ಪಾಕಿಸ್ತಾನದ ಮಧ್ಯಸ್ತಿಕೆ ಇಲ್ಲದೇ ಇದ್ದಿದ್ದರೆ ಇಸ್ರೇಲ್​ಗೆ ತಕ್ಕ ಶಾಸ್ತಿಯಾಗುತ್ತಿತ್ತು: ಟರ್ಕಿ ಅಧ್ಯಕ್ಷ ಎರ್ಡೋಗನ್ ಗುಡುಗು

Turkey vs Israel war of words: ಇರಾನ್ ಮತ್ತು ಅಮೆರಿಕದ ನಡುವೆ ಸಂಧಾನ ಮಾತುಕತೆಗಳು ಮುರಿದುಬೀಳುವುದು ಇಸ್ರೇಲ್​ನ ಗುರಿಯಾಗಿದೆ. ಪಾಕಿಸ್ತಾನದಿಂದ ಈ ಮಾತುಕತೆಗೆ ಮಧ್ಯಸ್ತಿಕೆ ಇಲ್ಲದೇ ಇದ್ದಿದ್ದರೆ ಇಸ್ರೇಲ್​ಗೆ ಇಷ್ಟರಲ್ಲೇ ಶಾಸ್ತಿಯಾಗಿರುತ್ತಿತ್ತು ಎಂದು ಟರ್ಕಿ ಅಧ್ಯಕ್ಷ ಎರ್ಡೋಗನ್ ಗುಡುಗಿದ್ದಾರೆ. ಟರ್ಕಿ ಹಾಗೂ ಅದರ ಅಧ್ಯಕ್ಷರ ವಿರುದ್ಧ ಇಸ್ರೇಲ್ ಕೂಡು ಕಿಡಿಕಾರಿದೆ.

ಪಾಕಿಸ್ತಾನದ ಮಧ್ಯಸ್ತಿಕೆ ಇಲ್ಲದೇ ಇದ್ದಿದ್ದರೆ ಇಸ್ರೇಲ್​ಗೆ ತಕ್ಕ ಶಾಸ್ತಿಯಾಗುತ್ತಿತ್ತು: ಟರ್ಕಿ ಅಧ್ಯಕ್ಷ ಎರ್ಡೋಗನ್ ಗುಡುಗು
ಟರ್ಕಿ ಅಧ್ಯಕ್ಷ ಎರ್ಡೋಗನ್

Updated on: Apr 12, 2026 | 6:35 PM

ನವದೆಹಲಿ, ಏಪ್ರಿಲ್ 12: ಟರ್ಕಿ ಅಧ್ಯಕ್ಷ ರೆಸೆಪ್ ತಯಿಪ್ ಎರ್ಡೋಗನ್ (Turkey president Erdogen) ಅವರು ಇಸ್ರೇಲ್ ಮೇಲೆ ದಾಳಿ ಎಸಗಿ ಹೊಸಕಿ ಹಾಕುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಪಾಕಿಸ್ತಾನವೇನಾದರೂ ಮಧ್ಯಸ್ತಿಕೆ ವಹಿಸಿಕೊಂಡಿಲ್ಲದೇ ಇದ್ದಿದ್ದರೆ ಇಸ್ರೇಲ್​ಗೆ ತಕ್ಕ ಶಾಸ್ತಿ ಆಗಿರುತ್ತಿತ್ತು ಎಂದು ಎರ್ಡೋಗನ್ ಗುಡುಗಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಧಾನ ಮಾತುಕತೆ ಮುರಿದುಬೀಳುವ ಮುನ್ನ ಟರ್ಕಿ ಅಧ್ಯಕ್ಷರು ನೀಡಿದ ಹೇಳಿಕೆ ಇದು.

‘ನಾವು ಲಿಬಿಯಾ ಮತ್ತು ಕರಬಾಖ್ ಅನ್ನು ಪ್ರವೇಶಿಸಿದಂತೆ ಇಸ್ರೇಲ್ ಅನ್ನೂ ಪ್ರವೇಶಿಸಬಲ್ಲೆವು’ ಎಂದೂ ಎರ್ಡೋಗನ್ ಬೆದರಿಕೆ ಹಾಕಿದ್ದಾರೆ. ಹಾಗೆಯೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರನ್ನು ಈಗಿನ ಕಾಲದ ಹಿಟ್ಲರ್ ಎಂದು ಟರ್ಕಿ ವಿದೇಶಾಂಗ ಸಚಿವಾಲಯ ಆರೋಪಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಸಂಧಾನ ಮಾತುಕತೆಗಳು ಮುರಿದುಬೀಳುವಂತೆ ಮಾಡುವುದು ಈತನ ಗುರಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್-ಅಮೆರಿಕ ಸಂಧಾನಕ್ಕೆ ‘ಪರಮಾಣು’ ತಡೆ: ಇಸ್ಲಾಮಾಬಾದ್ ಮ್ಯಾರಥಾನ್ ಮಾತುಕತೆ ಹಳಿ ತಪ್ಪಿದ್ದೇಕೆ?

