ಸಿಯಾಂಜೂರ್: ಇಂಡೋನೇಷ್ಯಾದ (Indonesia Earthquake) ಪಶ್ಚಿಮ ಜಾವಾದಲ್ಲಿ ನವೆಂಬರ್ 21ರಂದು ಪ್ರಬಲ ಭೂಕಂಪ ಸಂಭವಿಸಿತ್ತು. ಈ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ. ಈ ಭೂಕಂಪದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ರಕ್ಷಣಾ ಕಾರ್ಯಾಚರಣೆ (Rescue Operation) ನಡೆಯುತ್ತಲೇ ಇದೆ. ಇದೀಗ 7 ವರ್ಷದ ಇಂಡೋನೇಷ್ಯಾದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಮೃತ ಬಾಲಕಿಯ ದೇಹವನ್ನು ತಕ್ಷಣವೇ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸೋಮವಾರದ ಭೂಕಂಪದಿಂದ ಉಂಟಾದ ಭೂಕುಸಿತಗಳು ಟನ್‌ಗಟ್ಟಲೆ ಮಣ್ಣು, ಬಂಡೆಗಳು ಮತ್ತು ಮುರಿದ ಮರಗಳನ್ನು ತಂದ ಪರ್ವತಮಯ ಸಿಯಾಂಜೂರ್ ಜಿಲ್ಲೆಯ 2 ಪ್ರದೇಶಗಳಲ್ಲಿ ಶುಕ್ರವಾರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಹೆನ್ರಿ ಅಲ್ಫಿಯಾಂಡಿ ತಿಳಿಸಿದ್ದಾರೆ.
ಇದನ್ನೂ ಓದಿ: Indonesia Earthquake: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಸಾವಿನ ಸಂಖ್ಯೆ 162ಕ್ಕೆ ಏರಿಕೆ!
2,000ಕ್ಕೂ ಹೆಚ್ಚು ಜನರು ಗಾಯಗೊಂಡಿರುವ 5.6 ತೀವ್ರತೆಯ ಭೂಕಂಪದ ನಂತರ 1,400ಕ್ಕೂ ಹೆಚ್ಚು ರಕ್ಷಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವವರಿಗಾಗಿ ಇನ್ನೂ ಹುಡುಕುತ್ತಿದ್ದಾರೆ. ಈ ಭೂಕಂಪದಿಂದ ಕನಿಷ್ಠ 56,000 ಮನೆಗಳಿಗೆ ಹಾನಿಯಾಗಿದೆ. ಸುಮಾರು 36,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ನವೆಂಬರ್ 21ರ ಮಧ್ಯಾಹ್ನ ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ 5.6 ತೀವ್ರತೆಯ ಭೂಕಂಪವು ಸಂಭವಿಸಿತ್ತು. ಈ ಭೂಕಂಪವು ರಾಜಧಾನಿ ಜಕಾರ್ತಾದಿಂದ ಆಗ್ನೇಯಕ್ಕೆ 75 ಕಿ.ಮೀ ದೂರದಲ್ಲಿರುವ ಸಿಯಾಂಜೂರ್‌ನಲ್ಲಿ ಮತ್ತು 10 ಕಿ.ಮೀ ಆಳದಲ್ಲಿ ಸಂಭವಿಸಿತ್ತು. ಅದರ ಪರಿಣಾಮ ಇನ್ನೂ ಕಡಿಮೆಯಾಗಿಲ್ಲ.