿತ್ತು. ಎರಡು ವರ್ಷಗಳ ಕಾಲ ವಿದೇಶಾಂಗ ಸಚಿವರಾಗಿದ್ದ ಹೀನಾ 2013ರಲ್ಲಿ ರಾಜಕಾರಣದಿಂದ ದೂರ ಸರಿದಿದ್ದರು. ಆದರೆ ಸಾರ್ವಜನಿಕವಾಗಿ ಮಾತನಾಡುವುದು ನಿಲ್ಲಿಸಿರಲಿಲ್ಲ. 2018ರಲ್ಲಿ ಪಿಪಿಪಿ ಪಕ್ಷದ ಟಿಕೆಟ್ ಮೇಲೆ ಮಹಿಳಾ ಮೀಸಲು ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಮತ್ತೆ ರಾಜಕಾರಣ ಪ್ರವೇಶಿಸಿದ್ದರು.
ಕಾಶ್ಮೀರದ ಬಗ್ಗೆ 2016ರಲ್ಲಿ ಅವರು ನೀಡಿದ್ದ ಹೇಳಿಕೆ ಸಹ ಜಗತ್ತಿನ ಗಮನ ಸೆಳೆದಿತ್ತು. ‘ಭಾರತದ ವಶದಲ್ಲಿರುವ ಕಾಶ್ಮೀರವನ್ನು ಯುದ್ಧದಿಂದ ಗೆಲ್ಲಲು ಆಗುವುದಿಲ್ಲ. ಹೀಗಾಗಿ ಮಾತುಕತೆಯೊಂದೇ ನಮಗಿರುವ ಏಕೈಕ ಮಾರ್ಗ. ಸಾಮಾನ್ಯ ರೀತಿಯ ಸಂಬಂಧ ಮತ್ತು ಒಂದು ಮಟ್ಟಿಗೆ ಪರಸ್ಪರ ನಂಬಿಕೆ ಇದ್ದರೆ ಮಾತ್ರ ಮಾತುಕತೆ ನಡೆಸಲು ಸಾಧ್ಯ ಎಂದು ಪಾಕಿಸ್ತಾನದ ಸುದ್ದಿ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಭಾರತದೊಂದಿಗೆ ಉತ್ತಮ ರೀತಿಯ ಸೌಹಾರ್ದ ಸಂಬಂಧ ಇರಿಸಿಕೊಳ್ಳಬೇಕು ಎಂದು ಹಲವು ಬಾರಿ ಪ್ರತಿಪಾದಿಸಿದ್ದರು.
Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ
ಹೀನಾ ಫ್ಯಾಷನ್ ಲುಕ್ನ ಝಲಕ್
ಯಾವುದೇ ಸಮಾರಂಭಕ್ಕೆ ಹೀನಾ ರಬ್ಬಾನಿ ಖರ್ ಬಂದರೂ ಅವರ ಉಡುಗೆಗಳ ಬಗ್ಗೆ ನೆರೆದಿದ್ದವರು ಒಂದಿಷ್ಟು ಹೊತ್ತು ಮಾತನಾಡುವುದು ಖಚಿತ ಎನ್ನುವಂತೆ ಇರುತ್ತಿತ್ತು. ಸಾಮಾನ್ಯವಾಗಿ ತುಂಬು ತೋಳಿನ ಕುರ್ತಾ, ಚೂಡಿದಾರ್, ಷಿಫಾನ್ ದುಪ್ಪಟಾಗಳನ್ನು ಹೀನಾ ಹೆಚ್ಚಾಗಿ ತೊಡುತ್ತಾರೆ.
Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ
ಇವರು ತೊಡುವ ಕುರ್ತಾಗಳಿಗೆ ಕಾಲರ್ ಇರುತ್ತದೆ ಎನ್ನುವುದು ಸಹ ಸುದ್ದಿಯಾಗಿತ್ತು.
Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ
ಕೆಲ ಮುಸ್ಲಿಂ ಮಹಿಳೆಯರು ಸಂಪ್ರದಾಯದ ಕಾರಣಗಳಿಗೆ ಇಷ್ಟಪಡುವ ಕಪ್ಪು ಕುರ್ತಾಗಳನ್ನು ಹೀನಾ ಸಹ ತೊಡುತ್ತಾರೆ. ಅದು ಕಡುಕಪ್ಪಾಗಿರದೆ, ಅದರ ಮೇಲೆಯೂ ಸುಂದರ ಹೂಗಳ ಚಿತ್ತಾರ ಇರುತ್ತವೆ ಎನ್ನುವುದು ಗಮನಾರ್ಹ ಸಂಗತಿ.
ಯಾವುದೇ ವಿನ್ಯಾಸ ಅಥವಾ ಕಸೂತಿ ಇರದ ಪ್ಲೇನ್ ಬಟ್ಟೆಯಲ್ಲಿ ಹೆಚ್ಚಾಗಿ ಹೀನಾ ಕಾಣಿಸಿಕೊಂಡಿದ್ದಾರೆ. ಆದರೆ ಅಪರೂಪಕ್ಕೊಮ್ಮೆ ಚಿಕನ್ಕರಿ ವಿನ್ಯಾಸದ ಕುರ್ತಾಗಳನ್ನು ಧರಿಸುವುದೂ ರೂಢಿ.
Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ
ಒಡವೆಗಳು
ತುಂಬಾ ಜಾಣತದಿಂದ ಅಚ್ಚುಕಟ್ಟಾಗಿ ಹೀನಾ ತಮ್ಮ ಒಡವೆಗಳನ್ನು ಆರಿಸಿಕೊಳ್ಳುತ್ತಾರೆ. ತಮ್ಮ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗುವ ಒಡವೆಗಳನ್ನೇ ಹೆಚ್ಚಾಗಿ ತೊಡುತ್ತಾರೆ. ಮಣಿ ನೆಕ್ಲೆಸ್, ವಾಚ್ ಮತ್ತು ಬಳೆಗಳು ಅವರ ಫ್ಯಾಷನ್ನ ಭಾಗವೇ ಆಗಿವೆ. ಅಪರೂಪಕ್ಕೆ ಒಮ್ಮೊಮ್ಮೆ ವಜ್ರದ ನೆಕ್ಲೆಸ್ ತೊಡುವುದೂ ಉಂಟು.
Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ
ಮೇಕಪ್
ಗೋಧಿ ಮೈಬಣ್ಣ, ಸುಂದರ ಮುಖದ ಹೀನಾ ಢಾಳಾಗಿ ಮೇಕಪ್ ಮಾಡಿಕೊಳ್ಳುವುದಿಲ್ಲ. ಕಣ್ಣಿಗೆ ಐ ಲೈನರ್, ತುಟಿಗೆ ತೆಳು ಬಣ್ಣದ ಲಿಪ್ಸ್ಟಿಕ್ ಹಚ್ಚಿಕೊಳ್ಳುತ್ತಾರೆ. ಜತೆಗೆ ಅಪರೂಪಕ್ಕೆ ಕೆನ್ನೆಗೆ ನಸುಗೆಂಪು ಲೇಪಿಸುವುದು ಉಂಟು.
ಇದನ್ನೂ ಓದಿ: ಪಾಕಿಸ್ತಾನ: ಪ್ರಮಾಣ ವಚನ ಸ್ವೀಕರಿಸಿದ ಶೆಹಬಾಜ್ ಷರೀಫ್ ನೇತೃತ್ವದ ನೂತನ ಸಚಿವ ಸಂಪುಟ
ಇದನ್ನೂ ಓದಿ: ಪಾಕಿಸ್ತಾನದ ಹೊಸ ಪ್ರಧಾನಿಗೆ ಬರೀ ಕಾಶ್ಮೀರದ್ದೇ ಜಪ; ಪ್ರಧಾನಿ ಮೋದಿಗೆ ಪತ್ರ ಬರೆದ ಶೆಹಬಾಜ್ ಶರೀಫ್
Published On - 12:34 pm, Wed, 20 April 22