
ವಾಷಿಂಗ್ಟನ್, ಸೆಪ್ಟೆಂಬರ್ 6: ರಷ್ಯಾ ಹಾಗೂ ಚೀನಾ ಅಧ್ಯಕ್ಷರ ಜತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ನಂತರ ಮತ್ತಷ್ಟು ಉರಿದುಬಿದ್ದಿರುವ ಅಮೆರಿಕ ಇದೀಗ, ಒಂದೆರಡು ತಿಂಗಳಲ್ಲಿ ಭಾರತ ಅಮೆರಿಕದ ಕ್ಷಮೆಯಾಚಿಸಲಿದೆ ಎಂದಿದೆ. ಅಲ್ಲದೆ, ಸುಂಕದ ಹೊರೆಯಿಂದ ತಪ್ಪಿಸಿಕೊಳ್ಳಲು ಮೂರು ಷರತ್ತುಗಳನ್ನೂ ವಿಧಿಸಿದೆ. ಭಾರತ ಒಂದೆರಡು ತಿಂಗಳಲ್ಲಿ ಅಮೆರಿಕದ ಕ್ಷಮೆಯಾಚಿಸಲಿದೆ. ಮತ್ತೆ ಮಾತುಕತೆ ಮರಳಲಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.
ರಷ್ಯಾ,ಚೀನಾ, ಭಾರತದ ಈ ಬಾಂಧವ್ಯ ಎಷ್ಟು ಕಾಲ ಇರುತ್ತದೆಯೋ ನೋಡೋಣ ಎಂದು ವ್ಯಂಗ್ಯವಾಡಿರುವ ಅಮೆರಿಕ ವಾಣಿಜ್ಯ ಕಾರ್ಯದರ್ಶಿ, ನಮ್ಮದು 30 ಟ್ರಿಲಿಯನ್ ಡಾಲರ್‌ನ ಆರ್ಥಿಕತೆ. ನಾವು ವಿಶ್ವದ ಗ್ರಾಹಕರು. ಗ್ರಾಹಕರೇ ಮಾತೇ ಅಂತಿಮ ಎಂದಿದ್ದಾರೆ.
ರಷ್ಯಾ, ಚೀನಾ ಜೊತೆಗಿನ ಸಂಬಂಧವನ್ನು ಭಾರತ ತೊರೆದು ಅಮೆರಿಕ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು. ಬ್ರಿಕ್ಸ್‌ನ ಭಾಗವಾಗುವುದನ್ನು ನಿಲ್ಲಿಸಬೇಕು. ಹೀಗೆ 3 ಷರತ್ತುಗಳನ್ನು ಅಮೆರಿಕ ಹಾಕಿದೆ.
ಏತನ್ಮಧ್ಯೆ, ಕರಾಳ ಚೀನಾಗಾಗಿ ನಾವು ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಚೀನಾದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ಅಮೆರಿಕದ ವೈರಿಗಳಾದ ರಷ್ಯಾ ಮತ್ತು ಚೀನಾದ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಇದು ಟ್ರಂಪ್ ಕಣ್ಣು ಕೆಂಪಾಗಿಸಿದ್ದು ಹೊಸ ಈಗ ವರಸೆ ತೆಗೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಒಟ್ಟಿಗೆ ನಡೆಯುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಟ್ರಂಪ್, ಅತ್ಯಂತ್ರ ಕ್ರೂರ ಮತ್ತು ಕರಾಳ ಚೀನಾಗಾಗಿ ನಾವು ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಜೊತೆಗೂಡಿ ಅವರು ಬಹುಕಾಲ ಸಮೃದ್ಧ ಭವಿಷ್ಯವನ್ನು ಹೊಂದಲಿ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಕರಾಳ ಚೀನಾಕ್ಕೆ ಭಾರತ, ರಷ್ಯಾ ಬಲಿ; ಸುಂಕದ ಉದ್ವಿಗ್ನತೆಯ ನಡುವೆ ಟ್ರಂಪ್ ಅಸಮಾಧಾನ
ರಷ್ಯಾ ಮತ್ತು ಚೀನಾ ಕುರಿತು ಟ್ರಂಪ್ ಹೇಳಿಕೆಗಳಿಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಭಾರತದ ನಡುವಿನ ಈ ಸಂಬಂಧ ನಮಗೆ ಬಹಳ ಮುಖ್ಯವಾಗಿದೆ. ಉಭಯ ದೇಶಗಳು ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತವೆ ಎಂದಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 am, Sat, 6 September 25