Gautam Raghavan: ಭಾರತ ಮೂಲದ ಗೌತಮ್ ರಾಘವನ್ರನ್ನು ಉನ್ನತ ಹುದ್ದೆಗೆ ನೇಮಕ ಮಾಡಿದ ಅಮೆರಿಕ ಅಧ್ಯಕ್ಷ; ಯಾರು ಈ ರಾಘವನ್?
ಗೌತಮ್ ರಾಘವನ್ ಮೊದಲ ಪೀಳಿಗೆಯ ವಲಸಿಗರ ಸಾಲಿಗೆ ಸೇರಿದವರು. ಇವರು ಭಾರತದಲ್ಲಿಯೇ ಹುಟ್ಟಿದ್ದರೂ ಬೆಳೆದಿದ್ದು ಯುಎಸ್ನ ಸಿಯಾಟಲ್ನಲ್ಲಿ.
ವಾಷಿಂಗ್ಟನ್: ಜೋ ಬೈಡನ್ (Joe Biden) ಅಮೆರಿಕ ಅಧ್ಯಕ್ಷರಾದ ಮೇಲೆ ಸರ್ಕಾರದ ಹಲವು ಉನ್ನತ ಹುದ್ದೆಗಳಲ್ಲಿ ಭಾರತೀಯ ಮೂಲದ ಅಮೆರಿಕನ್ನರಿಗೆ ಸ್ಥಾನ ಸಿಕ್ಕಿದೆ. ಬಹುಮುಖ್ಯವಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತೀಯ ಮೂಲದವರೇ ಆಗಿದ್ದಾರೆ. ಹೀಗೆ ಉನ್ನತ ಹುದ್ದೆ ಅಲಂಕರಿಸಿದವರಲ್ಲಿ ಒಬ್ಬರಾಗಿದ್ದ ಭಾರತ ಮುಲದ ಗೌತಮ್ ರಾಘವನ್ (Gautam Raghavan) ಅವರನ್ನು ಇದೀಗ ಒಂದು ಹೊಸ ಮತ್ತು ಬಹುಮುಖ್ಯ ಹುದ್ದೆಗೆ ನೇಮಕ ಮಾಡುವ ಮೂಲಕ ಅವರಿಗೆ ಬಡ್ತಿ ನೀಡಲಾಗಿದೆ. ವೈಟ್ ಹೌಸ್ (US White House)ನ ಅಧ್ಯಕ್ಷೀಯ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ಗೌತಮ್ ರಾಘವನ್ ಅವರ ನೇಮಕಾತಿಯನ್ನು ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ. ಈ ಮೊದಲು ವೈಟ್ ಹೌಸ್ನ ಅಧ್ಯಕ್ಷೀಯ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಕ್ಯಾಥಿ ರಸೆಲ್ ಅವರನ್ನು ಯುನಿಸೆಫ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಕ ಮಾಡಿ ಯುಎನ್ ಕಾರ್ಯದರ್ಶಿ ಅಂಟೋನಿಯೋ ಗುಟರಸ್ ಅವರು ಆದೇಶ ಹೊರಡಿಸಿದ ಬೆನ್ನಲ್ಲೇ, ತೆರವಾದ ಸ್ಥಾನಕ್ಕೆ ರಾಘವನ್ ಆಯ್ಕೆ ಆಗಿದ್ದಾರೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಜೋ ಬೈಡನ್, ಗೌತಮ್ ರಾಘವನ್ ಅವರು ಕ್ಯಾಥಿಯವರೊಂದಿಗೆ ಒಂದನೇ ದಿನದಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರು ಇನ್ನು ಮುಂದೆ ಪಿಪಿಒ(Office of Presidential Personnel)ದ ಮುಂದಿನ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಸಮರ್ಥ, ದಕ್ಷವಾಗಿ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಕಾರ್ಯಪಡೆ ನಿರ್ಮಾಣದ ಕೆಲಸ ಮುಂದುವರಿಸಲು ಅವರಿಗೆ ಅನುವು ಮಾಡಿಕೊಡಲಾಗುವುದು ಎಂದಿದ್ದಾರೆ. ಅಂದಹಾಗೆ, ರಾಘವನ್ ಇಷ್ಟು ದಿನ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕ ಮತ್ತು ಅಮೆರಿಕ ಅಧ್ಯಕ್ಷರ ಉಪ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಗೌತಮ್ ರಾಘವನ್ ಎಲ್ಜಿಬಿಟಿಕ್ಯೂ ಸಮುದಾಯದವರು ಗೌತಮ್ ರಾಘವನ್ ಮೊದಲ ಪೀಳಿಗೆಯ ವಲಸಿಗರ ಸಾಲಿಗೆ ಸೇರಿದವರು. ಇವರು ಭಾರತದಲ್ಲಿಯೇ ಹುಟ್ಟಿದ್ದರೂ ಬೆಳೆದಿದ್ದು ಯುಎಸ್ನ ಸಿಯಾಟಲ್ನಲ್ಲಿ. ಸ್ಟ್ಯಾಂಡ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಅಧ್ಯಕ್ಷರ ಸ್ಥಾನ ಮತ್ತು ಅಧ್ಯಕ್ಷೀಯ ಸಿಬ್ಬಂದಿಯ ವೈಯಕ್ತಿಕ ನೋಟವನ್ನು ನೀಡುವ ವೆಸ್ಟ್ ವಿಂಗರ್ಸ್: ಸ್ಟೋರೀಸ್ ಫ್ರಾಂ ಡ್ರೀಂ ಚೀಸರ್ಸ್, ಚೇಂಜ್ ಮೇಕರ್ಸ್ ಆ್ಯಂಡ್ ಹೋಪ್ ಕ್ರಿಯೇಟರ್ಸ್ ಇನ್ಸೈಡ್ ದಿ ಒಬಾಮಾ ವೈಟ್ ಹೌಸ್ ಎಂಬ ಪುಸ್ತಕದ ಸಂಪಾದಕರೂ ಆಗಿದ್ದಾರೆ. ಇನ್ನೂ ಮುಖ್ಯವಾಗಿ ರಾಘವನ್ ಒಬ್ಬರು ಎಲ್ಜಿಬಿಟಿಕ್ಯೂ ಸಮುದಾಯದಕ್ಕೆ ಸೇರಿದವರಾಗಿದ್ದು, ಯುಎಸ್ನ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ, ಇವರು ಎಲ್ಜಿಬಿಟಿಕ್ಯೂ ಮತ್ತು ಏಷ್ಯನ್ ಅಮೆರಿಕನ್, ಫೆಸಿಪಿಕ್ ಐಲ್ಯಾಂಡರ್ ಸಮುದಾಯಕ್ಕೆ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:Omicron: ದೆಹಲಿಯಲ್ಲಿ ಇನ್ನೊಂದು ಒಮಿಕ್ರಾನ್ ಕೇಸ್ ದಾಖಲು; ಭಾರತದಲ್ಲೀಗ ಹೊಸ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