ಇದೇ ವರ್ಷ ಮೊದಲ ದಿನ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತ ಎಂಟ್ರಿ ಕೊಟ್ಟ ಬಳಿಕ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಐದು ದಿನಗಳ ಕಾಲ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದು, ಇಂದು ನ್ಯೂಯಾರ್ಕ್ನಲ್ಲಿ ಬಂದಿಳಿದರು. ಕೊರೊನಾ ಕಾಟದ ಮಧ್ಯೆ, ಕೊರೊನಾ ನಿಯಂತ್ರಣಕ್ಕಾಗಿ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರ ಈ ಸುದೀರ್ಘ ಪ್ರವಾಸ ಮಹತ್ವ ಪಡೆದಿದೆ. ಕೊವಿಡ್ ನಿಯಂತ್ರಣಕ್ಕಾಗಿ ಅಮೆರಿಕದೊಂದಿಗೆ ಸಹಕಾರ ಪಡೆಯುವುದು ಮತ್ತು ಕೊರೊನಾ ವ್ಯಾಕ್ಸಿನ್ ಸರಬರಾಜಿಗೆ ಅಂಕಿತ ಹಾಕುವುದು ಭೇಟಿಯ ಪ್ರಧಾನ ಅಜೆಂಡಾ ಆಗಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ರಾಜಭಾರಿಯಾಗಿರುವ ಟಿ ಎಸ್ ತಿರುಮೂರ್ತಿ ಸಚಿವ ಜೈಶಂಕರ್ ಅವರನ್ನು ಸೋಮವಾರ ಸ್ವಾಗತಿಸಿದರು. ಐದು ದಿನಗಳ ಕಾಲ ಮೇ 24ರಿಂದ ಮೇ 28ರ ವರೆಗೆ (May 24-May 28) ಸಚಿವ ಜೈಶಂಕರ್ ಅಮೆರಿಕ ಪ್ರವಾಸದಲ್ಲಿರುತ್ತಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ತಿರುಮೂರ್ತಿ, ವಿಶ್ವಸಂಸ್ಥೆಯ (United Nations) ಮಹಾ ಕಾರ್ಯದರ್ಶಿ ಆಂಟೋನಿಯೊ ಗ್ಯುಟೆರಸ್ ಅವರನ್ನು ಸಚಿವ ಜೈಶಂಕರ್ ನ್ಯೂಯಾರ್ಕ್ನಲ್ಲಿ ಭೇಟಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಅದಕ್ಕೂ ಮೊದಲು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ದ್ವಿಪಕ್ಷೀಯ ಚರ್ಚೆಗಳ ಭಾಗವಾಗಿ ಕ್ಯಾಬಿನ್ ಸಚಿವರು ಮತ್ತಿತರ ಉನ್ನತಾಧಿಕಾರಿಗಳ ಜೊತೆ ಸಚಿವ ಜೈಶಂಕರ್ ಮಾತುಕತೆ ನಡೆಸಲಿದ್ದಾರೆ. ಭಾರತ ಮತ್ತು ಅಮೆರಿಕ ನಡುವಣ ದ್ವಿಪಕ್ಷೀಯ ನಂಟಿನೊಂದಿಗೆ ಕೊವಿಡ್ ಸಂಬಂಧೀ ವ್ಯವಹಾರಗಳ ಬಗ್ಗೆ ವಿವಿಧ ಔದ್ಯಮಿಕ ಸಂಘ ಸಂಸ್ಥೆಗಳ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಪ್ರಕಟಣೆಯಲ್ಲಿ ತಿಳಿಸಿದೆ.
ಕೊವಿಡ್ ವ್ಯಾಕ್ಸಿನ್ ಉತ್ಪಾದನೆಯಲ್ಲಿ ತೊಡಗಿರುವ ಅಮೆರಿಕಾದ ನಾನಾ ಉದ್ಯಮಗಳು ಮತ್ತು ಸಂಸ್ಥೆಗಳ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ. ಈ ಸಂಸ್ಥೆಗಳಿಂದ ಭಾರತಕ್ಕೆ ಕೊವಿಡ್ ವ್ಯಾಕ್ಸಿನ್ ಪಡೆಯುವುದು ಈ ಭೇಟಿಯ ಪ್ರಧಾನ ಅಜೆಂಡಾ ಆಗಿದೆ. ತನ್ನ ಬಳಿ 80 ದಶಲಕ್ಷ ವ್ಯಾಕ್ಸಿನ್ ಹೆಚ್ಚುವರಿ ದಾಸ್ತಾನು ಇದ್ದು ಕೊರೊನಾ ಬಗ್ಗೆ ಹೆಚ್ಚು ವರಿ ಮಾಡಿಕೊಂಡಿರುವ ರಾಷ್ಟ್ರಗಳಿಗೆ ಸರಬರಾಜು ಮಾಡಲು ತಾನು ಸಿದ್ಧವಿರುವುದಾಗಿ ಅಮೆರಿಕಾ ಇತ್ತೀಚೆಗಷ್ಟೇ ಘೋಷಿಸಿರುವುದು ಗಮನಾರ್ಹ.
ಅಮೆರಿಕಾ ಈಗಾಗಲೇ ಆಸ್ಟ್ರಾ ಜೆನಿಕಾ, ಫೈಜರ್, ಮಾಡೆರ್ನಾ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳು ಉತ್ಪಾದಿಸಿರುವ ಕೊವಿಡ್ ಲಸಿಕೆಯನ್ನು 60 ದಶಲಕ್ಷ ಪ್ರಮಾಣದಲ್ಲಿ ದಾಸ್ತಾನು ಹೊಂದಿದೆ. ಭಾರತದಲ್ಲಿ ಕೊವಿಡ್ ನಿಯತ್ರಣದಲ್ಲಿ ಅಮೆರಿಕಾ ಪ್ರಮುಖ ನೆರವುಗಳನ್ನು ನೀಡುತ್ತಿದೆ. ಅದಾಗಲೇ ಆಕ್ಸಿಜನ್ ಘಟಕಗಳು, ಆಕ್ಸಿಜನ್ ಕಾನ್ಸೆಂಟ್ರೇಟರ್ಗಳು ಮುಂತಾದ ಅಗತ್ಯ ವೈದ್ಯಕೀಯ ಪರಿಕರಗಳನ್ನು ಸರಬರಾಜು ಮಾಡಿದೆ. ಜೊತೆಗೆ, ಕೊವಿಶೀಲ್ಡ್ ಲಸಿಕೆ ತಯಾರಿಸುತ್ತಿರುವ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಗೆ (Serum Institute of India -SII) ಕೊವಿಡ್ ಲಸಿಕೆ ತಯಾರಿಕೆಗೆ ಅಗತ್ಯ ಕಚ್ಚಾ ವಸ್ತುಗಳನ್ನು ರಫ್ತು ಮಾಡಿದೆ.
ರಾಜ್ಯದಲ್ಲಿ ಮತ್ತೆ ಆಕ್ಸಿಜನ್ ಸಮಸ್ಯೆ, 2 ದಿನ ಆಕ್ಸಿಜನ್ ಉತ್ಪಾದನೆಯಾಗಲ್ಲ ಎಂದು ಸಂದೇಶ ರವಾನೆ
(India EAM Dr. S. Jaishankar in New York, begin his 5 day US visit to seek COVID related cooperation)