AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಪೊಲೀಸ್, ಭದ್ರತಾ ಪಡೆಗಳಿಂದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆದಿದೆ. ಇದರಿಂದ 30 ಜನ ಮೃತಪಟ್ಟಿದ್ದಾರೆ. ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ "ಈ ಕೃತ್ಯಕ್ಕೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಭಾವಿಸುತ್ತೇವೆ" ಎಂದು ಪ್ರತಿಕ್ರಿಯಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಭೀಕರ ಘರ್ಷಣೆಯಲ್ಲಿ ಹಲವು ಜನರು ಸಾವನ್ನಪ್ಪಿದ ಬೆನ್ನಲ್ಲೇ ಭಾರತವು ಇಸ್ಲಾಮಾಬಾದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ
Randhir Jaiswal Image Credit source: PTI
ಸುಷ್ಮಾ ಚಕ್ರೆ
|

Updated on: Jun 09, 2026 | 8:53 PM

Share

ನವದೆಹಲಿ, ಜೂನ್ 9: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಆರ್ಥಿಕ ಮತ್ತು ರಾಜಕೀಯ ಕುಂದುಕೊರತೆಗಳ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಮುಖ ನಾಗರಿಕ ಸಮಾಜದ ಒಕ್ಕೂಟವಾದ ‘ಜಾಯಿಂಟ್ ಅವಮಿ ಆಕ್ಷನ್ ಕಮಿಟಿ’ಯನ್ನು (JAAC) ಅಧಿಕಾರಿಗಳು ನಿಷೇಧಿಸಿದ ಬೆನ್ನಲ್ಲೇ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ತೀವ್ರ ಘರ್ಷಣೆಯಲ್ಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಪ್ರತಿಕ್ರಿಯೆ ನೀಡಿದ್ದು, ಈ ಘಟನೆಗೆ ಪಾಕಿಸ್ತಾನವೇ ನೇರ ಹೊಣೆ ಎಂದು ಆರೋಪಿಸಿದೆ. ಹಾಗೇ, ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಪಾಕಿಸ್ತಾನ ಮಾಡುತ್ತಿರುವ ದುಷ್ಕೃತ್ಯಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನ ದೇಶವನ್ನು ಹೊಣೆಗಾರರನ್ನಾಗಿ ಮಾಡಲಿದೆ ಎಂದು ನಾವು ನಂಬುತ್ತೇವೆ ಎಂದು ಭಾರತ ಭರವಸೆ ವ್ಯಕ್ತಪಡಿಸಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಈ ಸಂದರ್ಭದಲ್ಲಿ ಪಾಕಿಸ್ತಾನದಿಂದ ವ್ಯವಸ್ಥಿತವಾಗಿ ಹರಡಲಾಗುತ್ತಿರುವ ಸುಳ್ಳು ಸುದ್ದಿ ಮತ್ತು ವೀಡಿಯೊಗಳ ಸರಣಿಯನ್ನು ನಾವು ಗಮನಿಸುತ್ತಿದ್ದೇವೆ. ಇದು ತನ್ನದೇ ಆದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಜಗತ್ತಿನ ಗಮನವನ್ನು ಬೇರೆಡೆಗೆ ತಿರುಗಿಸಲು ಪಾಕಿಸ್ತಾನ ಮಾಡುತ್ತಿರುವ ಹತಾಶ ಪ್ರಯತ್ನವಾಗಿದೆ” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭಾರತದ ನಕ್ಷೆಯಲ್ಲಿ ಪಿಒಕೆ ಸೇರಿಸಿದ ಅಮೆರಿಕ; ಪಾಕಿಸ್ತಾನಕ್ಕೆ ಬಿಸಿ ತುಪ್ಪವಾದ ಟ್ರಂಪ್

ಪಿಒಕೆಯಲ್ಲಿ ನಡೆಯುತ್ತಿರುವ ಪೊಲೀಸ್ ದಬ್ಬಾಳಿಕೆಯ ಬಗ್ಗೆ ಮಾತನಾಡಿದ ರಣಧೀರ್ ಜೈಸ್ವಾಲ್, “ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭೀಕರ ಪೊಲೀಸ್ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ವರದಿಗಳು ಬಂದಿವೆ. ಇದರಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ದುಷ್ಕೃತ್ಯಗಳು ಮತ್ತು ದೌರ್ಜನ್ಯಗಳ ವಿರುದ್ಧ ಅದನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದಿದ್ದಾರೆ.

