ಭಾರತ-ಪಾಕ್ ಸಂಬಂಧಕ್ಕೆ ಕಾಶ್ಮೀರವೊಂದೇ ತಡೆ, ಶಾಂತಿ ಸ್ಥಾಪನೆಗೆ ಭಾರತವೇ ಮೊದಲ ಹೆಜ್ಜೆ ಇಡಬೇಕು: ಇಮ್ರಾನ್ ಖಾನ್
Imran Khan: ಸದ್ಯದ ಪರಿಸ್ಥಿತಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸಂಬಂಧವನ್ನು ಉತ್ತಮಪಡಿಸಲು ಇರುವ ಒಂದೇ ಒಂದು ತಡೆ ಎಂದರೆ ಅದು ಕಾಶ್ಮೀರ. ಇದನ್ನು ಸರಿಪಡಿಸುವ ಬಗ್ಗೆ ನಾವು ನಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತೇವೆ.
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ಒಂದೇ ಸಮಸ್ಯೆಯಾಗಿದೆ. ಉಭಯ ರಾಷ್ಟ್ರಗಳ ಸಂಬಂಧ ಬಲಪಡಿಸಲು ಕಾಶ್ಮೀರ ಮಾತ್ರ ತಡೆಯಾಗಿದೆ. ಕಾಶ್ಮೀರ ಸಮಸ್ಯೆಗೆ ಪರಿಹಾರದ ಹೆಜ್ಜೆ ಮುಂದಿಡುವ ಮೂಲಕ ಭಾರತವೇ ಎರಡೂ ದೇಶಗಳ ಸಂಬಂಧ ಉತ್ತಮವಾಗಲು ಸಹಕರಿಸಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಂದು (ಮಾರ್ಚ್ 17) ತಿಳಿಸಿದ್ದಾರೆ.
ಪಾಕಿಸ್ತಾನದ ರಕ್ಷಣಾ ವಿಭಾಗ ಆಯೋಜಿಸಿದ್ದ ಎರಡು ದಿನಗಳ ಶೃಂಗಸಭೆಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಮ್ರಾನ್ ಖಾನ್ ಹೀಗೆ ಹೇಳಿದ್ದಾರೆ. ಫೆಬ್ರವರಿ 24ರಂದು ಭಾರತ ಮತ್ತು ಪಾಕಿಸ್ತಾನಗಳು 2003ರ ಕದನವಿರಾಮ ಒಪ್ಪಂದಕ್ಕೆ ಬದ್ಧರಾಗಿರುವುದಾಗಿ ಮತ್ತೆ ಘೋಷಿಸಿದ್ದವು. ಆ ಬಳಿಕ, ಇಮ್ರಾನ್ ಖಾನ್ ಉಭಯ ದೇಶಗಳ ಸಂಬಂಧದ ಬಗ್ಗೆ ನೀಡಿರುವ ಮೊದಲ ಸಾರ್ವಜನಿಕ ಹೇಳಿಕೆ ಇದಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸಂಬಂಧವನ್ನು ಉತ್ತಮಪಡಿಸಲು ಇರುವ ಒಂದೇ ಒಂದು ತಡೆ ಎಂದರೆ ಅದು ಕಾಶ್ಮೀರ. ಇದನ್ನು ಸರಿಪಡಿಸುವ ಬಗ್ಗೆ ನಾವು ನಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತೇವೆ. ಅದಕ್ಕೂ ಮೊದಲು ಈ ನಿಟ್ಟಿನಲ್ಲಿ ಭಾರತವೇ ಮೊದಲ ಹೆಜ್ಜೆ ಮುಂದಿಡಬೇಕು. ಆಗಸ್ಟ್ 5, 2019ರ ಬಳಿಕ ಭಾರತ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆ. ಹಾಗಾಗಿ, ಭಾರತವೇ ಕಾಶ್ಮೀರದ ವಿಚಾರವಾಗಿ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.
