ಟ್ರಂಪ್ಗಾಗಿ ಫ್ರೆಂಚ್ ಅಧ್ಯಕ್ಷರನ್ನೇ ನಡುರಸ್ತೆಯಲ್ಲಿ ನಿಲ್ಲಿಸಿದ ನ್ಯೂಯಾರ್ಕ್ ಪೊಲೀಸರು
ಡೊನಾಲ್ಡ್ ಟ್ರಂಪ್ ಅವರ ವಾಹನದ ಮೆರವಣಿಗೆಗೆ ರಸ್ತೆಗಳನ್ನು ಬಂದ್ ಮಾಡಿದ ನಂತರ ನಿನ್ನೆ ರಾತ್ರಿ ನ್ಯೂಯಾರ್ಕ್‌ನಲ್ಲಿ ಪೊಲೀಸರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ತಡೆದಿದ್ದಾರೆ. ಮ್ಯಾಕ್ರನ್ ಅವರೇ ಕೆಳಗಿಳಿದು ಬಂದು ಮನವಿ ಮಾಡಿದರೂ ಪೊಲೀಸರು ಬಿಡಲಿಲ್ಲ. ಕೊನೆಗೆ ಮ್ಯಾಕ್ರನ್ ಅವರೇ ಟ್ರಂಪ್ಗೆ ಫೋನ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ನವದೆಹಲಿ, ಸೆಪ್ಟೆಂಬರ್ 23: ನಿನ್ನೆ ರಾತ್ರಿ (ಸೆಪ್ಟೆಂಬರ್ 22) ವಿಶ್ವಸಂಸ್ಥೆಯ 80ನೇ ಸಾಮಾನ್ಯ ಸಭೆಯಲ್ಲಿ (UNGA) ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಭಾಷಣದ ನಂತರ ವಾಪಾಸ್ ತೆರಳುತ್ತಿದ್ದಾಗ ನ್ಯೂಯಾರ್ಕ್ ನಗರದ ರಸ್ತೆಯಲ್ಲಿ ಅವರ ವಾಹನವನ್ನು ತಡೆದು ನಿಲ್ಲಿಸಲಾಯಿತು. ಟ್ರಂಪ್ (Donald Trump) ಅವರ ಬೆಂಗಾವಲು ಪಡೆಯ ವಾಹನ ಬರುತ್ತಿದೆ ಎಂಬ ಕಾರಣಕ್ಕೆ ಎಲ್ಲ ಮಾರ್ಗದಲ್ಲೂ ವಾಹನಗಳನ್ನು ತಡೆಹಿಡಿಯಲಾಗಿತ್ತು. ಇದರ ಪರಿಣಾಮವನ್ನು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಕೂಡ ಅನುಭವಿಸಬೇಕಾಯಿತು. ಕೊನೆಗೆ ಖುದ್ದು ಮ್ಯಾಕ್ರನ್ ಅವರೇ ಕಾರಿನಿಂದ ಇಳಿದು ಪೊಲೀಸರ ಜೊತೆ ಮಾತನಾಡಿ ತಮ್ಮ ಪರಿಚಯ ಮಾಡಿಕೊಂಡರು. ಆದರೂ ಪೊಲೀಸರು ಅವರಿಗೆ ಹೋಗಲು ಅವಕಾಶ ನೀಡಲಿಲ್ಲ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡುತ್ತಿದೆ.
ಪ್ಯಾಲೆಸ್ಟೈನ್ ರಾಜ್ಯವನ್ನು ಗುರುತಿಸುವ ಮಹತ್ವದ ಘೋಷಣೆಯನ್ನು ಮಾಡಿದ ನಂತರ ಮ್ಯಾಕ್ರನ್ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಿಂದ ಹೊರಬಂದಾಗ ಅವರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಲಾಯಿತು. “ನನ್ನ ಜೊತೆ 10 ಜನ ಕೂಡ ಇದ್ದಾರೆ. ಫ್ರೆಂಚ್ ಎಂಬಸ್ಸಿಗೆ ಹೋಗಬೇಕಿದೆ“ ಎಂದು ಮ್ಯಾಕ್ರನ್ ಹೇಳಿದರು. ಆದರೆ, ಆ ಪೊಲೀಸ್, “ಕ್ಷಮಿಸಿ, ಮಿಸ್ಟರ್ ಪ್ರೆಸಿಡೆಂಟ್, ಈಗ ಎಲ್ಲ ಮಾರ್ಗವನ್ನೂ ನಿರ್ಬಂಧಿಸಲಾಗಿದೆ” ಎಂದು ಫ್ರೆಂಚ್ ಅಧ್ಯಕ್ಷರಿಗೆ ತಿಳಿಸಿದರು. ಕೊನೆಗೆ ಮ್ಯಾಕ್ರನ್ ಅವರೇ ತಮ್ಮ ಫೋನ್ನಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಫೋನ್ ಮಾಡಿದರು.
“ಹೇಗಿದ್ದೀರಿ ಟ್ರಂಪ್? ಇಲ್ಲಿ ಏನಾಗಿದೆ ಗೊತ್ತಾ? ನಿಮಗಾಗಿ ರಸ್ತೆಯನ್ನೆಲ್ಲ ಬಂದ್ ಮಾಡಿರುವುದರಿಂದ ನಾನು ಇಲ್ಲಿ ರಸ್ತೆಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದೇನೆ” ಎಂದು ಮ್ಯಾಕ್ರನ್ ಫೋನ್ ಕರೆಯ ಸಮಯದಲ್ಲಿ ತಮಾಷೆಯಾಗಿ ಮಾತನಾಡಿದರು. ಕೊನೆಗೆ ಮ್ಯಾಕ್ರನ್ ಅವರಿಗಾಗಿ ಪಾದಚಾರಿ ಮಾರ್ಗವನ್ನು ಮಾತ್ರ ತೆರೆಯಲಾಯಿತು. ಮ್ಯಾಕ್ರನ್ ಫುಟ್ಪಾತ್ನಲ್ಲಿ ನಡೆದುಕೊಂಡು ಹೋಗಬೇಕಾಯಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