“ಪಾಕಿಸ್ತಾನ ಸರ್ಕಾರವು ರಾವಲಕೋಟ್‌ನಲ್ಲಿ ನಮ್ಮ ಜನರ ಮಾರಣಹೋಮವನ್ನು ಪ್ರಾರಂಭಿಸಿದೆ” ಎಂದು ಜೆಎಎಸಿ (JAAC) ನಾಯಕ ಶೌಕತ್ ನವಾಜ್ ಮಿರ್ ಎಕ್ಸ್ (ಟ್ವಿಟ್ಟರ್) ನಲ್ಲಿ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಆರೋಪಿಸಿದ್ದಾರೆ. ಇಂದು ಸಂಪೂರ್ಣ ಲಾಕ್‌ಡೌನ್ ಯಶಸ್ವಿಗೊಳಿಸಲು ತಮ್ಮ ಗುಂಪು ಒಗ್ಗಟ್ಟಾಗಿರಲಿದೆ ಎಂದು ಅವರು ಪ್ರತಿಜ್ಞೆ ಮಾಡಿದ್ದರು.

ಇದನ್ನೂ ಓದಿ: ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನದಿಂದ ಗುಂಡಿನ ದಾಳಿ; 30 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

ರಾವಲಕೋಟ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಭೀಕರ ದಮನಕಾಂಡದ ನಂತರವೂ ಉದ್ವಿಗ್ನತೆ ಮುಂದುವರಿದಿದ್ದು, ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಜಗತ್ತಿನ ಗಮನವನ್ನು ಬೇರೆಡೆಗೆ ತಿರುಗಿಸಲು ಪಾಕಿಸ್ತಾನವು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಗಳನ್ನು ಹರಡುತ್ತಿದೆ ಎಂದು ಭಾರತ ಇಂದು ಆರೋಪಿಸಿದೆ.

ಇತ್ತೀಚಿನ ಪ್ರತಿಭಟನೆಗಳ ವೇಳೆ ಪಾಕಿಸ್ತಾನಿ ಪಡೆಗಳು ಜಾಯಿಂಟ್ ಅವಮಿ ಆಕ್ಷನ್ ಕಮಿಟಿ (JAAC) ಗೆ ಸೇರಿದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು, 30 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಜೆಎಎಸಿ ಕಾರ್ಯಕರ್ತರು ಕಿರಿದಾದ ಗಲ್ಲಿಗಳಿಂದ ಬಂದೂಕುಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಬಳಸಿ “ಗೆರಿಲ್ಲಾ ಮಾದರಿ” ದಾಳಿ ನಡೆಸಿದ್ದರಿಂದ ತಾವು ಈ ಕ್ರಮ ಕೈಗೊಂಡಿರುವುದಾಗಿ ಪಾಕಿಸ್ತಾನಿ ಪಡೆಗಳು ಸಮರ್ಥಿಸಿಕೊಂಡಿವೆ.

ಪಾಕಿಸ್ತಾನ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದರೂ, ಪ್ರತಿಭಟನೆಗಳು ಮೀರ್‌ಪುರ, ಮುಜಾಫರಾಬಾದ್, ಗಿಲ್ಗಿಟ್-ಬಾಲ್ಟಿಸ್ತಾನ್, ದಡಿಯಾಲ್, ರಾವಲಕೋಟ್, ಸುಧ್ನೋತಿ ಮತ್ತು ತಟ್ಟಾಪಾನಿ ಭಾಗಗಳಿಗೆ ವ್ಯಾಪಿಸಿವೆ. ಈ ಪ್ರತಿಭಟನೆಯ ಕಿಚ್ಚು ಬ್ರಿಟನ್ ವರೆಗೂ ತಲುಪಿದ್ದು, ಅಲ್ಲಿನ ಕಾಶ್ಮೀರಿ ವಲಸಿಗರು ಲಂಡನ್‌ನಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ಹೊರಗೆ ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. 30 ಬ್ರಿಟಿಷ್ ಸಂಸದರು ಬ್ರಿಟನ್ ಸರ್ಕಾರಕ್ಕೆ ಪತ್ರ ಬರೆದಿದ್ದು, “ರಾಜತಾಂತ್ರಿಕ ಮಾರ್ಗಗಳನ್ನು ಬಳಸಿ ಈ ಪರಿಸ್ಥಿತಿಯನ್ನು ಶಾಂತಿಯುತವಾಗಿ ಬಗೆಹರಿಸಲು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನಕ್ಕೆ ಪ್ರೋತ್ಸಾಹ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More