2018ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತದೊಂದಿಗಿನ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿದೆ. ಆದರೆ, ಆಗಸ್ಟ್ 5ರ ಬಳಿಕ ಎರಡೂ ದೇಶಗಳ ನಡುವೆ ಸಂಬಂಧ ಬಿರುಕು ಬಿಟ್ಟಿತು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಭಾರತವು ಕಾಶ್ಮೀರಕ್ಕೆ ಸೂಕ್ತ ಸ್ಥಾನಮಾನವನ್ನು ನೀಡಬೇಕು. ಇದರಿಂದ ಭಾರತ ಹಾಗೂ ಪಾಕ್ ಎರಡೂ ದೇಶಗಳಿಗೂ ಒಳಿತಾಗಲಿದೆ ಎಂದು ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಮಾತುಕತೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಿದರೆ, ಎರಡೂ ದೇಶಗಳಿಗೆ ಲಾಭವಾಗಲಿದೆ. ಕಾಶ್ಮೀರದಲ್ಲಿ ಬಡತನದ ಇದೆ. ಅಲ್ಲಿ ವ್ಯಾಪಾರ, ವಹಿವಾಟು ಹಾಗೂ ಪ್ರಾದೇಶಿಕ ವ್ಯವಹಾರಗಳಿಗೆ ಅವಕಾಶ ಸಿಕ್ಕರೆ ಬಡತನ ನಿರ್ಮೂಲನೆಗೂ ಸಹಾಯವಾಗಲಿದೆ. ಕೇಂದ್ರ ಏಷ್ಯಾಕ್ಕೆ ಸಂಪರ್ಕ ಹೊಂದುವ ಮೂಲಕ ಭಾರತವೂ ಇದರ ಲಾಭ ಪಡೆಯಲಿದೆ ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಕಟುವಾಗಿ ಮಾತನಾಡುತ್ತಿದ್ದ ಇಮ್ರಾನ್ ಮಾತಿನ ಧಾಟಿ ಬದಲಾಗಿರುವುದು ಕಂಡುಬಂದಿದೆ.
ಅಷ್ಟೇ ಅಲ್ಲದೆ, ಪಾಕಿಸ್ತಾನದ ರಾಷ್ಟ್ರೀಯ ಭದ್ರತೆ ಕೇವಲ ಸೇನೆಯ ಕುರಿತಾಗಿ ಇರುವುದಲ್ಲ. ಬದಲಾಗಿ, ಹವಾಮಾನ ಬದಲಾವಣೆ, ಆಹಾರ ಭದ್ರತೆ ಮತ್ತು ಆರ್ಥಿಕ ವಿಚಾರಗಳನ್ನೂ ಒಳಗೊಂಡಿದೆ ಎಂದು ಖಾನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ವ್ಯಾಪಾರ ವಹಿವಾಟಿನ ವಿಚಾರದಲ್ಲಿ ನಾವು ಚೀನಾದೊಂದಿಗೆ ಸಂಪರ್ಕ ಹೊಂದಿದ್ದೇವೆ. ಮತ್ತು ಭಾರತದ ಜೊತೆಗೂ ಸಂಬಂಧ ಹೊಂದಿದರೆ, ವಿಶ್ವದ ಎರಡು ಅತಿದೊಡ್ಡ ರಾಷ್ಟ್ರಗಳೊಂದಿಗೆ ಸಂಬಂಧ ಹೊಂದಿದಂತಾಗಲಿದೆ ಎಂದು ಭಾರತ-ಪಾಕ್ ವ್ಯಾವಹಾರಿಕ ಸಂಬಂಧದ ಬಗ್ಗೆ ಇಮ್ರಾನ್ ಖಾನ್ ಮಾತನಾಡಿದ್ದಾರೆ.
ಇದನ್ನೂ ಓದಿ: ದೇಶ ಮುನ್ನಡೆಸಲು ಇಮ್ರಾನ್ ಖಾನ್ ಸರ್ಕಾರ ಅಸಮರ್ಥ: ಪಾಕಿಸ್ತಾನ ಸುಪ್ರೀಂಕೋರ್ಟ್
Published On - 6:41 pm, Wed, 17 March 21