
ನ್ಯೂಯಾರ್ಕ್, ಸೆಪ್ಟೆಂಬರ್ 23: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು (UNGA) ಉದ್ದೇಶಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಮೇಲೆ ಮತ್ತೊಮ್ಮೆ ಗೂಬೆ ಕೂರಿಸಿದ್ದಾರೆ. ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ಯುದ್ಧಕ್ಕೆ ಭಾರತ ಮತ್ತು ಚೀನಾ ಭಾರೀ ಹಣಕಾಸು ಹೂಡಿಕೆ ಮಾಡುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಅಮೆರಿಕ ಮತ್ತು ಭಾರತದ ನಡುವಿನ ಹಳಸಿದ ಸಂಬಂಧ ಮತ್ತೆ ಹಳೇ ಟ್ರ್ಯಾಕ್ಗೆ ಹಿಂತಿರುಗುವ ಲಕ್ಷಣಗಳು ಕಂಡುಬಂದಿತ್ತು. ಅದರ ನಡುವೆ ಟ್ರಂಪ್ ಮತ್ತೊಮ್ಮೆ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು (UNGA) ಉದ್ದೇಶಿಸಿ ಮಾತನಾಡಿದರು. ಅವರು ತಮ್ಮ ಅಧಿಕಾರಾವಧಿಯ ಯಶಸ್ಸನ್ನು ಎತ್ತಿ ತೋರಿಸುವ ಮೂಲಕ ಭಾಷಣ ಪ್ರಾರಂಭಿಸಿದರು. ಹಾಗೇ ವಿಶ್ವಸಂಸ್ಥೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದರು. ಅವರು ಅಕ್ರಮ ವಲಸಿಗರಿಗೆ ಕಠಿಣ ಎಚ್ಚರಿಕೆಯನ್ನು ಸಹ ನೀಡಿದರು. ಬಳಿಕ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವನ್ನು ಪ್ರಸ್ತಾಪಿಸಿದ ಟ್ರಂಪ್, “NATO ರಾಷ್ಟ್ರಗಳು ಇನ್ನೂ ರಷ್ಯಾದ ಇಂಧನವನ್ನು ಖರೀದಿಸುತ್ತಿವೆ ಎಂದು ಎರಡು ವಾರಗಳ ಹಿಂದಷ್ಟೇ ತಿಳಿದುಕೊಂಡೆ, ಅದನ್ನು ಕ್ಷಮಿಸಲಾಗದು” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಭಾರತೀಯ ಉದ್ಯೋಗಿಗಳಿಗೆ ಟ್ರಂಪ್ ಶಾಕ್; 1 ಲಕ್ಷ ಡಾಲರ್ ಪಾವತಿಸದಿದ್ದರೆ ನಾಳೆಯಿಂದ ಅಮೆರಿಕಕ್ಕೆ ಪ್ರವೇಶವಿಲ್ಲ
“ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ಮೂಲಕ ಚೀನಾ ಮತ್ತು ಭಾರತ ಉಕ್ರೇನ್ ಮೇಲಿನ ಯುದ್ಧಕ್ಕೆ ಪ್ರಾಥಮಿಕ ಹಣಕಾಸು ಒದಗಿಸುತ್ತಿವೆ. ಆದರೆ ಕ್ಷಮಿಸಲಾಗದ ವಿಷಯವೆಂದರೆ NATO ರಾಷ್ಟ್ರಗಳು ಸಹ ರಷ್ಯಾದ ಇಂಧನ ಮತ್ತು ರಷ್ಯಾದ ಉತ್ಪನ್ನಗಳನ್ನು ಇನ್ನೂ ಖರೀದಿಸುತ್ತಿವೆ. ನನಗೆ ಸುಮಾರು ಎರಡು ವಾರಗಳ ಹಿಂದೆ ಈ ವಿಷಯ ತಿಳಿಯಿತು. ಇದು ನನಗೆ ಬೇಸರ ತಂದಿತು” ಎಂದು ಟ್ರಂಪ್ ಆರೋಪಿಸಿದ್ದಾರೆ.
President Trump at UNGA: “America is blessed with the strongest ECONOMY, the strongest BORDERS, the strongest MILITARY, the strongest FRIENDSHIPS, and the strongest SPIRIT of any nation on the face of the earth. This is indeed the Golden Age of America.” pic.twitter.com/wqOtjvjxdS
— The White House (@WhiteHouse) September 23, 2025
ಒಂದುವೇಳೆ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಮಾತುಕತೆ ನಡೆಸಲು ಇಚ್ಛಿಸದಿದ್ದರೆ ರಷ್ಯಾದ ಮೇಲೆ ಭಾರೀ ಪ್ರಮಾಣದ ಹೊಸ ಸುಂಕಗಳನ್ನು ವಿಧಿಸಲು ಅಮೆರಿಕ ಸಿದ್ಧವಾಗಿದೆ ಎಂದು ಟ್ರಂಪ್ ಹೇಳುವ ಮೂಲಕ ರಷ್ಯಾಗೆ ಸುಂಕದ ಬೆದರಿಕೆಯೊಡ್ಡಿದ್ದಾರೆ.
ಇದನ್ನೂ ಓದಿ: ಟ್ರಂಪ್ಗಾಗಿ ಫ್ರೆಂಚ್ ಅಧ್ಯಕ್ಷರನ್ನೇ ನಡುರಸ್ತೆಯಲ್ಲಿ ನಿಲ್ಲಿಸಿದ ನ್ಯೂಯಾರ್ಕ್ ಪೊಲೀಸರು
ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಲು ಸಹಾಯ ಮಾಡಬಹುದೆಂದು ಟ್ರಂಪ್ ಒತ್ತಾಯಿಸಿದರೂ, ಇತ್ತೀಚಿನ ವಾರಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದೆ. ಹಾಗೇ NATO ಸದಸ್ಯರಾದ ಪೋಲೆಂಡ್, ಎಸ್ಟೋನಿಯಾ ಮತ್ತು ರೊಮೇನಿಯಾದಲ್ಲಿ ಡ್ರೋನ್ ಅಥವಾ ವಾಯು ಆಕ್ರಮಣಗಳನ್ನು ನಡೆಸಿದೆ.
ಹಾಗೇ, ಮತ್ತೊಮ್ಮೆ ತಾನೇ ಭಾರತ–ಪಾಕಿಸ್ತಾನದ ನಡುವಿನ ಯುದ್ಧ ನಿಲ್ಲಿಸಿದ್ದು ಎಂದು ಟ್ರಂಪ್ ಹೇಳಿದ್ದಾರೆ. ಈಗಾಗಲೇ ಲೆಕ್ಕವಿಲ್ಲದಷ್ಟು ಬಾರಿ ಅವರು ಈ ಹೇಳಿಕೆ ನೀಡಿದ್ದಾರೆ. ಅಷ್ಟೇ ಬಾರಿ ಭಾರತವೂ ಆ ಹೇಳಿಕೆಯನ್ನು ನಿರಾಕರಿಸಿದೆ. ಆದರೂ ಮತ್ತೆ ಅದೇ ರಾಗ ಹಾಡಿರುವ ಟ್ರಂಪ್ ತಾನು ಇದೇ ರೀತಿ 7 ಯುದ್ಧಗಳನ್ನು ನಿಲ್ಲಿಸಿದ್ದಕ್ಕಾಗಿಯೇ ನಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