ಭಾರತೀಯ ಉದ್ಯೋಗಿಗಳಿಗೆ ಟ್ರಂಪ್ ಶಾಕ್; 1 ಲಕ್ಷ ಡಾಲರ್ ಪಾವತಿಸದಿದ್ದರೆ ನಾಳೆಯಿಂದ ಅಮೆರಿಕಕ್ಕೆ ಪ್ರವೇಶವಿಲ್ಲ
ಹೆಚ್-1ಬಿ ವೀಸಾ ಶುಲ್ಕ ಏರಿಕೆ ಮಾಡಿ ಭಾರತೀಯ ಉದ್ಯೋಗಿಗಳಿಗೆ ಡೊನಾಲ್ಡ್ ಟ್ರಂಪ್ ಶಾಕ್ ಕೊಟ್ಟಿದ್ದಾರೆ. ಅಮೆರಿಕದ ಉದ್ಯೋಗಿಗಳ ರಕ್ಷಣೆಗೆ ಹೊಸ ಕ್ರಮಕ್ಕೆ ಅಮೆರಿಕ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ವೀಸಾ ಹೊಂದಿರುವವರು ಸೇರಿದಂತೆ ಎಲ್ಲಾ H1-B ಉದ್ಯೋಗಿಗಳು ತಮ್ಮ ಉದ್ಯೋಗದಾತರ ಮೂಲಕ ಪ್ರತಿ ವರ್ಷ 1 ಲಕ್ಷ ಡಾಲರ್ (88 ಲಕ್ಷ ರೂ.ಗಿಂತಲೂ ಹೆಚ್ಚು) ಪಾವತಿಸಬೇಕು ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆಗೆ ಸಹಿ ಹಾಕಿದ್ದಾರೆ.

ವಾಷಿಂಗ್ಟನ್, ಸೆಪ್ಟೆಂಬರ್ 20: ಹೆಚ್-1ಬಿ ವೀಸಾಗಳ (H-1B Visa) ಮೇಲಿನ ವಾರ್ಷಿಕ ಶುಲ್ಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) 1 ಲಕ್ಷ ಡಾಲರ್‌ಗೆ (ಭಾರತೀಯ ದರದ ಪ್ರಕಾರ 88 ಲಕ್ಷ ರೂ.ಗಿಂತಲೂ ಅಧಿಕ) ಏರಿಕೆ ಮಾಡಿದ್ದಾರೆ. ಈ ನಿಯಮದಿಂದಾಗಿ ಭಾರತೀಯ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಸ್ಥಳೀಯ ಸಮಯ) ಸಹಿ ಮಾಡಿದ ಘೋಷಣೆಯ ಪ್ರಕಾರ, ಪ್ರಸ್ತುತ ವೀಸಾ ಹೊಂದಿರುವವರು ಸೇರಿದಂತೆ H-1B ಉದ್ಯೋಗಿಗಳಿಗೆ ತಮ್ಮ ಉದ್ಯೋಗದಾತರು ಉದ್ಯೋಗಿಗೆ 1 ಲಕ್ಷ ಡಾಲರ್ ವಾರ್ಷಿಕ ಶುಲ್ಕವನ್ನು (ರೂ. 88 ಲಕ್ಷಕ್ಕಿಂತ ಹೆಚ್ಚು) ಪಾವತಿಸದ ಹೊರತು ಭಾನುವಾರದಿಂದ ಅಮೆರಿಕಕ್ಕೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ನೂತನ ಪ್ರಯಾಣ ನಿಷೇಧ ಮತ್ತು ಹೆಚ್ಚುವರಿ ಶುಲ್ಕವು ಭಾನುವಾರ (ಸೆಪ್ಟೆಂಬರ್ 21) ಬೆಳಿಗ್ಗೆ 9.30 (ಭಾರತೀಯ ಕಾಲಮಾನದ ಪ್ರಕಾರ) ನಂತರ ಅಮೆರಿಕ ಪ್ರವೇಶಿಸುವ ಎಲ್ಲ H-1B ಹೋಲ್ಡರ್‌ಗೆ ಅನ್ವಯಿಸುತ್ತದೆ. ಹೊಸ H-1B ಮತ್ತು H-1B ವಿಸ್ತರಣೆಗಳನ್ನು ಪ್ರಕ್ರಿಯೆಗೊಳಿಸಲು 1 ಲಕ್ಷ ಡಾಲರ್ ಮತ್ತು ನಂತರ ಅವುಗಳನ್ನು ನಿರ್ವಹಿಸಲು ಪ್ರತಿ ವರ್ಷ 1 ಲಕ್ಷ ಡಾಲರ್ ಪಾವತಿಸಬೇಕು ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: UK Visa: ಯುಕೆ ವೀಸಾ ಪಡೆಯಲು ವಿದ್ಯಾರ್ಥಿಗಳಿಗಿರುವ ನಿಯಮಗಳೇನು? ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿರಬೇಕು?
