Pakistan: ಪಾಳುಬಿದ್ದ ಮನೆಯಲ್ಲಿ ಸಿಕ್ಕ 11 ವರ್ಷದ ಹಿಂದು ಬಾಲಕನ ಶವ; ಲೈಂಗಿಕ ದೌರ್ಜನ್ಯ ಎಸಗಿ ಕೊಲೆ
ಬಾಲಕ ಮನೆಯಲ್ಲಿ ಶುಕ್ರವಾರ ರಾತ್ರಿ ಯಾವುದೋ ಸಮಾರಂಭ ನಡೆಯುತ್ತಿದ್ದ ಕಾರಣ ಮನೆಮಂದಿಯೆಲ್ಲ ಅದರಲ್ಲೇ ತೊಡಗಿಕೊಂಡಿದ್ದರು. ಈ ಹುಡುಗ ನಾಪತ್ತೆಯಾದ ಬಗ್ಗೆ ಎಷ್ಟೋ ಹೊತ್ತಿನವರೆಗೆ ಗೊತ್ತೇ ಆಗಲಿಲ್ಲ
ಪಾಕಿಸ್ತಾನದಲ್ಲಿ ಹಿಂದು ಸಮುದಾಯದವರ ಮೇಲಿನ ದೌರ್ಜನ್ಯ, ಅವರ ಹತ್ಯೆ ಹೊಸದಲ್ಲ. ಇದೀಗ 11ವರ್ಷದ ಹಿಂದು ಬಾಲಕನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗೂ ಮೊದಲು ಆತನಿಗೆ ಲೈಂಗಿಕ ದೌರ್ಜನ್ಯ ನೀಡಿದ್ದು ಬೆಳಕಿಗೆ ಬಂದಿದೆ. ಈ ದುರ್ಘಟನೆ ನಡೆದದ್ದು ಸಿಂಧ್ ಪ್ರಾಂತ್ಯದಲ್ಲಿ. ಶುಕ್ರವಾರ ಸಂಜೆಯಿಂದಲೇ ಬಾಲಕ ನಾಪತ್ತೆಯಾಗಿದ್ದ. ಆದರೆ ಶನಿವಾರ ಆತನ ಶವ ಸಿಂಧ್ನ ಖೈರ್ಪುರ ಮಿರ್ ಎಂಬ ಪ್ರದೇಶದಲ್ಲಿರುವ ಬಾಬರ್ಲೋಯ್ ಪಟ್ಟಣದ ಒಂದು ಪಾಳುಮನೆಯಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಬಾಲಕ ಮನೆಯಲ್ಲಿ ಶುಕ್ರವಾರ ರಾತ್ರಿ ಯಾವುದೋ ಸಮಾರಂಭ ನಡೆಯುತ್ತಿದ್ದ ಕಾರಣ ಮನೆಮಂದಿಯೆಲ್ಲ ಅದರಲ್ಲೇ ತೊಡಗಿಕೊಂಡಿದ್ದರು. ಈ ಹುಡುಗ ನಾಪತ್ತೆಯಾದ ಬಗ್ಗೆ ಎಷ್ಟೋ ಹೊತ್ತಿನವರೆಗೆ ಗೊತ್ತೇ ಆಗಲಿಲ್ಲಎಂದು ಬಾಲಕನ ಸಂಬಂಧಿ ರವಿಕುಮಾರ್ ಎಂಬುವರು ಹೇಳಿದ್ದಾರೆ. ಬಾಲಕ ಹುಟ್ಟಿದ್ದು 2011ರಲ್ಲಿ. ಐದನೇ ತರಗತಿ ಓದುತ್ತಿದ್ದ ಎಂದೂ ಮಾಹಿತಿ ನೀಡಿದ್ದಾರೆ. ಬಾಬರೋಲಿ ಠಾಣೆಯ ಪೊಲೀಸ್ ಅಧಿಕಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಾಲಕನನ್ನು ಕತ್ತುಕೊಯ್ದು ಹತ್ಯೆ ಮಾಡಲಾಗಿದೆ. ಅದಕ್ಕೂ ಮೊದಲು ಆತನಿಗೆ ಲೈಂಗಿಕ ದೌರ್ಜನ್ಯ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿದ್ದೇವೆ. ಅದರಲ್ಲೊಬ್ಬಾತ ತಾವು ಅಪರಾಧ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.
ಸ್ಥಳೀಯ ಮಕ್ಕಳ ರಕ್ಷಣಾ ಪ್ರಾಧಿಕಾರದ ಜುಬೇರ್ ಮಹರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಕಳೆದ ಕೆಲವು ವಾರಗಳಲ್ಲಿ ಸಿಂಧ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಎರಡನೇ ದುರ್ಘಟನೆ ಇದಾಗಿದೆ. ಸುಕ್ಕೂರ್ ಜಿಲ್ಲೆಯ ಸಾಲೇಹ್ ಪಾಟ್ನಲ್ಲಿ ಹಿಂದು ಬಾಲಕಿಯೊಬ್ಬಳಿಗೆ ಕೆಲವೇ ದಿನಗಳ ಹಿಂದೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ 2017ರಲ್ಲಿ ನಡೆದ ಜನಗಣತಿ ಪ್ರಕಾರ ಅಲ್ಲಿ ಹಿಂದುಗಳ ಸಂಖ್ಯೆ ತುಂಬ ಕಡಿಮೆಯಿದ್ದು, ಮೊದಲ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಎರಡನೇ ಅಲ್ಪಸಂಖ್ಯಾತ ಸಮುದಾಯ ಕ್ರಿಶ್ಚಿಯನ್ನರಾಗಿದ್ದಾರೆ. ಅದನ್ನು ಬಿಟ್ಟರೆ ಸಿಖ್, ಅಹ್ಮದೀಗಳು, ಪಾರ್ಸಿಗಳು ಕೂಡ ಅಲ್ಪಸಂಖ್ಯಾತರ ಸಾಲಿಗೆ ಸೇರುತ್ತಾರೆ. ಇನ್ನು ಇರುವುದರಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಹಿಂದುಗಳು ಸಿಂಧ್ ಪ್ರಾಂತ್ಯದಲ್ಲಿಯೇ ಇದ್ದಾರೆ. ಇತ್ತೀಚೆಗಂತೂ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಪದೇಪದೇ ಬೆಳಕಿಗೆ ಬರುತ್ತಿವೆ.
ಇದನ್ನೂ ಓದಿ: ಕೊಪ್ಪಳ: ಅಪಾಯಕಾರಿ ಡ್ರೈವಿಂಗ್ ಮಾಡಿ ಚಾಲಕನ ದುರ್ವರ್ತನೆ; 10ಕ್ಕೂ ಹೆಚ್ಚು ಕಿ.ಮೀ ಟೈರ್ ಇಲ್ಲದೆ ಲಾರಿ ಚಾಲನೆ
Published On - 9:53 am, Sun, 21 November 21