‘ನಮ್ಮ ಕಾಲದ ಹಿಟ್ಲರ್ ಎನಿಸಿರುವ ನೆತಾನ್ಯಹು ಯಾರು, ಏನು ಎಂಬುದು ಜಗತ್ತಿಗೇ ಗೊತ್ತಿದೆ. ಯುದ್ಧ ಅಪರಾಧಗಳಿಗಾಗಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು ಆತನಿಗೆ ಅರೆಸ್ಟ್ ವಾರಂಟ್ ನೀಡಿದೆ. ನೆತಾನ್ಯಹು ನಾಯಕತ್ವದಲ್ಲಿ ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧದ ಆರೋಪದ ವಿಚಾರಣೆ ನಡೆಯುತ್ತಿದೆ’ ಎಂದು ಟರ್ಕಿ ವಿದೇಶಾಂಗ ಸಚಿವಾಲಯವು ತಿಳಿಸಿದೆ.

2025ರ ಅಕ್ಟೋಬರ್​ನಲ್ಲಿ ಇಸ್ರೇಲ್ ವಿರುದ್ಧ ನಡೆದ ಸುಮುದ್ ಗಾಜಾ ಫ್ಲೋಟಿಲಾ ನೌಕಾ ಕಾರ್ಯಾಚರಣೆಯನ್ನು ಇಸ್ರೇಲೀ ಪಡೆಗಳು ತಡೆದಿದ್ದವು. ಆ ಸಂಬಂಧ ಟರ್ಕಿ ದೇಶವು ಬೆಂಜಮಿನ್ ನೆತಾನ್ಯಹು ಹಾಗೂ 35 ಇತರ ಇಸ್ರೇಲೀ ಅಧಿಕಾರಿಗಳ ವಿರುದ್ಧ 4,596 ವರ್ಷಗಳ ಕಾರಾಗೃಹ ಶಿಕ್ಷೆಗೆ ಆಗ್ರಹಿಸುತ್ತಿದೆ.

ಇದನ್ನೂ ಓದಿ: ಇರಾನ್ ಬಯಸಿದರೂ ಹಾರ್ಮುಜ್ ಜಲಸಂಧಿ ತೆರೆಯಲು ಸಾಧ್ಯವಿಲ್ಲ; ಇಲ್ಲಿದೆ ಕಾರಣ

ಟರ್ಕಿ ವಿರುದ್ಧ ಇಸ್ರೇಲ್ ತಿರುಗೇಟು

ಇದೇ ವೇಳೆ ಟರ್ಕಿ ವಿರುದ್ಧ ಇಸ್ರೇಲ್ ಕೂಡ ಆರೋಪಗಳನ್ನು ಮಾಡುತ್ತಿದೆ. ಇರಾನ್​ನ ಭಯೋತ್ಪಾದಕ ಆಡಳಿತ ಹಾಗೂ ಅದರ ಪ್ರಾಕ್ಸಿಗಳ ವಿರುದ್ಧ ಇಸ್ರೇಲ್ ಹೋರಾಟ ಮುಂದುವರಿಯುತ್ತದೆ. ಟರ್ಕಿಯಲ್ಲಿರುವ ಕುರ್ಡಿಶ್ ನಾಗರಿಕರನ್ನು ಎರ್ಡೋಗನ್ ಹತ್ಯೆ ಮಾಡಿಸುತ್ತಿದ್ದಾರೆ. ಟರ್ಕಿ ದೇಶವು ಯಹೂದಿ ವಿರೋಧಿ ಧೋರಣೆ ಹೊಂದಿದೆ. ಇಸ್ರೇಲಿಗರ ಮೇಲೆ ಸುಳ್ಳು ವಿಚಾರಣೆಗಳನ್ನು ನಡೆಸುತ್ತದೆ ಎಂದು ಇಸ್ರೇಲ್ ಪಿಎಂ ಬೆಂಜಮಿನ್ ನೆತಾನ್ಯಹು ಕೆಂಡಕಾರಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us