ಡೊನಾಲ್ಡ್ ಟ್ರಂಪ್ ಅವರು H1-B ವೀಸಾ ಅರ್ಜಿಗೆ 1 ಲಕ್ಷ ಡಾಲರ್ ವಾರ್ಷಿಕ ಶುಲ್ಕ ಘೋಷಣೆ ಮಾಡಿರುವುದು ಇದೀಗ ಅಮೆರಿಕನ್ ಟೆಕ್ ಕಂಪನಿಗಳ ಆತಂಕವನ್ನು ಹೆಚ್ಚಿಸಿದೆ. ಟ್ರಂಪ್ ಅವರ ಆದೇಶದಿಂದ ಈ ಕಂಪನಿಗಳು ತಮ್ಮಲ್ಲಿರುವ ವಿದೇಶಗಳ ಅತ್ಯುತ್ತಮ ಉದ್ಯೋಗಿಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ. ಟ್ರಂಪ್ ಸರ್ಕಾರವು ಕಂಪನಿಗಳು H-1B ಕಾರ್ಮಿಕರ ವೀಸಾಗಳಿಗೆ ವರ್ಷಕ್ಕೆ 1 ಲಕ್ಷ ಡಾಲರ್ ಪಾವತಿಸಲು ಸೂಚಿಸಿರುವುದರಿಂದ ಕೆಲವು ದೊಡ್ಡ ತಂತ್ರಜ್ಞಾನ ಕಂಪನಿಗಳು ವೀಸಾ ಹೊಂದಿರುವವರು ಅಮೆರಿಕದಲ್ಲಿಯೇ ಉಳಿಯುವಂತೆ ಅಥವಾ ತಮ್ಮ ಸ್ವದೇಶಕ್ಕೆ ಹೋಗಿದ್ದರೆ ಅಮೆರಿಕಕ್ಕೆ ಭಾನುವಾರ ಮುಂಜಾನಯೊಳಗೆ ಹಿಂತಿರುಗುವಂತೆ ಎಚ್ಚರಿಸಿವೆ.
ಇದನ್ನೂ ಓದಿ: Tariff brain: ಭಾರತದ ವಿರುದ್ಧ ಟ್ರಂಪ್ ಕಿವಿಯೂದುತ್ತಿರುವವರು ಯಾರು? ಟ್ರಂಪ್ಗೆ ಇವರು ಟ್ಯಾರಿಫ್ ಗುರು
ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ (USCIS) ಇತ್ತೀಚಿನ ಮಾಹಿತಿಯ ಪ್ರಕಾರ, ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ 2023ರ ನಡುವೆ ನೀಡಲಾದ ಸುಮಾರು 4 ಲಕ್ಷ H-1B ವೀಸಾಗಳಲ್ಲಿ ಭಾರತೀಯರು ಶೇ. 72ರಷ್ಟಿದ್ದಾರೆ. ಇವರೆಲ್ಲರಿಗೂ ಇದೀಗ ಉದ್ಯೋಗ ಭದ್ರತೆಯ ಭೀತಿ ಎದುರಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




