ಜಮ್ಮು-ಕಾಶ್ಮೀರವನ್ನು ಪಾಕ್ ಭಾಗವೆಂದು ತೋರಿಸಿದ ಬಾಂಗ್ಲಾ; ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಝಾ ಆಕ್ಷೇಪ

ಬಾಂಗ್ಲಾದೇಶದಲ್ಲಿ ನಡೆದ ವಿದೇಶಾಂಗ ನೀತಿ ಕುರಿತಾದ ಸೆಮಿನಾರ್ ಒಂದರಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಿದ ನಕ್ಷೆಗೆ, ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ನ ದ್ವಿತೀಯ ಕಾರ್ಯದರ್ಶಿ ಪೂಜಾ ಝಾ ಅವರು ತಕ್ಷಣವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದ ನಡುವೆಯೇ ಎದ್ದುನಿಂತು ಆಕ್ಷೇಪ ಎತ್ತಿದ ಪೂಜಾ ಝಾ, "ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿದೆ" ಎಂದು ಜಾಗತಿಕ ವೇದಿಕೆಯಲ್ಲಿ ಭಾರತದ ಅಧಿಕೃತ ನಿಲುವನ್ನು ಮತ್ತೆ ಪ್ರತಿಪಾದಿಸಿದರು.

ಜಮ್ಮು-ಕಾಶ್ಮೀರವನ್ನು ಪಾಕ್ ಭಾಗವೆಂದು ತೋರಿಸಿದ ಬಾಂಗ್ಲಾ; ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಝಾ ಆಕ್ಷೇಪ
Puja Jha
Image Credit source: x

Updated on: Jul 10, 2026 | 8:16 PM

ಢಾಕಾ, ಜುಲೈ 10: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ವಿದೇಶಾಂಗ ನೀತಿ ಕುರಿತಾದ ಸೆಮಿನಾರ್ ಒಂದರಲ್ಲಿ ಭಾರತದ ತಪ್ಪು ನಕ್ಷೆಯನ್ನು ಪ್ರದರ್ಶಿಸಿದ್ದಕ್ಕೆ ಅಲ್ಲಿ ನಿಯೋಜನೆಗೊಂಡಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಝಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು (Jammu and Kashmir) ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿತ್ತು. “ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ” ಎಂದು ಅವರು ಸೆಮಿನಾರ್ ನಡುವೆಯೇ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಭಾರತೀಯರ ಮನಗೆದ್ದಿದೆ.

ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ನ ದ್ವಿತೀಯ ಕಾರ್ಯದರ್ಶಿಯಾಗಿರುವ ಪೂಜಾ ಝಾ ಈ ಸೆಮಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೆಮಿನಾರ್‌ನ ಸ್ಕ್ರೀನ್ ಮೇಲೆ ಭಾರತದ ತಪ್ಪು ನಕ್ಷೆ ಪ್ರದರ್ಶನಗೊಳ್ಳುತ್ತಿರುವುದನ್ನು ಗಮನಿಸಿದ ಅವರು ತಕ್ಷಣವೇ ಮಧ್ಯಪ್ರವೇಶಿಸಿ, “ಇಲ್ಲಿ ಪ್ರದರ್ಶಿಸುತ್ತಿರುವ ಭಾರತದ ನಕ್ಷೆಯು ತಪ್ಪಾಗಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ” ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ನಕ್ಷೆಯಲ್ಲಿ ತೋರಿಸಿ ವಿವಾದಕ್ಕೀಡಾದ ನೇಪಾಳ ಏರ್​​​ಲೈನ್ಸ್

ಆ ವಿದೇಶಾಂಗ ನೀತಿ ಸೆಮಿನಾರ್‌ನಲ್ಲಿ ಪ್ರದರ್ಶಿಸಲಾದ ನಕ್ಷೆಯಲ್ಲಿ ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದ ಭೂಪ್ರದೇಶ ಎಂಬಂತೆ ಬಿಂಬಿಸಲಾಗಿತ್ತು. ಇದನ್ನು ಕಂಡ ಭಾರತೀಯ ಅಧಿಕಾರಿ ಜಾಗತಿಕ ವೇದಿಕೆಯಲ್ಲೇ ಭಾರತದ ಅಧಿಕೃತ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯಾವುದೇ ಸಾರ್ವಜನಿಕ ಅಥವಾ ಅಧಿಕೃತ ವೇದಿಕೆಗಳಲ್ಲಿ ಭಾರತದ ನಕ್ಷೆಯನ್ನು ಸರಿಯಾಗಿ ಮತ್ತು ನಿಖರವಾಗಿ ಪ್ರದರ್ಶಿಸಬೇಕು ಎಂಬ ಭಾರತದ ಸುದೀರ್ಘ ನಿಲುವನ್ನು ಅವರ ಈ ನಡೆ ಮತ್ತೊಮ್ಮೆ ಎತ್ತಿಹಿಡಿದಿದೆ.


ಆಯೋಜಕರ ಸ್ಪಷ್ಟನೆ:

ಪೂಜಾ ಝಾ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಂತೆ ಕಾರ್ಯಕ್ರಮದ ಆಯೋಜಕರಾದ ತಾರಿಕ್ ಎ. ಕರೀಮ್ ಅವರು ಸ್ಪಷ್ಟನೆ ನೀಡಿದ್ದು, “ಈ ನಕ್ಷೆಯನ್ನು ಕೇವಲ ವಿಷಯವನ್ನು ವಿವರಿಸುವ ಉದ್ದೇಶಕ್ಕಾಗಿ ಬಳಸಲಾಗಿದೆಯೇ ಹೊರತು, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಅಥವಾ ಹೇಳಿಕೆ ಇರಲಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us