ಭಾರತ-ಅಮೆರಿಕ ಸಂಬಂಧ ಗಟ್ಟಿಗೊಳಿಸಲು ಟ್ರಂಪ್ ನಡೆ ಶ್ಲಾಘನೀಯ; ಪ್ರಧಾನಿ ಮೋದಿ ಪ್ರತಿಕ್ರಿಯೆ
ಭಾರೀ ಸುಂಕದ ಹೇರಿಕೆ ಬೆನ್ನಲ್ಲೇ ಸದಾ ನಿಮ್ಮ ಸ್ನೇಹಿತನಾಗಿರುತ್ತೇನೆ ಎಂದು ಇಂದು ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಭಾರತ-ಅಮೆರಿಕದ ಸಂಬಂಧಗಳಲ್ಲಿ ಉದ್ವಿಗ್ನತೆಯ ಹೊರತಾಗಿಯೂ ಅಮೆರಿಕ ಅಧ್ಯಕ್ಷ ಟ್ರಂಪ್ ಮೋದಿಯ ಜೊತೆಗಿನ ತಮ್ಮ ಬಲವಾದ ವೈಯಕ್ತಿಕ ಬಾಂಧವ್ಯವನ್ನು ಪುನರುಚ್ಚರಿಸಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರ ಭಾವನೆಗಳನ್ನು ಶ್ಲಾಘಿಸುತ್ತೇನೆ ಮತ್ತು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 6: ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಸುಧಾರಣೆಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಆತ್ಮೀಯ ಸ್ನೇಹಿತರಾಗಿದ್ದ ಟ್ರಂಪ್-ಮೋದಿ ನಡುವೆ ಅಮೆರಿಕ ಭಾರತದ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಿದ ಬಳಿಕ ಅಂತರ ಮೂಡಿತ್ತು. ನೇರವಾಗಿ ಟ್ರಂಪ್ ವಿರುದ್ಧ ಮೋದಿ (PM Modi) ಹೇಳಿಕೆ ನೀಡದಿದ್ದರೂ ಪರೋಕ್ಷವಾಗಿ ಟಾಂಗ್ ನೀಡುತ್ತಲೇ ಇದ್ದರು. ಇದೀಗ ಅವರಿಬ್ಬರ ನಡುವೆ ಪ್ಯಾಚಪ್ ಆಗುವ ಲಕ್ಷಣಗಳು ಗೋಚರಿಸಿವೆ.
ಟ್ರಂಪ್ ಭಾರತದ ಮೇಲೆ 50% ಸುಂಕವನ್ನು ವಿಧಿಸಿದ ನಂತರ ಮತ್ತು ಪ್ರಧಾನಿ ಅಮೆರಿಕ ಅಧ್ಯಕ್ಷರಿಂದ 4 ಕರೆಗಳನ್ನು ನಿರಾಕರಿಸಿದ ವರದಿಗಳ ನಂತರ ಅವರಿಬ್ಬರ ಸಂಬಂಧಗಳಲ್ಲಿನ ಅಂತರದ ನಡುವೆ ಇದೀಗ ಮೊದಲ ಸಕಾರಾತ್ಮಕ ಬೆಳವಣಿಗೆ ಉಂಟಾಗಿದೆ. ಟ್ರಂಪ್ ಅವರು ಪ್ರಧಾನಿ ಮೋದಿಯನ್ನು ಉತ್ತಮ ಸ್ನೇಹಿತ ಎಂದು ಹೊಗಳಿದ್ದಾರೆ. ಅಮೆರಿಕವು “ಭಾರತವನ್ನು ಅತ್ಯಂತ ಕರಾಳ ಚೀನಾಕ್ಕೆ ಕಳೆದುಕೊಂಡಿದೆ” ಎಂದು ಟ್ರಂಪ್ ನಿನ್ನೆ ಹೇಳಿದ್ದರು. ಅದರ ಬೆನ್ನಲ್ಲೇ ಇಂದು “ನಾವು ಯಾವಾಗಲೂ ಸ್ನೇಹಿತರಾಗಿರುತ್ತೇನೆ” ಎಂದು ಹೇಳಿದ್ದಾರೆ.
ಅಧ್ಯಕ್ಷ ಟ್ರಂಪ್ ಅವರ ಭಾವನೆಗಳನ್ನು ನಾನು ಗೌರವಿಸುತ್ತೇನೆ, ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ. “ಭಾರತ ಮತ್ತು ಅಮೆರಿಕಗಳು ಬಹಳ ಸಕಾರಾತ್ಮಕ ಮತ್ತು ಭವಿಷ್ಯವಾಣಿಯ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸಿದ್ದಕ್ಕಾಗಿ ಅತಿ ಹೆಚ್ಚಿನ ಸುಂಕಗಳನ್ನು ವಿಧಿಸಲಾಗಿದ್ದರೂ, ಭಾರತ ಇಲ್ಲಿಯವರೆಗೆ ಅಮೆರಿಕವನ್ನು ನೇರವಾಗಿ ಎದುರಿಸಿರಲಿಲ್ಲ ಅಥವಾ ಟ್ರಂಪ್ ಅನ್ನು ಟೀಕಿಸಿರಲಿಲ್ಲ. “ನಾನು ಯಾವಾಗಲೂ ಮೋದಿಯೊಂದಿಗೆ ಸ್ನೇಹಿತನಾಗಿರುತ್ತೇನೆ, ಅವರು ಒಬ್ಬ ಉತ್ತಮ ಪ್ರಧಾನಿ. ನಾನು ಯಾವಾಗಲೂ ಅವರೊಂದಿಗೆ ಸ್ನೇಹಿತನಾಗಿರುತ್ತೇನೆ. ಆದರೆ ಈ ನಿರ್ದಿಷ್ಟ ಕ್ಷಣದಲ್ಲಿ ಅವರು ಏನು ಮಾಡುತ್ತಿದ್ದಾರೆಯೋ ಅದು ನನಗೆ ಇಷ್ಟವಿಲ್ಲ”ಎಂದು ಟ್ರಂಪ್ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




